ಬೆಂಗಳೂರಿಗೆ ಕೈತಪ್ಪಿದ ಐಪಿಎಲ್​ ಫೈನಲ್​ ಆತಿಥ್ಯ  
ರಾಜ್ಯ

10,057 ಫ್ರೀ ಟಿಕೆಟ್​ಗಳ ಬೇಡಿಕೆ! ಚಿನ್ನಸ್ವಾಮಿಯಲ್ಲಿ ಐಪಿಎಲ್​ ಫೈನಲ್​ ಮಿಸ್​ ಆಗಿದ್ದೇ ಈ ಕಾರಣಕ್ಕೆ: ಹೀಗಿದೆ​ ವರದಿ

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ನಡೆಯಬೇಕಿದ್ದ ಫೈನಲ್​ ಪಂದ್ಯ ಅಹಮದಾಬಾದ್​ ಕ್ರೀಡಾಂಗಣಕ್ಕೆ ಶಿಫ್ಟ್​
  • ಐಪಿಎಲ್ ಫೈನಲ್‌ನಲ್ಲಿ ಚಿನ್ನಸ್ವಾಮಿ ಕೈತಪ್ಪಲು ಕೆಎಸ್​ಸಿಎ ಕೇಳಿದ 10,057 ವಿಐಪಿ ಟಿಕೆಟ್‌ಗಳ ಬೇಡಿಕೆಯೇ ಕಾರಣ
  • ಶಾಸಕರ ಉಚಿತ ಟಿಕೆಟ್​ಗಳ ಆಸೆಗೆ ಅಭಿಮಾನಿಗಳಿಗೆ ನಿರಾಶೆ
ಬೆಂಗಳೂರು: 19ನೇ ಆವೃತ್ತಿಯ ಐಪಿಎಲ್​ ಪ್ಲೇಆಫ್ ಹಂತದ ಪಂದ್ಯಗಳ ತಾಣಗಳನ್ನು ಬಿಸಿಸಿಐ ಬುಧವಾರ ಅಷ್ಟೇ ಅಂತಿಮಗೊಳಿಸಿದ್ದು, ಫೈನಲ್​ ಆತಿಥ್ಯವನ್ನು ಈ ವರ್ಷ ಎಂ. ಚಿನ್ನಸ್ವಾಮಿ ಬದಲಿಗೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ನೀಡಲಾಗಿದೆ. ಅದರಲ್ಲೂ, ಶಾಸಕರ ಉಚಿತ ಟಿಕೆಟ್ ಮೋಹಕ್ಕೆ 10 ವರ್ಷಗಳ ಬಳಿಕ ಬೆಂಗಳೂರಿನಲ್ಲಿ ಆಯೋಜನೆ ಆಗಬೇಕಿದ್ದ ಐಪಿಎಲ್​ ಫೈನಲ್​ ಹಣಾಹಣಿ ಕೈತಪ್ಪಿರುವುದು ಸದ್ಯ ಕನ್ನಡಿಗರನ್ನು ತೀವ್ರ ಕೆರಳಿಸಿದೆ. ​
18ನೇ ಆವೃತ್ತಿ ಅಂದರೆ ಕಳೆದ ವರ್ಷ ಐಪಿಎಲ್​ ಟ್ರೋಫಿಯನ್ನು ಆರ್​ಸಿಬಿ ಗೆದ್ದ ಹಿನ್ನೆಲೆ ಈ ಬಾರಿಯ ಫೈನಲ್ ಪಂದ್ಯವನ್ನು ಆಯೋಜಿಸಲು ಬೆಂಗಳೂರು ನಗರವನ್ನು ಗೊತ್ತುಪಡಿಸಲಾಗಿತ್ತು. ಆದರೆ, ಬಿಸಿಸಿಐನ ಸ್ಥಾಪಿತ ಮಾರ್ಗಸೂಚಿಗಳು ಮತ್ತು ಶಿಷ್ಟಾಚಾರ ವ್ಯಾಪ್ತಿಯನ್ನು ಮೀರಿದ ಸ್ಥಳೀಯ ಕ್ರಿಕೆಟ್ ಸಂಸ್ಥೆ ಕೆಎಸ್​ಸಿಎ ಮತ್ತು ಅಧಿಕಾರಿಗಳ ಕೆಲವು ಅವಶ್ಯಕತೆಗಳಿಂದಾಗಿ, ಪಂದ್ಯಗಳನ್ನು ಈಗ ಸ್ಥಳಾಂತರಿಸಲಾಗಿದೆ ಮತ್ತು ಮರು ನಿಗದಿ ಮಾಡಲಾಗಿದೆ.
ಆರ್‌ಸಿಬಿ ತಂಡ ಹಾಲಿ ಚಾಂಪಿಯನ್ ಆಗಿರುವುದರಿಂದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ವಾಲಿಫೈಯರ್-2, ಫೈನಲ್ ಪಂದ್ಯ ನಡೆಯಬೇಕಿತ್ತು. ನಿಯಮಗಳ ಪ್ರಕಾರ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ (ಕೆಎಸ್‌ಸಿಎ) ಆತಿಥ್ಯ ಸಿಗಬೇಕಿತ್ತು. ಪ್ಲೇಆಫ್ ಹಂತದ ಪಂದ್ಯಗಳನ್ನು ಆಯೋಜಿಸಲು ಕೆಎಸ್‌ಸಿಎಯ ಸಿದ್ಧತೆ ಮತ್ತು ಇಚ್ಛಾಶಕ್ತಿಯ ಹೊರತಾಗಿಯೂ, ಈ ಪಂದ್ಯಗಳನ್ನು ಬೆಂಗಳೂರಿನಿಂದ ಬೇರೆಡೆಗೆ ಸ್ಥಳಾಂತರಿಸಿರುವ ಬಗ್ಗೆ ಬಿಸಿಸಿಐ ನಿರ್ದಿಷ್ಟ ಕಾರಣಗಳನ್ನು ತನಗೆ ತಿಳಿಸಿಲ್ಲ ಎಂದು ಕೆಎಸ್‌ಸಿಎ ತಿಳಿಸಿತ್ತು. ಆದರೀಗ, ಶಾಸಕರ ಟಿಕೆಟ್​ ಬೇಡಿಕೆಯೇ ಫೈನಲ್​ ಆತಿಥ್ಯವನ್ನು ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲು ಮುಖ್ಯ ಕಾರಣ ಎಂಬುದನ್ನು ಬಿಸಿಸಿಐ ಸ್ಪಷ್ಟಪಡಿಸಿದೆ.
ವರದಿಗಳ ಪ್ರಕಾರ, ಕೆಎಸ್​ಸಿಎ ಹೆಚ್ಚುವರಿ 10,057 ಉಚಿತ ಟಿಕೆಟ್‌ಗಳಿಗಾಗಿ ಮನವಿ ಮಾಡಿದ್ದರಿಂದ ಐಪಿಎಲ್ ಫೈನಲ್ ಮತ್ತು ಪ್ಲೇಆಫ್ ಪಂದ್ಯಗಳನ್ನು ಬೆಂಗಳೂರು ಕ್ರೀಡಾಂಗಣದಿಂದ ಸ್ಥಳಾಂತರಿಸಲಾಯಿತು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಪಿಟಿಐಗೆ ಮಾಹಿತಿ ನೀಡಿದ್ದು, 35,000 ಕ್ರಿಕೆಟ್​ ಅಭಿಮಾನಿಗಳಿಗೆ ಮಾತ್ರ ಅವಕಾಶ ಕಲ್ಪಿಸಬಹುದಾದ ಕಡಿಮೆ ಸಾಮರ್ಥ್ಯವುಳ್ಳ ಸ್ಟೇಡಿಯಂನಲ್ಲಿ ಉಚಿತ ಟಿಕೆಟ್‌ಗಳಿಗೆ ಹೆಚ್ಚಿನ ಬೇಡಿಕೆ ಇದ್ದ ಕಾರಣ, ಅಲ್ಲಿ ಫೈನಲ್ ಪಂದ್ಯವನ್ನು ನಡೆಸುವುದು ಉತ್ತಮ ಆಯ್ಕೆಯಲ್ಲ ಎಂದರು.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮೇ 31ರಂದು ಪ್ರಶಸ್ತಿ ಸುತ್ತಿನ ಕಾದಾಟ ನಡೆಯಲಿದೆ ಎಂದು ಸ್ಪಷ್ಟಪಡಿಸಿರುವ ಬಿಸಿಸಿಐ, ಮೂರು ಪ್ಲೇಆಫ್ ಪಂದ್ಯಗಳು ಧರ್ಮಶಾಲಾ (1), ಮುಲ್ಲನ್‌ಪುರದಲ್ಲಿ (2) ನಿಗದಿ ಮಾಡಿದೆ. ಅಲ್ಲಿಗೆ, ನಾಲ್ಕನೇ ಬಾರಿಗೆ ಐಪಿಎಲ್​ ಪ್ರಶಸ್ತಿಗಾಗಿ ನಡೆಯುವ ಅಂತಿಮ ಪಂದ್ಯ ಗುಜರಾತ್​ ಪಾಲಾಗಿದೆ. ಪ್ಲೇಆಫ್ ಪಂದ್ಯಗಳು ಧರ್ಮಶಾಲಾ (ಮೇ 26) ಮತ್ತು ನವಿ ಚಂಡೀಗಢದಲ್ಲಿ (ಮೇ.27 ಮತ್ತು 29) ನಡೆಯಲಿದ್ದು, ಪ್ರಶಸ್ತಿ ಪಂದ್ಯ (ಮೇ 31) ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಪಿಟಿಐ ವರದಿ ಪ್ರಕಾರ, ಕೆಎಸ್‌ಸಿಎ ಕ್ರೀಡಾಂಗಣದ ಸಾಮರ್ಥ್ಯದ ಶೇ.15ರಷ್ಟು ಉಚಿತ ಟಿಕೆಟ್‌ಗಳನ್ನು ಪಡೆಯಲಷ್ಟೇ ಅರ್ಹವಾಗಿದೆ. ಆದರೂ ಹೆಚ್ಚುವರಿಯಾಗಿ 10,057 ಟಿಕೆಟ್‌ಗಳಿಗೆ ಬೇಡಿಕೆ ಇಟ್ಟಿರುವುದು ಸದ್ಯ ಬಿಸಿಸಿಐಗೆ ಅಚ್ಚರಿ ಮೂಡಿಸಿದೆ. ಮುಖ್ಯವಾಗಿ, ಇದರಲ್ಲಿ ರಾಜ್ಯ ಶಾಸಕಾಂಗ ಸದಸ್ಯರ ಬೇಡಿಕೆಗಳನ್ನು ಪೂರೈಸಲು ಸುಮಾರು 900 ಪಾಸ್‌ಗಳು ಅಗತ್ಯವಿದ್ದವು. ಕೆಎಸ್‌ಸಿಎ, ಶಾಸಕರು/ಎಂಎಲ್‌ಸಿಗಳಿಗೆ ತಲಾ ಮೂರು ಉಚಿತ ಪಾಸ್‌ಗಳನ್ನು ಒದಗಿಸಲು ಒಪ್ಪಿಕೊಂಡಿತು (ಅಲ್ಲಿಗೆ, ಒಟ್ಟು 900 ಪಾಸ್‌ಗಳು).

ಫ್ಯಾನ್ಸ್​ಗೆ ಕೇವಲ 20,000 ಟಿಕೆಟ್ ಅಷ್ಟೇ​!

ತಜ್ಞರ ಸಮಿತಿ ಮತ್ತು ಕರ್ನಾಟಕ ಸರ್ಕಾರದೊಂದಿಗಿನ ಹೆಚ್ಚುವರಿ ಬದ್ಧತೆಗಳಿಂದಾಗಿ, ಶೇ.15ಕ್ಕಿಂತ ಹೆಚ್ಚಿನ ಸೀಮಿತ ಸಂಖ್ಯೆಯ ಆತಿಥ್ಯ ಪೂರಕ ಪಾಸ್‌ಗಳ ಜೊತೆಗೆ ಹೆಚ್ಚುವರಿಯಾಗಿ 750 ಉಚಿತ ಟಿಕೆಟ್‌ಗಳು ಕೆಎಸ್​ಸಿಎಗೆ ಅಗತ್ಯವಿತ್ತು. ಅಷ್ಟು ಟಿಕೆಟ್​ಗಳನ್ನು ಇವರಿಗೆ ಒದಗಿಸಿದರೆ, ಕ್ಯೂನಲ್ಲಿ ನಿಂತು, ವೆಬ್​ಸೈಟ್​ನಲ್ಲಿ ಕಾದು ಟಿಕೆಟ್​ ಬುಕ್​ ಮಾಡುವ ಅಭಿಮಾನಿಗಳಿಗೆ ಕೇವಲ 20,000 ಟಿಕೆಟ್‌ಗಳಷ್ಟೇ ಉಳಿಯುತ್ತಿತ್ತು.
ಇನ್ನು ಆಳವಾಗಿ ನೋಡುವುದಾದರೆ, ಕ್ರಿಕೆಟ್ ಆಡುವ ಕ್ಲಬ್‌ಗಳಿಗೆ 2,000 ರೂ. ಆಫರ್​ ದರದಲ್ಲಿ P3 ಸ್ಟ್ಯಾಂಡ್‌ನಲ್ಲಿ 3,007 ಟಿಕೆಟ್‌ಗಳು ಮತ್ತು ಸದಸ್ಯರ ಪತ್ನಿ ಮತ್ತು ಮಕ್ಕಳಿಗಾಗಿ 900 ಟಿಕೆಟ್‌ಗಳನ್ನು ಕೆಎಸ್​ಸಿಎ ಬೇಡಿಕೆಯು ಒಳಗೊಂಡಿತ್ತು. ಈ ಎಲ್ಲ ಅಂಶಗಳನ್ನು ಬಹಳ ಸೂಕ್ಷ್ಮವಾಗಿ ಗಮನಿಸಿದ ಬಿಸಿಸಿಐ, ಯಾವುದೇ ಕಾರಣಕ್ಕೂ ಬೆಂಗಳೂರಿನಲ್ಲಿ ಐಪಿಎಲ್​ ಫೈನಲ್​ ಆತಿಥ್ಯ ನಡೆಸುವುದು ಬೇಡ ಎಂದು ನಿರ್ಧರಿಸಿತು. ಶಾಸಕರಿಗೆ ಉಚಿತ ಟಿಕೆಟ್​ಗಳನ್ನು ನೀಡುವುದರಿಂದ ಕ್ರಿಕೆಟ್​ ಅಭಿಮಾನಿಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂಬುದನ್ನು ಅರಿತ ಬಿಸಿಸಿಐ, ಫೈನಲ್​ ಅನ್ನು ಗುಜರಾತ್​ಗೆ ನೀಡಿರುವುದು ಇಲ್ಲಿ ಗಮನಾರ್ಹ.
ಈ ಕುರಿತು ಪ್ರತಿಕ್ರಿಯಿಸಿದ ಬಿಸಿಸಿಐ ಅರುಣ್ ಧುಮಾಲ್, "ಮೊದಲಿಗೆ ಚಿನ್ನಸ್ವಾಮಿ ಕ್ರೀಡಾಂಗಣದ ಸಾಮರ್ಥ್ಯವು ಅಷ್ಟು ಹೆಚ್ಚಿಲ್ಲ. ಲೀಗ್ ಪಂದ್ಯಗಳಿಗೂ ಅಲ್ಲಿ ಬಹಳ ಕಡಿಮೆ ಟಿಕೆಟ್‌ಗಳು ಲಭ್ಯವಿದ್ದವು. ಇನ್ನು ಐಪಿಎಲ್ ಫೈನಲ್ ಪಂದ್ಯ ಎಂದರೆ, ಅಲ್ಲಿಗೆ ಜಾಗತಿಕವಾಗಿ ಅನೇಕ ಕ್ರಿಕೆಟ್​ ಅಭಿಮಾನಿಗಳು ಸೇರುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಿರುವಾಗ, ಫ್ಯಾನ್ಸ್​ಗಳಿಗೆ ಹೆಚ್ಚು ಟಿಕೆಟ್​ಗಳು ಪೂರೈಕೆಯಾಗಬೇಕು. ಅದು ಸರಿ" ಎಂದು ಹೇಳಿದರು,(ಏಜೆನ್ಸೀಸ್).