ದೇವನಹಳ್ಳಿ ಕೋಟೆ ಬಳಿಯ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ರಸ್ತೆ ದಾಟದಂತೆ ತಾತ್ಕಾಲಿಕ ತಡೆಗೋಡೆ ನಿರ್ಮಿಸಲು ಮುಂದಾದ ಸಂಚಾರ ವಿಭಾಗದ ಪೊಲೀಸರು ಮತ್ತು ಸಾರ್ವಜನಿಕರ ನಡುವೆ ವಾಗ್ವಾದ ಉಂಟಾಯಿತು.
ದೇವನಹಳ್ಳಿ : ಬೆಂಗಳೂರು&ಹೈದರಾಬಾದ್ ಸಂಪರ್ಕದ ರಾಷ್ಟ್ರೀಯ ಹೆದ್ದಾರಿ 44 ಹಾದುಹೋಗಿರುವ ದೇವನಹಳ್ಳಿ ಕೋಟೆ ಬಳಿಯ ಬೈಪಾಸ್ನಲ್ಲಿ ನಿತ್ಯ ಸಂಭವಿಸುವ ಅಪಘಾತ ಪ್ರಕರಣಗಳ ತಡೆಗಾಗಿ ಸಿಗ್ನಲ್ ಅಳವಡಿಸಬೇಕೆಂಬ ಸಾರ್ವಜನಿಕರ ಒತ್ತಾಯಕ್ಕೆ ಸಂಚಾರ ವಿಭಾಗದ ಪೊಲೀಸರು ಸಮ್ಮತಿ ವ್ಯಕ್ತಪಡಿಸಿದ್ದಾರೆ.
ಈ ಬೈಪಾಸ್ನಲ್ಲಿ ತಿಂಗಳಿಗೆ ಕನಿಷ್ಠ ಮೂರು&ನಾಲ್ಕು ಜೀವ ಬಲಿಯಾಗುತ್ತಿರುವ ಕಾರಣ ಸಂಚಾರ ವಿಭಾಗದ ಪೊಲೀಸರು, ಪಟ್ಟಣ ಮಾರ್ಗವಾಗಿ ಹಕ್ಕುಪೇಟೆ, ಬೊಮ್ಮವಾರದ ಕಡೆ ತೆರಳಲು ಹೆದ್ದಾರಿ ದಾಟುವ ಮಾರ್ಗವನ್ನೇ ಮಂಗಳವಾರ ಬಂದ್ ಮಾಡಲು ಮುಂದಾದಾಗ ಸುತ್ತಮುತ್ತಲ ಗ್ರಾಮಸ್ಥರು, ಸಾರ್ವಜನಿಕರು ಜಮಾವಣೆಗೊಂಡು ತಡೆವೊಡ್ಡಿದರು. ಈ ವೇಳೆ ಪುರಸಭೆ ಮಾಜಿ ಸದಸ್ಯ ಎಸ್.ನಾಗೇಶ್ ಮಾತನಾಡಿ, ಹೆದ್ದಾರಿಯ ಈ ಬೈಪಾಸ್ ರಸ್ತೆಯು ಅವೈಜ್ಞಾನಿಕವಾಗಿದೆ. ಬೈಪಾಸ್ ದಾಟುವಾಗ ಸಾಕಷ್ಟು ಅಪಘಾತಗಳು ಸಂಭವಿಸುತ್ತವೆ. ಜೀವ ಹಾನಿಯಾಗುತ್ತಿದೆ. ಇಲ್ಲಿ ಅಂಡರ್ಪಾಸ್ ನಿರ್ಮಿಸಿ ಹೆದ್ದಾರಿಯಿಂದ ಸರ್ವೀಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ಮೂಲಕ ಸುತ್ತಮುತ್ತಲ ಗ್ರಾಮಸ್ಥರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಇದರಿಂದ ಅಪಘಾತಗಳನ್ನು ತಡೆಗಟ್ಟಬಹುದೇ ವಿನಾ ಇನ್ನಾವುದರಿಂದಲೂ ಸಾಧ್ಯವಿಲ್ಲ ಎಂದರು.
ಈ ಮಾರ್ಗದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ, ಅರಣ್ಯ ಇಲಾಖೆ, ಇತಿಹಾಸ ಪ್ರಸಿದ್ಧ ಸುಂದರೇಶ್ವರ ದೇವಾಲಯ ಇದ್ದು, ಪಟ್ಟಣದ 23 ನೇ ವಾರ್ಡ್ನ ಕೋಡಿ ಮಂಚೇನಹಳ್ಳಿ, ಹಕ್ಕುಪೇಟೆ, ಬೊಮ್ಮವಾರ, ಕುಂದಾಣ ಸೇರಿ ಹತ್ತಾರು ಗ್ರಾಮಗಳಿಗೆ ಸುಲಭ ಸಂಪರ್ಕ ರಸ್ತೆಯಾಗಿದೆ. ಈಗ ಈ ರಸ್ತೆ ಮಾರ್ಗವಾಗಿವಾಹನಗಳು ಹಾದುಹೋಗದಂತೆ ತಡೆವೊಡ್ಡಿದರೆ ಹತ್ತಾರು ಕಿ.ಮೀ ಸುತ್ತಿ ಬಳಸಿ ಬರಬೇಕಾಗುತ್ತದೆ. ಇಂಧನ ಬೆಲೆ ದುಬಾರಿಯಾಗಿರುವ ಸಂಕಷ್ಟ ಒಂದೆಡೆಯಾದರೆ, ಸಮಯವೂ ವ್ಯರ್ಥವಾಗುತ್ತದೆ. ಹಾಗಾಗಿ ಇಲ್ಲಿ ಅಂಡರ್ ಪಾಸ್ ಅಥವಾ ಸಿಗ್ನಲ್ ಅಳವಡಿಸಿ ಜೀವ ಉಳಿಸುವ ಕೆಲಸ ಮಾಡಿ ಎಂದರು.
ಪರಸ್ಪರ ವಾಗ್ವಾದ : ಪುರಸಭೆ ಮಾಜಿ ಸದಸ್ಯ ಸೊಸೈಟಿ ಕುಮಾರ್ ಮಾತನಾಡಿ, ನಿತ್ಯ ಪಟ್ಟಣಕ್ಕೆ ಬಂದು ಹೋಗಲು ಈ ಭಾಗದ ಜನ ಇದೇ ರಸ್ತೆ ಅವಲಂಬಿಸಿದ್ದಾರೆ. ಅಪಘಾತ ತಡೆಯಬೇಕೆಂದರೆ ಮೊದಲು ಇಲ್ಲಿ ಸಿಗ್ನಲ್ ಹಾಕಿ ಎಂದು ಹಲವಾರು ಬಾರಿ ಮನವಿ ಮಾಡಲಾಗಿದೆ. ಇದು ಸಂಚಾರ ವಿಭಾಗದ ಪೊಲೀಸರಿಗೆ ಅಂತಿಮ ಗಡುವು. ಅವರಿಂದ ಸಿಗ್ನಲ್ ಹಾಕಿಸಲಾಗದಿದ್ದರೆ ಸಾರ್ವಜನಿಕರೇ ಹಣ ಸಂಗ್ರಹಿಸಿ ಇಲ್ಲಿ ಸಿಗ್ನಲ್ ದೀಪಗಳನ್ನು ಅಳವಡಿಸಲು ತೀಮಾರ್ನಿಸಿದ್ದೇವೆ ಎಂದರು.
ಈ ವೇಳೆ ಕೆಲ ಹೊತ್ತುಸಂಚಾರ ಪೊಲೀಸರು ಮತ್ತು ಸಾರ್ವಜನಿಕರ ನಡುವೆ ವಾಗ್ವಾದ ನಡೆದು ಅಂತಿಮವಾಗಿ ಇನ್ಸ್ಪೆಕ್ಟರ್ ಮುರಳೀಧರ್ ರಸ್ತೆ ತಡೆಯುವ ನಿರ್ಧಾರದಿಂದ ಹಿಂದೆ ಸರಿದು, ಆದಷ್ಟು ಬೇಗ ಇಲ್ಲಿ ಸಿಗ್ನಲ್ ಅಳವಡಿಸಲಾಗುವುದು ಎಂದರು.