Shut down the illegal crusher located on the grazing land.
ಕೋಲಾರ ತಾಲೂಕು ಸೀತಿ ಗ್ರಾಮದ ಸರ್ವೇ ನಂ.19ರ ಸರ್ಕಾರಿ ಗೋಮಾಳ ಜಮೀನಿನಲ್ಲಿ ನಿಯಮ ಉಲ್ಲಂಘಿಸಿ ಜಲ್ಲಿ ಕ್ರಷರ್ ನಡೆಸಲಾಗುತ್ತಿದೆ ಎಂದು ಆರೋಪಿಸಿ, ಸೀತಿ, ಮಾರ್ಜೇನಹಳ್ಳಿ, ಮಠಪುರ ಗ್ರಾಮಸ್ಥರು ಶಾಸಕ ಕೊತ್ತೂರು ಮಂಜುನಾಥ್ ಹಾಗೂ ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್ಗೆ ಮನವಿ ಸಲ್ಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಹೊಸಕೋಟೆ ಮೂಲದ ವ್ಯಕ್ತಿಯ ಮಾಲೀಕತ್ವದಲ್ಲಿ ಕ್ರಷರ್ ಘಟಕ ನಿರ್ಮಿಸಲಾಗಿದ್ದು, 6 ಎಕರೆಯಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿ ಪಡೆದು ಸುಮಾರು 20 ಎಕರೆ ಗೋಮಾಳ ಜಮೀನು ಅತಿಕ್ರಮಿಸಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು.
ಮಾರ್ಜೆನಹಳ್ಳಿ ಗೇಟ್ ಬಳಿ ಶಾಸಕ ಹಾಗೂ ಎಂಎಲ್ಸಿ ಇದ್ದ ವಾಹನ ತಡೆದು ಸಮಸ್ಯೆ ಕುರಿತು ಮನವಿ ಸಲ್ಲಿಸಲು ಮುಂದಾದ ವೇಳೆ ಬೆಂಗಾವಲು ವಾಹನದ ವೇಮಗಲ್ ಠಾಣೆ ಪೊಲೀಸರು ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಅಧಿಕಾರಿಗಳು, ಜನಪ್ರತಿನಿಧಿಗಳು ಜನರ ಸೇವೆ ಮಾಡಬೇಕೆ ಹೊರತು ದರ್ಪ ತೋರುವುದು ನ್ಯಾಯವೇ. ರಕ್ಷಣೆ ಮಾಡುವವರೇ ನಮ್ಮ ಮೇಲೆ ದಬ್ಬಾಳಿಕೆ ಮಾಡಿದರೆ ನಮ್ಮ ಕಷ್ಟ ಯಾರಿಗೆ ಹೇಳಬೇಕು ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಎನ್ಎಚ್ಎಐಗೆ ಸಂಬಂಧಿಸಿದ ಕಾಮಗಾರಿಗಾಗಿ ಕ್ರಷರ್ ನಡೆಸಲಾಗುತ್ತಿದ್ದು, ಕೃಷಿ ಭೂಮಿಯಿಂದ ಕೇವಲ 20 ಮೀಟರ್ ಅಂತರದಲ್ಲಿ ಕ್ರಷರ್ ಯಂತ್ರ ಅಳವಡಿಸಿರುವುದರಿಂದ ಸುತ್ತಮುತ್ತಲಿನ ಗ್ರಾಮಗಳಿಗೆ ಧೂಳು ವ್ಯಾಪಿಸಿ ಬೆಳೆಗಳಿಗೆ ಹಾನಿಯಾಗುತ್ತಿದೆ. ಕಲ್ಲು ಸ್ಫೋಟದಿಂದ ಮನೆಗಳು, ಕೊಳವೆ ಬಾವಿಗಳಿಗೆ ಹಾನಿಯಾಗುವ ಆತಂಕವಿದ್ದು, ಜಿಂಕೆ, ಮೊಲ, ನವಿಲು ಸೇರಿದಂತೆ ವನ್ಯಜಿವಿಗಳಿಗೂ ತೊಂದರೆಯಾಗುತ್ತಿದೆ ಅಳಲು ತೋಡಿಕೊಂಡರು.
ಜಾನುವಾರುಗಳು ಓಡಾಡುವ ರಸ್ತೆಗೆ ತಡೆಗೋಡೆ ನಿರ್ಮಿಸಿ, ರಸ್ತೆ ಮಧ್ಯೆಯೇ ಯಂತ್ರಗಳನ್ನು ಅಳವಡಿಸಿಕೊಂಡು ರಾತ್ರಿ ಇಡೀ ಕ್ರಷರ್ ನಿರ್ವಹಿಸುತ್ತಿರುವುದರಿಂದ ಶಬ್ದಕ್ಕೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಕಿರಿಕಿರಿ ಉಂಟಾಗುತ್ತಿದೆ. ಕೂಡಲೇ ಕ್ರಷರ್ ಕಾರ್ಯಾಚರಣೆ ಸ್ಥಗಿತಗೊಳಿಸಿ, ಅತಿಕ್ರಮಣ ತೆರವುಗೊಳಿಸಿ, ನಿಯಮ ಉಲ್ಲಂಘನೆ ಕುರಿತು ತನಿಖೆ ನಡೆಸಿ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಶಾಸಕ ಕೊತ್ತೂರು ಮಂಜುನಾಥ್, ಈ ಕುರಿತು ತಹಸೀಲ್ದಾರ್ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ ಕ್ರಷರ್ ಕಾರ್ಯಾಚರಣೆ ನಿಲ್ಲಿಸುವಂತೆ ಕ್ರಮ ಕೈಗೊಳ್ಳಲು ಸೂಚಿಸುವುದಾಗಿ ಭರವಸೆ ನೀಡಿದರು.