ಡಾ. ಎಸ್.ಆರ್. ಗುಂಜಾಳ ಅವರಿಗೆ 1 ಲಕ್ಷ ನಗದು ಸಹಿತ ಸ್ಮರಣ ಫಲಕ ನೀಡಿ "ಶ್ರೀ ಮೃತ್ಯುಂಜಯ- ಮಹಾಂತ' ಪ್ರಶಸ್ತಿ ನೀಡಿ ಗೌರವಿಸಲಾಯಿತು. 
ರಾಜ್ಯ

ಶ್ರೀ ಮೃತ್ಯುಂಜಯ- ಮಹಾಂತ' ಪ್ರಶಸ್ತಿ ಪ್ರದಾನ

ಧಾರವಾಡ: ಮೃತ್ಯುಂಜಯ ಅಪ್ಪಗಳು, ಮಹಾಂತಪ್ಪಗಳ ಪ್ರತಿಯೊಂದು ನುಡಿಗಳು ಭಾವ ವಿಕಾಸದತ್ತ ಹೆಜ್ಜೆ ಇಡುವಂತೆ ಪ್ರೇರೇಪಿಸುತ್ತವೆ. ಅವುಗಳನ್ನು ಅಳವಡಿಸಿಕೊಂಡವರು ಜೀವನದಲ್ಲಿ ಮಹತ್ತರ ಸಾಧನೆ ಮಾಡುತ್ತಾರೆ ಎಂದು ಹಿರಿಯ ಸಾಹಿತಿ ಡಾ. ಎಸ್​.ಆರ್​. ಗುಂಜಾಳ ಹೇಳಿದರು.
ನಗರದ ಮುರುಘಾಮಠದಲ್ಲಿ ಶ್ರೀಮಧಥಣಿ ಮುರುಘೇಂದ್ರ ಶಿವಯೋಗಿಗಳ 96ನೇ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ "ಶ್ರೀ ಮೃತ್ಯುಂಜಯ- ಮಹಾಂತ' ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಶರಣರ, ಮಹಾತ್ಮರ ವಾಣಿಗಳು ನಮ್ಮ ಹೃದಯ ಕುಸುಮ ಅರಳಿಸಿ ನಮ್ಮನ್ನು ವಿಶ್ವಮಾನವನನ್ನಾಗಿಸುತ್ತವೆ. ಶರಣರು ಹಿಂಸೆಯನ್ನು ದೂರ ಮಾಡಲೆತ್ನಿಸಿ ಜಗತ್ತಿನಲ್ಲಿ ನಡೆಯುತ್ತಿದ್ದ ಶೋಷಣೆ ತಡೆಗೆ ಸಮಾಜೋದ್ಧಾರಕ ಕಾರ್ಯ ಮಾಡಿ ಮಾನವೀಯತೆ ಸ್ಥಾಪನೆ ಮಾಡಿದ್ದಾರೆ. ಅದನ್ನು ನಾವು ಅರ್ಥ ಮಾಡಿಕೊಂಡು ಅಳವಡಿಸಿಕೊಳ್ಳಬೇಕು. ಮನುಷ್ಯರನ್ನು ಮನುಷ್ಯರಂತೆ ಕಾಣುವ ಮನೋಭಾವನೆ ಬಿತ್ತಿದ ಮಹಾತ್ಮರ ಸದ್ವಿಚಾರಗಳು ಮಾದರಿಯಾಗಿವೆ ಎಂದರು.
ತನಗೆ ತಿಳಿಯಲಾರದ್ದನ್ನು ತಿಳಿದುಕೊಳ್ಳುವ, ತಿಳಿದದ್ದನ್ನು ತಿಳಿಸುವ ಮಹತ್ವರ್ಪೂಣ ಕಾರ್ಯವನ್ನು ಮಾಡಿದ ಅಪ್ಪಗಳ ಸೇವೆ ಸದಾ ಸ್ಮರಣೀಯವಾದುದು. ಮೃದುವಚನವೇ ಸಕಲ ಜಪ& ತಪಂಗಳು, ಸದ್ವಿನಯ ಸದಾಶಿವನೊಲುಮೆಯ ವಿಚಾರಧಾರೆಗಳನ್ನು ಕೊಟ್ಟ ಮಹಾತ್ಮರನ್ನು ನಿತ್ಯ ನೆನೆಯುವುದರ ಜತೆಗೆ ಅವುಗಳನ್ನು ಅಳವಡಿಸಿಕೊಂಡ ಕಾರಣ ನನ್ನ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು ಎಂದರು.
ಡಾ. ಮಲ್ಲಿಕಾರ್ಜುನ ಮಹಾಸ್ವಾಮೀಜಿ ನೇತೃತ್ವದಲ್ಲಿ ಡಾ. ಎಸ್​.ಆರ್​. ಗುಂಜಾಳ ಅವರಿಗೆ 1 ಲಕ್ಷ ನಗದು ಜತೆಗೆ ಸ್ಮರಣ ಫಲಕ ನೀಡಿ "ಶ್ರೀ ಮೃತ್ಯುಂಜಯ- ಮಹಾಂತ' ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇದೇವೇಳೆ ಮಠದ ಆವರಣದಲ್ಲಿ ನಿಮಿರ್ಸಿದ ನೂತನ ಕಟ್ಟಡಗಳನ್ನು ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷೆ ಶಿವಲೀಲಾ ಕುಲಕರ್ಣಿ ಲೋಕಾರ್ಪಣೆ ಮಾಡಿದರು.
ಗದಗ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಉಪ್ಪಿನಬೆಟಗೇರಿ ವಿರಕ್ತಮಠದ ಶ್ರೀ ವಿರೂಪಾಕ್ಷ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಮಠದ ಆಡಳಿತ ಮಂಡಳಿಯ ನಾಗರಾಜ ಪಟ್ಟಣಶೆಟ್ಟಿ, ಡಿ.ಬಿ. ಲಕಮನಹಳ್ಳಿ, ಇತರರಿದ್ದರು.