Bengaluru shoe thief case(Ai IMage)
- 27 ಜೊತೆ ಬ್ರಾಂಡೆಡ್ ಶೂಗಳ ಒಟ್ಟು ಮೌಲ್ಯ 1.3 ಲಕ್ಷ ರೂಪಾಯಿಗೂ ಅಧಿಕ.
- ಜೂನ್ 17ರ ಮುಂಜಾನೆ 4:05 ರಿಂದ 4:20ರ ನಡುವೆ ಅಪಾರ್ಟ್‌ಮೆಂಟ್ ಒಳಗೆ ನುಗ್ಗಿ ಕೃತ್ಯ ಎಸಗಿದ ಖದೀಮ.
- ಶೂಗಳನ್ನು ಗೋಣಿಚೀಲಕ್ಕೆ ತುಂಬಿಕೊಂಡು ಯೆಲ್ಲೋ ಬೋರ್ಡ್ ಕಾರಿನಲ್ಲಿ ಪರಾರಿಯಾದ ಕಳ್ಳರು
ಬೆಂಗಳೂರು: ನಗರದಲ್ಲಿ ಚಿನ್ನ, ಬೆಳ್ಳಿ, ನಗದು ಸೇರಿದಂತೆ ಅಮೂಲ್ಯ ವಸ್ತುಗಳು ಮಾತ್ರ ಕಳುವಾಗೋದಿಲ್ಲ. ಬದಲಾಗಿ ಇಲ್ಲಿ ನಂದಿನಿ ಹಾಲು, ತರಕಾರಿ, ಹಣ್ಣು ಎಲ್ಲವು ರಾತ್ರೋರಾತ್ರಿ ಮಾಯವಾಗುತ್ತದೆ. ಸದ್ಯ ಕಳ್ಳನೊಬ್ಬ ಬ್ರಾಂಡೆಡ್ ಶೂವನ್ನು ಬಿಟ್ಟಿಲ್ಲ. ಹೌದು ಸಿಲಿಕಾನ್ ಸಿಟಿಯ(Bengaluru shoe thief case)ಅಪಾರ್ಟ್ಮೆಂಟ್ವೊಂದರಲ್ಲಿ ಲಕ್ಷಕ್ಕೂ ಹೆಚ್ಚು ಬೆಲೆಬಾಳುವ 27ಶೂ ಕಳ್ಳತನ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಸದಾನಂದನಗರದ ಎನ್‌ಜಿಇಎಫ್ ಲೇಔಟ್‌ನಲ್ಲಿರುವ 'ಶ್ರೀ ಧಾಮ ಅಪಾರ್ಟ್‌ಮೆಂಟ್' ಸಂಕೀರ್ಣದಲ್ಲಿ ಕಳ್ಳನೊಬ್ಬ ಒಂದಲ್ಲ ಎರಡಲ್ಲ, ಬರೋಬ್ಬರಿ 27 ಜೊತೆ ಬ್ರಾಂಡೆಡ್ ಶೂಗಳನ್ನು ಕದ್ದು ಪರಾರಿಯಾಗಿದ್ದು, ನಿವಾಸಿಗಳು ತಬ್ಬಿಬ್ಬಾಗಿದ್ದಾರೆ. ಕಳುವಾಗಿರುವ ಈ ಶೂಗಳ ಒಟ್ಟು ಮೌಲ್ಯ 1.3 ಲಕ್ಷ ರೂಪಾಯಿಗೂ ಅಧಿಕ ಎಂದು ಅಂದಾಜಿಸಲಾಗಿದೆ.
27 ಜೊತೆ ಶೂ ಉಡೀಸ್
50 ವರ್ಷದ ಸುಜಿತ್ ಕುಮಾರ್ ಟಿ.ಜಿ. ಎಂಬುವವರು ಮಾರ್ಕೆಟಿಂಗ್ ವೃತ್ತಿಪರರು. ಇವರ ಬಳಿ 23,000 ರೂಪಾಯಿ ಮೌಲ್ಯದ 7 ಜೊತೆ ಶೂ ಇತ್ತು, ಇದನ್ನು ಸಾಮಾನ್ಯವಾಗಿ ಮನೆಯ ಹೊರಗೆ ಇಡಲಾಗುತ್ತಿತ್ತು. ಯಾರು ಬರುತ್ತಿರಲಿಲ್ಲ ಎನ್ನುವುದು ನಂಬಿಕೆ ಆದರೆ, ಜೂನ್ 17 ರ ಮುಂಜಾನೆ ನೋಡಿದ್ರೆ ರ್ಯಾಕ್ ಖಾಲಿಯಾಗಿತ್ತು ಎಂದು ಪೊಲೀಸರಿಗೆ ದೂರು ನೀಡಿದ್ದರು. ಇದು ಅವರೊಬ್ಬರ ಸಮಸ್ಯೆ ಎಂದುಕೊಂಡರು ಆದರೆ, ಸತ್ಯಾಂಶ ಏನೆಂದರೆ ಅಪಾರ್ಟ್‌ಮೆಂಟ್‌ನ ಇತರ ನಿವಾಸಿಗಳನ್ನು ವಿಚಾರಿಸಿದಾಗ ಅಸಲಿ ವಿಷಯ ಬೆಳಕಿಗೆ ಬಂದಿದೆ.
ಬ್ರಾಂಡೆಡ್ ಶೂಗಳೇ ಟಾರ್ಗೆಟ್
ಒಟ್ಟಾರೆಯಾಗಿ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಸೇರಿದ 65,000 ರೂ. ಮೌಲ್ಯದ 11 ಜೊತೆ ಶೂಗಳು, 20,000 ರೂ. ಮೌಲ್ಯದ 5 ಜೊತೆ ಶೂಗಳು ಹಾಗೂ ಮತ್ತೊಬ್ಬರಿಗೆ ಸೇರಿದ 25,000 ರೂ. ಮೌಲ್ಯದ 4 ಜೊತೆ ಶೂಗಳು ಕೂಡ ಕಳುವಾಗಿದ್ದವು. ಹೀಗೆ ಇಡೀ ಅಪಾರ್ಟ್‌ಮೆಂಟ್‌ನಿಂದ ಒಟ್ಟು 27 ಜೊತೆ ಬ್ರಾಂಡೆಡ್ ಶೂಗಳು ಕಾಣೆಯಾಗಿದ್ದವು.
ನಸುಕಿನ ಮುಂಜಾನೆಯಲ್ಲೇ ಕಳ್ಳತನ
ಅಪಾರ್ಟ್‌ಮೆಂಟ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಕಳ್ಳನ ಕೈಚಳಕ ಪತ್ತೆಯಾಗಿದೆ. ಜೂನ್ 17ರ ಮುಂಜಾನೆ 4:05 ರಿಂದ 4:20ರ ನಡುವೆ ಅಪಾರ್ಟ್‌ಮೆಂಟ್ ಒಳಗೆ ಓಡಾಡಿದ ದುಷ್ಕರ್ಮಿ, ಅಲ್ಲಿ ಸಿಕ್ಕ ಸಿಕ್ಕ ಬ್ರಾಂಡೆಡ್ ಶೂಗಳನ್ನು ಆರಿಸಿ ತಂದಿದ್ದ ಗೋಣಿಚೀಲಕ್ಕೆ ತುಂಬಿಸಿಕೊಂಡಿದ್ದಾನೆ. ನಂತರ ಆ ಚೀಲದೊಂದಿಗೆ ಹೊರಬಂದು ಯೆಲ್ಲೋ ಬೋರ್ಡ್ ನೋಂದಣಿ ಹೊಂದಿದ್ದ ಕಾರೊಂದರಲ್ಲಿ ಹತ್ತಿ ಪರಾರಿಯಾಗಿದ್ದಾನೆ. ಕಳ್ಳನು ಎಸ್ಕೇಪ್ ಆಗಲು ತನ್ನ ಸ್ನೇಹಿತನಾದ ಕ್ಯಾಬ್ ಚಾಲಕನ ಸಹಾಯ ಪಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದು, ತನಿಖೆ ಮುಂದುವರಿಸಿದ್ದಾರೆ, (ಏಜೆನ್ಸೀಸ್).