ಹೊಸಕೋಟೆಯ ಬ್ಲಿಂಕಿಟ್ ಮಳಿಗೆ ಮೇಲೆ ದಾಳಿ ನಡೆಸಿದ ನಗರಸಭೆ ಆಯುಕ್ತ ನೀಲಲೋಚನ ಪ್ರಭು, ಆರೋಗ್ಯ ಇಲಾಖೆಯ ಆಂಜಿನಪ್ಪ, ನಗರಸಭೆ ಸದಸ್ಯ ನಿತಿನ್ ಶ್ರೀನಿವಾಸ್ ಅವಧಿ ಮೀರಿದ ಸಿದ್ಧ ಆಹಾರ ಪದಾರ್ಥ ಪರಿಶೀಲಿಸಿದರು.
ಹೊಸಕೋಟೆ : ಆಹಾರ, ತರಕಾರಿ, ಹಣ್ಣು ಹಾಗೂ ಇತರ ಪದಾರ್ಥಗಳನ್ನು ಕೆಲವೇ ನಿಮಿಷಗಳಲ್ಲಿ ಮನೆಗೆ ಸರಬರಾಜು ಮಾಡುವ ಸಂಸ್ಥೆಯ ಮಳಿಗೆಯಿಂದ ಹಳಸಿದ, ಕೊಳೆತ ಹಾಗೂ ಅವಧಿ ಮೀರಿರುವ ಪದಾರ್ಥಗಳನ್ನು ಪಾರ್ಸೆಲ್ ನೀಡಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಸದರಿ ಮಳಿಗೆಗೆ ಬೀಗ ಜಡಿಯಲಾಗಿದೆ.
ನಗರಸಭೆ ಸದಸ್ಯ ನಿತಿನ್ ಶ್ರೀನಿವಾಸ್ ಅವರು ಆನ್ಲೈನ್ ಮೂಲಕ ಹಣ್ಣುಗಳನ್ನು ಖರೀದಿ ಮಾಡಿದ್ದರು. ಕೆಲವೇ ನಿಮಿಷಗಳಲ್ಲಿ ಹಣ್ಣು ಪೂರೈಕೆ ಮಾಡಿದ ಡೆಲಿವರಿ ಬಾಯ್ಗೆ ಹಣ ನೀಡುವ ಮುನ್ನ ಪ್ಯಾಕೆಟ್ ಚೆಕ್ ಮಾಡಿದಾಗ ಹಣ್ಣುಗಳು ಕೊಳೆತ ಸ್ಥಿತಿಯಲ್ಲಿದ್ದವು. ಕೂಡಲೇ ಡೆಲಿವರಿ ಬಾಯ್ಗೆ ತೋರಿಸಿದಕ್ಕೆ "ಸಾರ್ ಈ ಪಾಸರ್ಲ್ ವಾಪಸ್ ಪಡೆಯುತ್ತೇನೆ' ಎಂದಿದ್ದ, ಈ ಬಗ್ಗೆ ವಿತರನಾ ಸಂಸ್ಥೆಯ ಅಧಿಕಾರಿಗಳಿಗೆ ಕರೆ ಮಾಡಿದರೂ ಸ್ಪಂದಿಸದ ಕಾರಣ ನಗರಸಭೆ ಹಾಗೂ ಪೊಲೀಸರಿಗೆ ದೂರು ನೀಡಿದ್ದು, ಮಳಿಗೆ ಮೇಲೆ ದಾಳಿ ನಡೆಸಲಾಯಿತು.
ಈ ಸಂಸ್ಥೆ ವಾಣಿಜ್ಯ ವ್ಯವಹಾರಕ್ಕೆ ನಗರಸಭೆಯಿಂದ ಪರವಾನಗಿ ಪಡೆದಿಲ್ಲ, ಆಹಾರ ಪದಾರ್ಥ ಮಾರಾಟಕ್ಕೆ ಆಹಾರ ಇಲಾಖೆಯಿಂದಲೂ ಪರವಾನಿಗೆ ಪಡೆದಿಲ್ಲ ಎನ್ನಲಾಗಿದೆ. ಈ ಮೇರೆಗೆ ಸ್ಥಳಕ್ಕೆ ಬಂದು ಹಣ್ಣು, ತರಕಾರಿ, ಬ್ರೆಡ್, ಬಿಸ್ಕತ್ಗಳನ್ನು ನಗರಸಭೆ ಆಯುಕ್ತ ನೀಲಾ ಲೋಚನ ಪ್ರಭು, ಪರಿಶೀಲಿಸಿದಾಗ ಶೇ.50 ಹಣ್ಣು ಹಾಗೂ ತರಕಾರಿಗಳು ಕೊಳೆತ ಸ್ಥಿತಿಯಲಿದ್ದು, ಅದರಲ್ಲಿ ಚೆನ್ನಾಗಿ ಕಾಣುವ ತರಕಾರಿ ಹಾಗೂ ಹಣ್ಣುಗಳನ್ನು ಆನ್ಲೈನ್ ಆರ್ಡರ್ಗಳಿಗೆ ಕಳಿಸಲಾಗುತಿತ್ತು. ಅದರಲ್ಲಿ ಶೇ.50ಕ್ಕೂ ಹೆಚ್ಚು ಮಾರಾಟಕ್ಕೆ ಯೋಗ್ಯವಲ್ಲದ ಹಾಗೂ ಅವಧಿ ಮೀರಿದ ವಸ್ತುಗಳೇ ಆಗಿವೆ ಎಂಬುದು ದೃಢಪಟ್ಟಿದೆ.
ನಗರಸಭೆಯ ಆರೋಗ್ಯ ಇಲಾಖೆ ಅಧಿಕಾರಿ ಆಂಜಿನಪ್ಪ ನೇತೃತ್ವದಲ್ಲಿ ಸಂಸ್ಥೆಯ ಮಳಿಗೆಗೆ ಬೀಗ ಜಡಿದು, ನೋಟಿಸ್ ಜಾರಿ ಮಾಡಿದ್ದಾರೆ ಹಾಗೂ ಈ ಸಂಬಂಧ ಆರೋಗ್ಯ ಇಲಾಖೆ ಹಾಗೂ ಆಹಾರ ಪೂರೈಕೆ ಇಲಾಖೆಗೆ ಸೂಕ್ತ ಕ್ರಮ ಕೈಗೊಳ್ಳಲು ಪತ್ರ ಬರೆಯಲಾಗಿದೆ ಎಂದು ಆಂಜಿನಪ್ಪ ತಿಳಿಸಿದ್ದಾರೆ. ಈ ಬಗ್ಗೆ ಹೊಸಕೋಟೆ ಠಾಣೆಯಲ್ಲಿ ದೂರು ದಾಖಲಾಗಿದೆ.
ನಮ್ಮ ಜೀವಕ್ಕೆ ಯಾರು ಹೊಣೆ? : ಅವಧಿ ಮೀರಿದ ಆಹಾರ ಹಾಗೂ ಕೊಳೆತ ಆಹಾರವನ್ನು ತಿಳಿಯದೇ ಯಾರಾದರೂ ಗ್ರಾಹಕರು ತಿಂದು ಆರೋಗ್ಯ ಕೆಡಿಸಿಕೊಂಡರೆ ಅಥವಾ ಜೀವ ಕಳೆದುಕೊಂಡರೆ ಯಾರು ಹೊಣೆ? ಅನಧಿಕೃತವಾಗಿ ನಗರದಲ್ಲಿ ಸಂಸ್ಥೆ ವ್ಯಾಪಾರ ನಡೆಸುತ್ತಿದೆ ಎಂದರೆ ಅಧಿಕಾರಿಗಳು ಹೇಗೆ ಸುಮ್ಮನಿದ್ದಾರೆ? ಈ ಬಗ್ಗೆ ಸಂಸ್ಥೆಯ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಬನ್ನಿ ಈ ಬಗ್ಗೆ ಮಾತನಾಡೋಣ ಎನ್ನುತ್ತಾರೆ ಎಂದು ಸ್ವತ@ ನಗರಸಭೆಯ ಸದಸ್ಯ ನಿತಿನ್ ಗಂಭೀರ ಆರೋಪ ಮಾಡಿದರು.
ಉಡಾಫೆ ಉತ್ತರ : ನನ್ನ ಗಮನಕ್ಕೆ ಈಗ ಬಂದಿದೆ, ನಾನು ಬುಧವಾರ ಸ್ಥಳ ಪರಿಶೀಲಿಸಿ ನಂತರ ಕ್ರಮ ಕೈಗೊಳ್ಳುತ್ತೇನೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ವೀಣಾ ಉಡಾೆ ಉತ್ತರ ನೀಡಿದ್ದಾರೆ ಎಂದು ತಿಳಿದುಬಂದಿದೆ.