ಸಿಎಂ ಸಿದ್ದರಾಮಯ್ಯ-ಡಿಕೆ ಶಿವಕುಮಾರ್
- ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಜೋರು
- 'ವರ್ಡ್ ಪವರ್'ಗೆ ಸಿಎಂ ಪವರ್ಫುಲ್ ಪಂಚ್
- 5 ಯೋಜನೆಗಳನ್ನು ಉಲ್ಲೇಖಿಸಿ ಟಕ್ಕರ್
ಬೆಂಗಳೂರು: ಸದ್ಯ ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಬಲು ಜೋರಾಗಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಮಧ್ಯೆ ತೆರೆಮರೆಯಲ್ಲಿ ಕುರ್ಚಿಗಾಗಿ ಹಗ್ಗ-ಜಗ್ಗಾಟ ಬಿರುಸಿನಿಂದ ಸಾಗುತ್ತಿದೆ. ಮಾತಿಗೆ ಮಾತು, ಏಟಿಗೆ ಎದುರೇಟು ಎಂಬಂತೆ ಇಬ್ಬರು ನಾಯಕರ ನಡುವೆ ಪರಸ್ಪರ ಟಕ್ಕರ್ಗಳು ನಡೆಯುತ್ತಿವೆ.
ಇದೆಲ್ಲದರ ನಡುವೆಯೇ ಇಂದು ಬೆಳಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಗುರುವಾರ ಮಾರ್ಮಿಕ ಪೋಸ್ಟ್ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು. ಇದು ತೀವ್ರ ಚರ್ಚೆಗೆ ಗ್ರಾಸವಾಗಿದೆ. "ಪದ ಶಕ್ತಿಯೇ ವಿಶ್ವ ಶಕ್ತಿ. (ವರ್ಡ್ ಪವರ್ ಈಸ್ ವರ್ಲ್ಡ್ ಪವರ್) ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಜಗತ್ತಿನ ಅತಿದೊಡ್ಡ ಶಕ್ತಿ. ನ್ಯಾಯಾಧೀಶರಾಗಲಿ, ಅಧ್ಯಕ್ಷರಾಗಲಿ ಅಥವಾ ನಾನು ಸೇರಿದಂತೆ ಬೇರೆ ಯಾರೇ ಆಗಿರಲಿ, ಎಲ್ಲರೂ ಹೇಳಿದಂತೆ ನಡೆಯಬೇಕು. ಪದ ಶಕ್ತಿಯೇ ವಿಶ್ವ ಶಕ್ತಿ" ಎಂದು ಡಿಕೆಶಿ ತಮ್ಮ ಎಕ್ಸ್ ಖಾತೆಯಲ್ಲಿ ಮಾರ್ಮಿಕವಾಗಿ ಹಂಚಿಕೊಂಡರು.
'ವರ್ಡ್ ಪವರ್'ಗೆ ಸಿಎಂ ಪವರ್ಫುಲ್ ಪಂಚ್
ಡಿಕೆಶಿ ಬೆನ್ನಲ್ಲೇ ಟ್ವೀಟ್ ಮಾಡಿರುವ ಸಿಎಂ, "ಒಂದು ಮಾತು ಜಗತ್ತಿಗೆ ಒಳಿತು ಮಾಡಲಿಲ್ಲ ಎಂದರೆ ಖಂಡಿತ ಅದೊಂದು ಶಕ್ತಿಯಲ್ಲ. ಶಕ್ತಿ ಯೋಜನೆಯು ನಮ್ಮ ರಾಜ್ಯದ ಮಹಿಳೆಯರಿಗೆ 600 ಕೋಟಿಗೂ ಹೆಚ್ಚು ಉಚಿತ ಪ್ರವಾಸಗಳನ್ನು ತಲುಪಿಸಿದೆ ಎಂದು ಹೇಳಲು ನನಗೆ ಹೆಮ್ಮೆಯಿದೆ. ಸರ್ಕಾರವನ್ನು ರಚಿಸಿದ ಮೊದಲ ತಿಂಗಳಿನಿಂದಲೇ, ನಾವು ನಮ್ಮ ಭರವಸೆಗಳನ್ನು ಕಾರ್ಯರೂಪಕ್ಕೆ ತಂದಿದ್ದೇವೆ. ಅದು ಪದಗಳಲ್ಲಿ ಅಲ್ಲ" ಎಂದಿದ್ದಾರೆ.
ಐದು ಯೋಜನೆಗಳ ಉಲ್ಲೇಖ
- ಶಕ್ತಿ - 600 ಕೋಟಿಗೂ ಹೆಚ್ಚು ಉಚಿತ ಪ್ರವಾಸಗಳು, ದುಡಿಯುವ ಮಹಿಳೆಯರಿಗೆ ಘನತೆ ಮತ್ತು ಚಲನಶೀಲತೆಯನ್ನು ಪುನಃಸ್ಥಾಪಿಸುವುದು.
- ಗೃಹಲಕ್ಷ್ಮಿ - 1.24 ಕೋಟಿ ಮಹಿಳಾ ನೇತೃತ್ವದ ಕುಟುಂಬಗಳಿಗೆ ಸಬಲೀಕರಣ.
- ಯುವನಿಧಿ - 3 ಲಕ್ಷಕ್ಕೂ ಹೆಚ್ಚು ಯುವಕರಿಗೆ ಭದ್ರತೆ ಮತ್ತು ಭರವಸೆಯೊಂದಿಗೆ ಬೆಂಬಲ ನೀಡಲಾಗಿದೆ.
- ಅನ್ನಭಾಗ್ಯ 2.0 - 4.08 ಕೋಟಿ ನಾಗರಿಕರಿಗೆ ಆಹಾರ ಭದ್ರತೆ.
- ಗೃಹ ಜ್ಯೋತಿ - 1.64 ಕೋಟಿ ಕುಟುಂಬಗಳಿಗೆ ಉಚಿತ ವಿದ್ಯುತ್.
"ನನ್ನ ಮೊದಲ ಅವಧಿಯಲ್ಲಿ (2013–18), 165 ಭರವಸೆಗಳಲ್ಲಿ 157 ಅಂದರೆ ಶೇ.95ಕ್ಕಿಂತ ಹೆಚ್ಚು ಈಡೇರಿವೆ. ಈ ಅವಧಿಯಲ್ಲಿ, 593 ಭರವಸೆಗಳಲ್ಲಿ 243ಕ್ಕೂ ಅಧಿಕ ಭರವಸೆಗಳು ಈಗಾಗಲೇ ಪೂರ್ಣಗೊಂಡಿವೆ ಮತ್ತು ಉಳಿದಿರುವ ಪ್ರತಿಯೊಂದು ಭರವಸೆಯನ್ನು ಬದ್ಧತೆ, ವಿಶ್ವಾಸಾರ್ಹತೆ ಮತ್ತು ಕಾಳಜಿಯೊಂದಿಗೆ ಪೂರೈಸಲಾಗುವುದು. ರಾಜ್ಯದ ಜನತೆ ನೀಡಿದ ಜನಾದೇಶವು ಒಂದು ಕ್ಷಣವಲ್ಲ. ಆದರೆ, 5 ಪೂರ್ಣ ವರ್ಷಗಳ ಜವಾಬ್ದಾರಿಯಾಗಿದೆ. ನಾನು ಸೇರಿ ಕಾಂಗ್ರೆಸ್ ಪಕ್ಷವು ನಮ್ಮ ಜನರ ಪರವಾಗಿ ಸಹಾನುಭೂತಿ, ಸ್ಥಿರತೆ ಮತ್ತು ಧೈರ್ಯದಿಂದ ನಡೆದುಕೊಳ್ಳುತ್ತಿದೆ. ಕರ್ನಾಟಕಕ್ಕೆ ನಮ್ಮ ಮಾತು ಒಂದು ಘೋಷಣೆಯಲ್ಲ, ಅದು ನಮ್ಮ ಜಗತ್ತು" ಎಂದಿದ್ದಾರೆ.