Shivamogga Airport > ಶಿವಮೊಗ್ಗ-ತಿರುಪತಿ ಫ್ಲೈಟ್ ರದ್ದು 
ರಾಜ್ಯ

ಶಿವಮೊಗ್ಗ-ತಿರುಪತಿ ಫ್ಲೈಟ್ ರದ್ದು; ವಿಮಾನ ಕಂಪನಿಗೆ ಹಿಡಿಶಾಪ ಹಾಕಿದ ಭಕ್ತರು! | Shivamogga Airport

ಶಿವಮೊಗ್ಗ: ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮತ್ತೊಮ್ಮೆ ವಿಮಾನಯಾನ ಕಂಪನಿಯ ಎಡವಟ್ಟಿನಿಂದಾಗಿ ಪ್ರಯಾಣಿಕರು ತೀವ್ರ ಪರದಾಡುವಂತಾಗಿದೆ. ಬುಧವಾರ ಶಿವಮೊಗ್ಗದಿಂದ ಆಂಧ್ರಪ್ರದೇಶದ ತಿರುಪತಿಗೆ ತೆರಳಬೇಕಿದ್ದ ವಿಮಾನವು ಕೊನೆಯ ಕ್ಷಣದಲ್ಲಿ ಹಾರಾಟ ರದ್ದುಪಡಿಸಿದ್ದರಿಂದ ಸುಮಾರು 60ಕ್ಕೂ ಹೆಚ್ಚು ಪ್ರಯಾಣಿಕರು ಏರ್‌ಪೋರ್ಟ್‌ನಲ್ಲೇ ಗಂಟೆಗಟ್ಟಲೆ ಕಾಯ್ದು ತೊಂದರೆ ಅನುಭವಿಸಿದ್ದಾರೆ.
ಸುಮಾರು 60 ಮಂದಿ ಮಧ್ಯಾಹ್ನ 12.30ಕ್ಕೆ ಸ್ಪೈಸ್‌ಜೆಟ್ ಮೂಲಕ ತಿರುಪತಿಗೆ ಪ್ರಯಾಣಿಸಬೇಕಿತ್ತು. ಏರ್‌ಲೈನ್ಸ್ ಸಂಸ್ಥೆ ಸಿಬ್ಬಂದಿ ಪ್ರಕಟಣೆ ಹೊರಡಿಸಿ ಅನಿವಾರ್ಯ ಕಾರಣದಿಂದ ಇಂದು ವಿಮಾನ ಎರಡು ಕಡೆ ತಡವಾಗಿ ಪ್ರಯಾಣ ಆರಂಭಿಸಲಿದೆ ಎಂದು ತಿಳಿಸಿದ್ದರು. ಆದರೂ ಪ್ರಯಾಣಿಕರು ನಿಗದಿತ ಸಮಯಕ್ಕೆ ಆಗಮಿಸಿ ಏರ್‌ಪೋರ್ಟ್‌ನಲ್ಲಿ ಕಾಯುತ್ತಿದ್ದರು. ಮಧ್ಯಾಹ್ನ 1.30ರ ಸುಮಾರಿಗೆ ಮತ್ತೆ ಪ್ರಕಟಣೆ ಹೊರಡಿಸಿದ ವಿಮಾನ ಕಂಪನಿಯ ಸಿಬ್ಬಂದಿ, ಇಂದಿನ ತಿರುಪತಿ ಪ್ರಯಾಣವನ್ನು ತಾಂತ್ರಿಕ ಕಾರಣಗಳಿಂದ ರದ್ದುಪಡಿಸಲಾಗಿದೆ ಎಂದು ಘೋಷಿಸಿದರು.
ತಿರುಪತಿ ವೆಂಕಟರಮಣನ ದರ್ಶನಕ್ಕೆ ಆನ್‌ಲೈನ್‌ನಲ್ಲಿ ಟಿಕೆಟ್ ಕಾಯ್ದಿರಿಸಿದ ಭಕ್ತರಿಗೆ ಇದರಿಂದ ತೀವ್ರ ನಿರಾಸೆ ಉಂಟಾಗಿದ್ದು, ಅವರೆಲ್ಲವರೂ ವಿಮಾನ ಕಂಪನಿಗೆ ಹಿಡಿಶಾಪ ಹಾಕಿದರು.