ಬೆಂಗಳೂರು: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಬೃಹತ್ ಹೂಡಿಕೆ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ಭಾರೀ ಕಾರ್ಯಾಚರಣೆ ನಡೆಸಿ, ಬೆಳಗಾವಿ ಮೂಲದ ಶಿವಾನಂದ ನೀಲಣ್ಣವರ ಮತ್ತು ಆತನ ಸಹಚರರಿಗೆ ಸೇರಿದ 427.16 ಕೋಟಿ ರೂ. ಮೌಲ್ಯದ ಚರ-ಸ್ಥಿರಾಸ್ತಿಯನ್ನು ಇ.ಡಿ ಮುಟ್ಟುಗೋಲು ಹಾಕಿಕೊಂಡಿದೆ.
ಶಿವಂ ಅಸೋಸಿಯೇಟ್ಸ್‌ನ ಮಾಲೀಕ ಶಿವಾನಂದ ನೀಲಣ್ಣನವರ ಹಾಗೂ ಅವರ ಸಹಚರರು ಬೃಹತ್ ಹೂಡಿಕೆ ಯೋಜನೆ ನಡೆಸಿ, 35 ಸಾವಿರಕ್ಕೂ ಹೆಚ್ಚು ಸಾರ್ವಜನಿಕರಿಂದ ಬರೊಬ್ಬರಿ 2,459.49 ಕೋಟಿ ರೂ. ಸಂಗ್ರಹಿಸಿ, ಹಣಕಾಸು ಅವ್ಯವಹಾರ ನಡೆಸಿರುವುದು ಇ.ಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಹಾಗಾಗಿ ಆರೋಪಿಗೆ ಸೇರಿದ ಬ್ಯಾಂಕ್ ಖಾತೆ, ಷೇರು ಹೂಡಿಕೆಗಳು, ಕೃಷಿ ಜಮೀನುಗಳು, ಅಪಾರ್ಟ್‌ಮೆಂಟ್ ಸೇರಿದಂತೆ ವಿವಿಧ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ.
ಇ.ಡಿ ತನಿಖೆಯ ಪ್ರಕಾರ, ಕಿಂಗ್‌ಪಿನ್ ಶಿವಾನಂದ ನೀಲಣ್ಣವರ ಮತ್ತು ಆತನ ಸಹಚರರು 35 ಸಾವಿರಕ್ಕೂ ಹೆಚ್ಚು ಅಮಾಯಕ ಹೂಡಿಕೆದಾರರಿಂದ 2,459.49 ಕೋಟಿ ರೂ. ಅಕ್ರಮವಾಗಿ ಸಂಗ್ರಹಿಸಿದ್ದಾರೆ. ಆರೋಪಿಗಳು, ತಿಂಗಳಿಗೆ ಶೇ.3 ಖಚಿತ ಲಾಭ ಹಾಗೂ ಹೊಸ ಹೂಡಿಕೆದಾರರನ್ನು ಕರೆತಂದರೆ ಶೇ.0.5 ರೆಫರಲ್ ಕಮಿಷನ್ ಆಸೆ ತೋರಿಸಿ ವಂಚಿಸಿದ್ದಾರೆ. ಇದಕ್ಕಾಗಿ ನೆಟ್‌ವರ್ಕ್ ಏಜೆಂಟ್‌ಗಳನ್ನು ನಿಯೋಜಿಸಿಕೊಂಡಿರುವುದು ತನಿಖೆಯಲ್ಲಿ ಗೊತ್ತಾಗಿದೆ.
ಹೂಡಿಕೆದಾರರ ಹಣವನ್ನು ಹೈ-ರಿಸ್ಕ್ ಷೇರು ಮಾರುಕಟ್ಟೆಯಲ್ಲಿ ತೊಡಗಿಸಿ 185.95 ಕೋಟಿ ರೂ. ನಷ್ಟ ಮಾಡಿಕೊಂಡಿದ್ದಾರೆ. ಇನ್ನು ₹25 ಕೋಟಿಯನ್ನು ಶ್ರೀಮಾತಾ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ಮತ್ತು ಧನಶ್ರೀ ಮಲ್ಟಿಪರ್ಪಸ್ ಕೋ-ಆಪ್ ಸೊಸೈಟಿ ಮೂಲಕ ಅಕ್ರಮವಾಗಿ ವರ್ಗಾಯಿಸಿ, ಸಹಚರರ ಹೆಸರಲ್ಲಿ ಎ್ಡಿ ಮಾಡಿ ಸಾಲ ಪಡೆಯಲಾಗಿದೆ ಎಂದು ಇ.ಡಿ ತಿಳಿಸಿದೆ.
ಉಳಿದ ಹಣವನ್ನು ಪತ್ನಿ ಸಂಗೀತಾ, ಮಗ ಸಿದ್ಧಾಂತ್ ಹೆಸರಿನ ಬ್ಯಾಂಕ್ ಖಾತೆಗಳಿಗೆ ಹಾಗೂ ಶಿವಂ ಸೇವಾ ಪ್ರೈ.ಲಿ. 19 ಕೋಟಿ ರೂ.ಗಳು ಮತ್ತು ಶಿವಂ ಲೈಫ್‌ಲೈನ್ ಪ್ರೈ.ಲಿ ಹಾಗೂ ಶಿವಂ ಫುಡ್ಸ್ ನಂತಹ ಸಂಸ್ಥೆಗಳಿಗೆ ವರ್ಗಾಯಿಸಲಾಗಿದೆ. ಮತ್ತಷ್ಟು ತನಿಖೆ ಮುಂದುವರೆದಿದೆ ಎಂದು ಇ.ಡಿ ಪ್ರಕಟಣೆಯಲ್ಲಿ ತಿಳಿಸಿದೆ.
* ಸ್ಥಿರ ಠೇವಣಿಗಳು (FD) : ₹367.77 ಕೋಟಿ
* 47 ಬ್ಯಾಂಕ್ ಖಾತೆಗಳಲ್ಲಿನ ಹಣ : ₹44.37 ಕೋಟಿ
* ಸ್ಥಿರಾಸ್ತಿಗಳು : ₹13.68 ಕೋಟಿ
* ಷೇರು ಮಾರುಕಟ್ಟೆ ಹೂಡಿಕೆ : ₹1.31 ಕೋಟಿ
ಒಟ್ಟು ಜಪ್ತಿ ಮೌಲ್ಯ: ₹427.16 ಕೋಟಿ