ಎಪ್ಪತ್ತೆಂಬತ್ತರ ದಶಕದ ದುರ್ಭರ ದಿನಗಳವು. ಆಹಾರದ ತತ್ವಾರದ ಕಾರಣಕ್ಕೆ ಟೆನ್ತನ್ನು ಥರ್ಡ್ ಕ್ಲಾಸಲ್ಲಿ ಒಮ್ಮೆಗೆ ಪಾಸಾಗಿದ್ದು ನನ್ನ ಜೀವನದ ಬಹುದೊಡ್ಡ ಘಟನೆ. ಕೆಲವು ತಿಂಗಳು ರೈಲ್ವೆ ಇಲಾಖೆಯಲ್ಲಿ ದಿನಗೂಲಿ ಕೆಲಸ ಮಾಡಿ ಸುಸ್ತಾದೆ, ಅದೆಲ್ಲ ನನ್ನ ವಯಸ್ಸಿಗೆ ಒಗ್ಗಲಿಲ್ಲ. ಹೊಸಪೇಟೆಯಿಂದ ಕೊಟ್ಟೂರಿಗೆ ಮರಳಿದೆ. ‘ಮುಂದೇನು ಮಾಡುವಿ!’ ಅಪ್ಪ ಕೇಳಿದ ಪ್ರಶ್ನೆಗೆ ಉತ್ತರಿಸಲು ತಡವರಿಸಿದೆ.
ಸುಮಾರು ಇನ್ನೂರು ಕಿ.ಮೀ. ದೂರದಲ್ಲಿದ್ದ ತುಮಕೂರಿನ ಸಿದ್ಧಗಂಗಾ ಮಠ ನನ್ನ ಮನಸ್ಸಿನಲ್ಲಿ ಮುಳುಗೇಳುತ್ತಿತ್ತು. ಕಾರಣ ನನ್ನ ಹಲವು ಸಹಪಾಠಿಗಳು ಮಠದಲ್ಲಿ ತರಬೇತಿ ಪಡೆದು ಬಂದಿಲ್ಲಿ ಮಾಸ್ತರಿಕೆ ಆರಂಭಿಸಿದ್ದರು. ‘ಅವರಂತೆ ನಾನಲ್ಲಿಗೆ ಹೋದರೆ ಹೇಗೆ?’ ಅಂತ ಕೇಳಿದ್ದಕ್ಕೆ ಅಪ್ಪ ಆಕಾಶದ ಕಡೆ ನೋಡಿದ, ಕೈಗೆ ಹತ್ತರ ಕೆಲವು ನೋಟುಗಳನ್ನು ಇಟ್ಟು ಅಲ್ಲಿಂದ ಪುನಃ ವಾಪಸ್ಸು ಬರಬೇಡವೆಂದು ಆಶೀರ್ವದಿಸಿ ಕೆಂಪು ಬಸ್ಸು ಹತ್ತಿಸಿದ.
ಮಠವನ್ನು ತೀರಾ ಹತ್ತಿರದಲ್ಲಿ ನೋಡಿದ್ದು ಅದೇ ಮೊದಲ ಸಲ. ಪ್ರತಿ ಕ್ಷಣ ರೋಮಾಂಚನ. ಆದರೆ ಸಿದ್ಧಗಂಗಾ ಕಾಲೇಜಲ್ಲಿ ಸೀಟು ದೊರಕುವುದು ಸುಲಭವಿರಲಿಲ್ಲ. ಮಗ್ಗಿ ಬಾರದ ಕಾರಣಕ್ಕೆ ನಪಾಸಾದೆ. ನನ್ನ ಭವಿಷ್ಯ ಪೂಜ್ಯ ಸ್ವಾಮೀಜಿಯವರ ಆಶೀರ್ವಾದವನ್ನು ಅವಲಂಬಿಸಿದೆ ಎಂದು ಅರ್ಥವಾಯಿತು. ಅವರ ದರ್ಶನ ಪಡೆಯಲು ಪ್ರಯತ್ನಿಸಿದೆ, ಸಾಧ್ಯವಾಗಲಿಲ್ಲ. ಸ್ವಾಮೀಜಿ ಸಾಹಿತ್ಯಪ್ರಿಯರು. ಅದರಲ್ಲೂ ಅವರು ಸಂಸ್ಕೃತ ಅಲ್ಲದೆ ಕನ್ನಡದ ಅಭಿಜಾತ ಕೃತಿಗಳನ್ನು ಜೀರ್ಣಿಸಿಕೊಂಡಿದ್ದರು.
ಕುಮಾರವ್ಯಾಸನ ಮೂಲಕ ಶಿಫಾರಸ್ಸು ಮಾಡಿಸಿದರೆ ಹೇಗೆ ಎಂಬ ಯೋಚನೆ ಬಂತು. ಶಾಲಾ ದಿವಸಗಳಲ್ಲಿ ‘ಕರ್ಣಾಟ ಭಾರತ ಕಥಾ ಮಂಜರಿ’ಯಲ್ಲಿನ ನೂರಾರು ಪದ್ಯಗಳನ್ನು ಕಂಠಸ್ಥ ಮಾಡಿದ್ದೆ. ಅವುಗಳ ನೆರವಿನಿಂದ ನಾನು ಇಪ್ಪತ್ತಕ್ಕೂ ಹೆಚ್ಚು ಪದ್ಯಗಳನ್ನು ಭಾಮಿನಿ ಷಟ್ಪದಿಯಲ್ಲಿ ರಚಿಸಿದೆ. ಆ ನನ್ನ ಪದ್ಯಗಳ ಕಥಾನಾಯಕ ಪೂಜ್ಯ ಸ್ವಾಮೀಜಿಯವರು.
ಮೂರನೇ ಪ್ರಯತ್ನಕ್ಕೆ ಅವರ ಸಾನ್ನಿಧ್ಯದಲ್ಲಿ ನಿಲ್ಲುವ ಅವಕಾಶ ದೊರಕಿತು. ಒಂಬತ್ತನೆ ತರಗತಿಯಲ್ಲಿ ಕಾವ್ಯವಾಚನದಲ್ಲಿ ಜಿಲ್ಲೆಗೆ ಪ್ರಥಮ ಬಹುಮಾನ ಪಡೆದಿದ್ದ ನಾನು ಸ್ವರಚಿತ ಪದ್ಯಗಳನ್ನು ಗಮಕ ಶೈಲಿಯಲ್ಲಿ ಸುಶ್ರಾವ್ಯವಾಗಿ ವಾಚಿಸಿದೆ, ಆಲಿಸಿದ ಸ್ವಾಮೀಜಿ ಹತ್ತಿರ ಕರೆದು ಬೆನ್ನು ತಟ್ಟಿದರು. ಅವರ ಸ್ಪರ್ಶ ಅವಿಸ್ಮರಣೀಯ. ಮನವಿಗೆ ಸ್ಪಂದಿಸಿದ್ದು ನನ್ನ ಸೌಭಾಗ್ಯ.
ಬಿಡುಗಡೆಯಾದ ದಿನವೇ ರಾಜಕುಮಾರರ ಸಿನಿಮಾ ನೋಡುವ ಉಡಾಳ ಗುಂಪಿನ ಸದಸ್ಯನಾಗಿದ್ದೆ. ‘ಕ್ರಾಂತಿವೀರ’ ಸಿನಿಮಾ ನೋಡಲು ಮಾರ್ಜಾಲ ಶೈಲಿಯಲ್ಲಿ ಹೋಗಿ ಮರಳಿ, ಸಂಸ್ಕೃತ ಕಾಲೇಜಿನ ಕಟ್ಟೆ ಮೇಲೆ ಮಲಗಿ ನಿದ್ದೆಗೆ ಜಾರಿದೆ. ಬೆಳಗಿನ ಜಾವ ನಾಲ್ಕೂವರೆಗೆ ಎದ್ದು ಓದುವುದು ಮಠದ ಶಿಸ್ತುಗಳಲ್ಲಿ ಒಂದಾಗಿತ್ತು. ಕೆಲವೊಮ್ಮೆ ಶ್ರೀಗಳೇ ಮುಂಬೆಳಗು ಹೊತ್ತಲ್ಲಿ ನಡೆದಾಡಿ ಪರಿಶೀಲಿಸುತ್ತಿದ್ದರು. ಗಾಢನಿದ್ದೆಯಲ್ಲಿ ಕಂಡ ಕನಸಲ್ಲಿ ಪಾದುಕೆಗಳ ಟಕ್ ಟಕ್ ಸದ್ದು ಕೇಳಿಸಿದಂತೆ, ಆ ಸದ್ದಿಗೆ ಬೆಚ್ಚಿ ಎದ್ದು ಕುಳಿತು ಓದಲಾರಂಭಿಸಿದಂತೆ, ಆದರೂ ಪುನಃ ನಿದ್ರಾದೇವಿಗೆ ವಶವಾದಂತೆ, ನನ್ನ ಕಣ್ಣೆದುರು ಬುದ್ದಿಯವರು ಆಕಾಶಕ್ಕೂ ಭೂಮಿಗೂ ನಿಂತಿರುವಂತೆ!
‘ಇನ್ನೂ ಮಲಗಿರುವಿ ಏನೊ ಎನ್ನುತ್ತ’-ಸಾಕ್ಷಾತ್ ಬುದ್ದಿಯವರೇ ತಮ್ಮ ಪಾದುಕೆಯಿಂದ ನನ್ನ ಹಣೆಗೆ ಏಟು ಕೊಟ್ಟರು. ಆ ಏಟಿನ ಪ್ರಸಾದಕ್ಕೆ ಒಂದು ಕ್ಷಣ ತತ್ತರಿಸಿದೆ. ಅವರು ಪ್ರಸಾದಿಸಿದ ಏಟು ಎಷ್ಟು ಶಕ್ತಿಶಾಲಿಯಾಗಿತ್ತೆಂದರೆ ಹಣೆಯ ಬಲ ಮೇಲ್ಭಾಗದಲ್ಲಿ ಬುಗುಟೆ ಕಾಣಿಸಿಕೊಂಡಿತು. ಪ್ರಾಧ್ಯಾಪಕರು, ವಿದ್ವಾಂಸರು, ಪಂಡಿತರು ಬಂದು ಅದನ್ನು ರ್ಸ³ಸಿ ಪುಳಕಿತರಾಗುವುದು! ‘ಪಾದುಕೆ ಏಟು ತಿಂದವರು ಇಬ್ಬರು ಮಾತ್ರ, ಜಿ.ಎಸ್. ಶಿವರುದ್ರಪ್ಪ ಮತ್ತು ನೀನು, ಅವರಂತೆ ನೀನು ಸಹ ಹೆಸರಾಂತ ಸಾಹಿತಿಯಾಗುವಿ’ ಎಂದು ರೇಣುಕಾರಾಧ್ಯ ಭವಿಷ್ಯ ನುಡಿದರು.
ಆ ಬಳಿಕ ಮಠದಲ್ಲಿ ನನಗೆ ಸ್ಟಾರ್ವ್ಯಾಲ್ಯು ಪ್ರಾಪ್ತವಾಯಿತು. ನನ್ನಲ್ಲಿನ ಸೃಜನಶೀಲ ಗುಣವನ್ನು ಸಾಂದ್ರಗೊಳಿಸಿದ್ದು ಮಠದಲ್ಲಿ ಪ್ರತಿ ಸಂಜೆ ನಡೆಯುತ್ತಿದ್ದ ಸಾಮೂಹಿಕ ಪ್ರಾರ್ಥನೆ. ಅದು ನಡೆಯುತ್ತಿದ್ದುದು ಸಾಕ್ಷಾತ್ ಶ್ರೀಗಳ ಉಪಸ್ಥಿತಿಯಲ್ಲಿ, ಶ್ರೀಗಳು ಪ್ರತಿದಿವಸ ಒಂದಲ್ಲ ಒಂದು ಕಥೆಗಳನ್ನು ಹೇಳಿ, ಅವುಗಳ ಮೂಲಕ ನಮ್ಮ ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತಿದ್ದರು. ಹಲವು ರಂಗಗಳ ಸಾಧಕರು, ಮೇರು ವ್ಯಕ್ತಿಗಳನ್ನು ಮುಖಾಮುಖಿಯಾಗಿಸುತ್ತಿದ್ದರು. ಸಾಹಿತ್ಯದ ಹಲವು ಕೃತಿಗಳನ್ನು ನನ್ನೆದೆಯಲ್ಲಿ ನಾಟಿ ಮಾಡಿದ್ದು, ಕಗ್ಗಲ್ಲಿನಂತಿದ್ದ ನನ್ನನ್ನು ಕಡೆದು ಸುಂದರ ವಿಗ್ರಹವನ್ನಾಗಿಸಿ ಸಮಕಾಲೀನ ಸಮಾಜದಲ್ಲಿ ನಿಲ್ಲಿಸಿದ್ದು ಶ್ರೀಮಠವೇ. ಅಕಾಲ ಮರಣಗಳಿಂದ ರಕ್ಷಿಸಿದ್ದು ಕೂಡ ಶ್ರೀಮಠವೇ!
ತ್ರಿವಿಧ ದಾಸೋಹಿ, ನಡೆದಾಡುವ ದೇವರು ಎಂದೇ ಪ್ರಖ್ಯಾತರಾಗಿದ್ದ ಸಿದ್ದಗಂಗೆಯ ಶಿವೈಕ್ಯ ಶ್ರೀ ಶಿವಕುಮಾರ ಮಹಾಶಿವಯೋಗಿಗಳ 119ನೇ ಜಯಂತಿ ಇಂದು. ಈ ಸಂದರ್ಭದಲ್ಲಿ ಇಬ್ಬರು ಮಹನೀಯರು ಸಿದ್ಧಗಂಗೆಯ ದೇವರ ಕುರಿತು ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಅದು 1963ರ ಡಿಸೆಂಬರ್ 28-30. ಶ್ರೀ ಸಿದ್ಧಗಂಗಾ ಕ್ಷೇತ್ರದಲ್ಲಿ ಅಖಿಲ ಭಾರತ 44ನೇ ಕನ್ನಡ ಸಾಹಿತ್ಯ ಸಮ್ಮೇಳನ ವೈಭವಪೂರ್ಣವಾಗಿ ಜರುಗಿದ ಸಂದರ್ಭ. ಶ್ರೀ ಸಿದ್ಧಗಂಗಾ ಶ್ರೀಗಳು ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ದುದು ಸಮ್ಮೇಳನದ ವಿಶೇಷವಾಗಿತ್ತು. ಕನ್ನಡನಾಡಿನ ಪ್ರಖ್ಯಾತ ಸಾಹಿತಿಗಳಾದ ಡಾ.ರಂ.ಶ್ರೀ. ಮುಗಳಿ ಸಮ್ಮೇಳನಾಧ್ಯಕ್ಷರಾಗಿದ್ದರು. ನಾಡಿನ ಸಹಸ್ರಾರು ಸುಪ್ರಸಿದ್ಧ ಸಾಹಿತಿಗಳು, ಕವಿಗಳು, ಸಹೃದಯರು, ಅಭಿಮಾನಿಗಳು ಕಿಕ್ಕಿರಿದು ನೆರೆದು ಸರಸ್ವತಿಯ ಆರಾಧಕರ ಸಂಭ್ರಮ ಸಡಗರದ ನೋಟ ಅಸದೃಶವೆನಿಸಿತ್ತು.
ಸಮ್ಮೇಳನದ ಸಂಜೆಯ ಗೋಷ್ಠಿಯಲ್ಲಿ ನೆರೆದ ಜನತೆ ಅಧ್ಯಕ್ಷರು ಆಸೀನರಾದರೂ ಗುಸುಗುಸು ಗುಂಗಿನಲ್ಲಿಯೇ ಇತ್ತು. ಆಗ ಎಲ್ಲಿಯೋ ಕಾಣದಂತೆ ಕುಳಿತಿದ್ದ ಸಿದ್ಧಗಂಗಾ ಶ್ರೀಗಳು ಎದ್ದು ಹಿಂದೆ-ಮುಂದೆ ದೃಷ್ಟಿಕಾಯಕ ನಡೆಸಿದ್ದೇ ತಡ ಗುಸುಗುಸು ಮಾಯವಾಗಿತ್ತು. ನಯನ ಕಾಯಕ ಸಾಧಿಸಿದ ಪರಿ ಇದು. ಇದರಲ್ಲಿ ಮಾತಿಲ್ಲ, ಹಸ್ತಚಾಲನೆ ಇರಲಿಲ್ಲ. ಇದು ಶ್ರೀಗಳವರ ಕಾಯ ಶೋಭೆ ವ್ಯಕ್ತಿತ್ವ ಸಾಧಿಸಿದ ನಯನ ಕಾಯಕದ ಗುರಿಯು ಸಿದ್ಧಗಂಗೆಯ ಶಿವಶ್ರೀ ಸನ್ನಿಧಿಯಲ್ಲಿ ಕಾಯಕಕ್ಕೆ ನವಭಾಷ್ಯವನ್ನು ನೇಯ್ದಿತ್ತು.
ಇನ್ನೊಂದು ಪ್ರಸಂಗ. ‘ಗೋಸಲ ಶ್ರೀ’ ಪ್ರಶಸ್ತಿ ಪ್ರದಾನ ಸಂದರ್ಭ. 2014ರ ಶ್ರೀ ಸಿದ್ಧಲಿಂಗೇಶ್ವರಸ್ವಾಮಿ ಜಾತ್ರಾಮಹೋತ್ಸವ ಸಂದರ್ಭದಲ್ಲಿ ಸಿದ್ಧಗಂಗೆಯಲ್ಲಿ ನನಗೆ ‘ಗೋಸಲಶ್ರೀ’ ಪ್ರಶಸ್ತಿಯನ್ನು ಪರಮಪೂಜ್ಯರು ಪ್ರದಾನ ಮಾಡಿದರು. ವ್ಯವಸ್ಥೆಯನ್ನು ಶ್ರೀಮಠದ ಪೂರ್ವದಿಸೆಯ ಆವರಣದಲ್ಲಿನ ಸಂಸ್ಕೃತ ಪಾಠಶಾಲೆಯ ಮುಂಭಾಗದಲ್ಲಿ ಮಾಡಿದ್ದರು. ಅದು 30 ಮೆಟ್ಟಿಲುಗಳನ್ನು ದಾಟಿ ವೇದಿಕೆಗೆ ಬರುವಂಥದ್ದಾಗಿತ್ತು. ಶ್ರೀಗಳಿಗೆ 106ನೇ ವರ್ಷ. ಆದರೂ ಸರಾಗವಾಗಿ ಏರಿಬಂದು ‘ಶಾಸನ ಕೃಷಿರತ್ನ’ ಎಂದು ಆದರಿಸಿ ‘ಗೋಸಲಶ್ರೀ’ ಪ್ರಶಸ್ತಿ ಪ್ರದಾನ ಮಾಡಿ ಹರಸಿದರು. ಅದು ನನ್ನ ಶಿವಸೌಭಾಗ್ಯವಾಗಿತ್ತು.