ಒಂದು ವರ್ಷದ ಅವಧಿಗೆ ಅನಲಾಗ್ ಪನೀರ್ ತಯಾರಿಕೆ ಹಾಗೂ ಮಾರಾಟಕ್ಕೆ ತಡೆ ನೀಡಿದ ರಾಜ್ಯ ಸರ್ಕಾರ
- ಕರ್ನಾಟಕದಲ್ಲಿ ಅನಲಾಗ್ ಪನೀರ್ ನಿಷೇಧ
- ಒಂದು ವರ್ಷದ ಅವಧಿಗೆ ಅನಲಾಗ್ ಪನೀರ್ ತಯಾರಿಕೆ ಹಾಗೂ ಮಾರಾಟಕ್ಕೆ ತಡೆ ನೀಡಿದ ರಾಜ್ಯ ಸರ್ಕಾರ
- ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯಿಂದ ಆದೇಶ ಜಾರಿ
ಬೆಂಗಳೂರು: ರಾಜ್ಯದ ಜನರ ಆರೋಗ್ಯ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಇಂದು (ಶನಿವಾರ, ಆ.22) ಪನೀರ್ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿದ್ದ ಅನಲಾಗ್ ಪನೀರ್ (Analogue paneer Ban) ಮೇಲೆ ರಾಜ್ಯ ಸರ್ಕಾರ ನಿಷೇಧವನ್ನು ಹೇರಿದೆ.
ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಜಾರಿ ಮಾಡಿರುವ ಆದೇಶ ಪ್ರತಿಯಲ್ಲಿ, ಪನೀರ್ ಹೆಸರಿನಲ್ಲಿ ನಾನ್ ಡೈರಿ ಪನೀರ್ ಅಥವಾ ಅನಲಾಗ್ ಪನೀರ್ಗಳ ಉತ್ಪಾದನೆ, ಸಂಸ್ಕರಣೆ, ಪ್ಯಾಕಿಂಗ್, ಸಂಗ್ರಹ ಮತ್ತು ಮಾರಾಟವನ್ನು ರಾಜ್ಯದಲ್ಲಿ ಮುಂದಿನ ಒಂದು ವರ್ಷಗಳ ಅವಧಿಗೆ ನಿಷೇಧಿಸಲಾಗುತ್ತಿದೆ ಎಂದು ತಿಳಿಸಲಾಗಿದೆ.
ಅನಲಾಗ್ ಪನೀರ್ ಬ್ಯಾನ್!
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006ರ ಕಲಂ 30(2)(a), 18 ಮತ್ತು 29ರ ಅಡಿಯಲ್ಲಿ ಈ ಆದೇಶವನ್ನು ಹೊರಡಿಸಲಾಗಿದ್ದು, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006, ನಿಮಯ 2011ರ (2.1.16) ರ ಪ್ರಕಾರ ಪನೀರ್ ಎಂಬುದು ಹಾಲಿನಿಂದ ತಯಾರಿಸಲಾದ ಪ್ರಮಾಣೀಕೃತ ಆಹಾರ ಉತ್ಪನ್ನವಾಗಿದೆ.
ಪನೀರ್‌ನಲ್ಲಿ ಹಾಲಿನ ಕೊಬ್ಬು (Milk Fat) ಪ್ರಮುಖ ಅಂಶವಾಗಿದ್ದು, ಅದರ ಬದಲಿಗೆ ಅಥವಾ ಅದರ ಜೊತೆಗೆ ಸಸ್ಯಜನ್ಯ ಎಣ್ಣೆ, ಸಸ್ಯಜನ್ಯ ಕೊಬ್ಬು ಅಥವಾ ಇತರೆ ನಾನ್-ಡೈರಿ ಪದಾರ್ಥಗಳನ್ನು ಬಳಸುವುದನ್ನು ಅನುಮತಿಸುವುದಿಲ್ಲ.
ಪನೀರ್‌ನಲ್ಲಿ ಸಸ್ಯಜನ್ಯ ಎಣ್ಣೆ, ಸಸ್ಯಜನ್ಯ ಕೊಬ್ಬು ಅಥವಾ ಇತರ ಡೈರಿ ಪದಾರ್ಥಗಳೊಂದಿಗೆ ಕಲಬೆರಕೆ ಇಲ್ಲದಿದ್ದರೂ, ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಈ ಉತ್ಪನ್ನಗಳನ್ನು ಬಳಸಬಾರದು, ಸಂಗ್ರಹಿಸಬಾರದು, ಸರಬರಾಜು ಮಾಡಬಾರದು, ಮಾರಾಟ ಮಾಡಬಾರದು ಅಥವಾ ಸಾಗಿಸಬಾರದು ಎಂಬ ಉದ್ದೇಶದಿಂದ ನಿಷೇಧ ಹೇರಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಏನಿದು ಅನಲಾಗ್ ಪನೀರ್?
ಹಾಲಿನ ಕೊಬ್ಬು ಅಥವಾ ಹಾಲಿನ ಘನಾಂಶವನ್ನು ಸಂಪೂರ್ಣವಾಗಿ ಅಥವಾ ಭಾಗಶಃ ಸಸ್ಯಜನ್ಯ ಎಣ್ಣೆ, ಸಸ್ಯಜನ್ಮ ಕೊಬ್ಬು ಅಥವಾ ಇತರೆ ನಾನ್-ಡೈರಿ ಪದಾರ್ಥಗಳಿಂದ ಬದಲಾಯಿಸಿ ಪನೀರ್‌ನಂತೆ ತಯಾರಿಸಲಾದ ಉತ್ಪನ್ನವನ್ನು ಅನಲಾಗ್ ಅಥವಾ ನಾನ್-ಡೈರಿ ಪನೀರ್ ಎಂದು ಪರಿಗಣಿಸಲಾಗುತ್ತದೆ. ಇಂತಹ ಉತ್ಪನ್ನವನ್ನು ಪನೀರ್ ಎಂದು ಹೆಸರಿಸಿ, ಮಾರಾಟ ಮಾಡಿ ಅಥವಾ ಗ್ರಾಹಕರಿಗೆ ಪನೀರ್ ಎಂದು ನಂಬಿಸಿ ಮಾರಾಟ ಮಾಡದಿರುವಂತೆ ಎಚ್ಚರಿಕೆ ನೀಡಲಾಗಿದೆ.
ಈ ನಿಷೇಧವು ನಿರ್ದಿಷ್ಟ ಗುಣಮಟ್ಟದ ಮಾನದಂಡಗಳನ್ನು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ನಿಗದಿಪಡಿಸದ ಮತ್ತು ಪ್ರಮಾಣೀಕರಿಸದ ಡೈರಿ ಅನಲಾಗ್ ಉತ್ಪನ್ನಗಳಿಗೆ ಮಾತ್ರ ಅನ್ವಯಿಸುತ್ತದೆ. ಅಲ್ಲದೆ, ಯಾವುದೇ ಆಹಾರ ವ್ಯವಹಾರ ಸಂಸ್ಥೆಯು ಅನಲಾಗ್ / ನಾನ್-ಡೈರಿ ಪನೀರ್ ಅನ್ನು ಯಾವುದೇ ಆಹಾರ ಉತ್ಪನ್ನ ಅಥವಾ ಆಹಾರ ಪದಾರ್ಥದ ತಯಾರಿಕೆಯಲ್ಲಿ ಬಳಸುವುದು, ಸಂಗ್ರಹಿಸುವುದು, ಪೂರೈಸುವುದು ಅಥವಾ ಮಾರಾಟ ಮಾಡುವುದನ್ನು ಸಹ ನಿಷೇಧಿಸಲಾಗಿದೆ.
ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ವತಿಯಿಂದ ರಾಜ್ಯಾದ್ಯಂತ ಈ ಆದೇಶದ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಹಾಗೂ ಸಾರ್ವಜನಿಕರು ಹಾಗೂ ಆಹಾರ ವ್ಯವಹಾರ ನಿರ್ವಾಹಕರು ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ.