ರಾಯಚೂರು ಕೃಷಿಗೆ ನೀರಾವರಿ ಯೋಜನೆಗೆ ನೀರು ಒದಗಿಸಲು ಸೇರಿದಂತೆ ವಿವಿಧ ಬೇಡಿಕೆಗಳು ಈಡೇರಿಕೆಗೆ ಒತ್ತಾಯಿಸಿ ಮಾ.6 ರಂದು ಬೆಂಗಳೂರಿನಲ್ಲಿ ವಿಧಾನಸೌದ ಮುತ್ತಿಗೆ ಹಾಕಲಾಗುತ್ತದೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಜಿಲ್ಲಾಧ್ಯಕ್ಷ ನರಸಿಂಹ ನಾಯಕ ಕಮಲಾಪೂರು ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜಲಬಂಡಾ ಆಣೆಕಟ್ಟಿನಿಂದ ತುಂಗಭದ್ರಾ ಕಾಲುವಿಯ ಕೊನೆಯ ಭಾಗದ ಟಿಬಿ ಕಾಲುವೆಯ 102 ಹಾಗೂ 103 ರಲ್ಲಿ ಸಂಪರ್ಕ ಕಲ್ಪಿಸುವ ಏತ ನೀರಾವರಿ ಯೋಜನೆಯನ್ನು ಮಂಜೂರು ಮಾಡಬೇಕು. ಡಿ. ರಾಂಪೂರು ಗ್ರಾಮದಿಂದ ವಡ್ಡೆಪಲ್ಲಿ ಗ್ರಾಮದ ಜಮೀನುಗಳಿಗೆ ನೀರು ಒದಗಿಸಲು ಏತನೀರಾವರಿ ಯೋಜನೆಯನ್ನು ಮಂಜೂರು ಮಾಡಬೇಕು.
ಜಿಲ್ಲೆಯಲ್ಲಿ ರೈತರ ಜಮೀನುಗಳ ಅಕ್ರಮ ವರ್ಗಾವಣೆಗಳನ್ನು ಮಾಡುವವರ ಮೇಲೆ ಕ್ರಮಗಳನ್ನು ಜರುಗಿಸಬೇಕು. ಯರಮರಸ್ ಸರ್ಕಾರಿ ನೂಲಿನ ಗಿರಿಣಿಯನ್ನು ಅಭಿವೃದ್ಧಿ ಪಡಿಸಬೇಕು. ಹತ್ತಿ ಮತ್ತು ಮೆಣಸಿನಕಾಯಿ ಬೆಳೆಗಳ ಅಭಿವೃದ್ಧಿ ಮಂಡಳಿಗಳನ್ನು ಸ್ಥಾಪಿಸಬೇಕು. ಪ್ರಸಕ್ತ ವರ್ಷದಲ್ಲಿ ಟಿ.ಬಿ.ಪಿ. ಕಾಲುವೆ ಬೇಸಿಗೆ ಬೆಳೆಗೆ ಬಂದ್ ಮಾಡಿರುವುದರಿಂದ ರೈತರಿಗೆ ಮತ್ತು ಕೂಲಿಕಾರರಿಗೆ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೂಲಿ ಕೆಲಸಗಳನ್ನು ಒದಗಿಸಲು ಸೇರಿದಂತೆ ವಿವಿಧ ಬೇಡಿಕೆಗಳ ಪರಿಹಾರಕ್ಕಾಗಿ ಒತ್ತಾಯಿಸಿ ಮುತ್ತಿಗೆ ಹಾಕಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಮಲ್ಲನಗೌಡ, ಧರ್ಮರೆಡ್ಡಿ, ಶಿವಶರಣ ಸಾಹುಕಾರ, ನರಸಿಂಹ ರೆಡ್ಡಿ , ಗೋವಿಂದ ನಾಯಕ ಇದ್ದರು.