Agumbe Ghat heavy vehicles
- ಭೂ ಕುಸಿತ ಸಂಭವಿಸುವ ನಿಟ್ಟಿನಲ್ಲಿ ಆಗುಂಬೆ ಘಾಟಿನಲ್ಲಿ ಭಾರೀ ವಾಹನ ಸಂಚಾರ ನಿರ್ಬಂಧ
- ಜೂನ್ 15ರಿಂದ ಮಳೆಗಾಲದ ಅಂತ್ಯದವರೆಗೂ ಸಂಚಾರ ನಿರ್ಬಂಧ
- ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಶಿವಮೊಗ್ಗ ಜಿಲ್ಲಾಡಳಿತದಿಂದ ಮನವಿ
ಶಿವಮೊಗ್ಗ: ಜೂನ್ 15ರಿಂದ ಮಳೆಗಾಲದ ಅಂತ್ಯದವರೆಗೂ ಆಗುಂಬೆ ಘಾಟ್ NH 169Aನಲ್ಲಿ ಭಾರೀ ವಾಹನ( Agumbe Ghat heavy vehicles) ಸಂಚಾರವನ್ನು ನಿಷೇಧಿಸಿ ಶಿವಮೊಗ್ಗ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶ ಹೊರಡಿಸಿದ್ದಾರೆ. ಮಳೆಗಾಲದಲ್ಲಿ ಘಾಟ್ಗೆ ಹಾನಿಯಾಗದಂತೆ ತಡೆಯುವುದು ಈ ಆದೇಶದ ಉದ್ದೇಶ ಎನ್ನಲಾಗಿದೆ.
ಜೂನ್ 15ರಿಂದ ಮಳೆಗಾಲದ ಅಂತ್ಯದವರೆಗೂ ಜೆಲ್ಲಿ ಕಲ್ಲು ಸಾಗಿಸುವ ಟ್ರಕ್ ಸೇರಿದಂತೆ ಭಾರೀ ವಾಹನಗಳು ಸಂಚರಿಸದಂತೆ ಶಿವಮೊಗ್ಗ ಜಿಲ್ಲಾಧಿಕಾರಿ ಹೊರಡಿಸಿದ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
ಪ್ರಕಟಣೆಯಲ್ಲಿ ಏನಿದೆ?
ತೀರ್ಥಹಳ್ಳಿ-ಮಲ್ಪೆ- ಉಡುಪಿ ರಸ್ತೆಯ ಆಗುಂಬೆ ಮಾರ್ಗದಲ್ಲಿ ಭಾರೀ ವಾಹನಗಳ ರಸ್ತೆ ಸಂಚಾರ ಹೆಚ್ಚಾದರೆ ರಸ್ತೆ ಮೇಲ್ಮೈಗೆ ಯಾವುದೇ ರೀತಿಯ ಹಾನಿಯುಂಟಾಗಬಹುದು. ಇದರಿಂದ ಭೂ ಕುಸಿತ ಉಂಟಾಗುವುದನ್ನು ತಪ್ಪಿಸುವ ಸಲುವಾಗಿ ಜಿಲ್ಲಾಧಿಕಾರಿ ಈ ಆದೇಶ ಹೊರಡಿಸಿದ್ದಾರೆ.
ಆಗುಂಬೆ ಘಾಟ್ ಮಾರ್ಗವು, ದಾವಣೆಗೆರೆ, ಶಿವಮೊಗ್ಗ ಚಿತ್ರದುರ್ಗ ಹಾಗೂ ಹಾವೇರಿ ಜಿಲ್ಲೆಗಳ ಜನರಿಗೆ ಉಡುಪಿ, ಮಂಗಳೂರಿನಲ್ಲಿರುವ ಪ್ರತಿಷ್ಠಿತ ಆಸ್ಪತ್ರೆಗಳಿಗೆ ತೆರಳಲು ಇರುವ ಮಾರ್ಗವಾಗಿದೆ. ಇದೀಗ ಈ ಮಾರ್ಗವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುವ ಕಾರಣ, ಸಾಮಾನ್ಯ ಜನರಿಗೆ ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.
ಇತ್ತೀಚೆಗೆ ಏಪ್ರಿಲ್ನಲ್ಲಿ ಹುಲಿಕಲ್ ಘಾಟ್ನಲ್ಲಿ ಭೂಕುಸಿತ ಸಂಭವಿಸಿ, ಮೂವರು ಮೃತಪಟ್ಟಿದ್ದರು. ದುರಸ್ತಿ ಕಾರ್ಯಕ್ಕಾಗಿ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಇನ್ನೂ ಕಾರ್ಯಾಚರಣೆ ಮುಕ್ತಾಯಗೊಂಡಿಲ್ಲ ಎಂದು ಜಿಲ್ಲಾಡಳಿತದ ಪ್ರಕಟಿಸಿದೆ.
ಪರ್ಯಾಯ ಮಾರ್ಗ ಯಾವುದು?
ತೀರ್ಥಹಳ್ಳಿಯಿಂದ ಉಡುಪಿಗೆ ಸಂಚರಿಸುವ ವಾಹನಗಳಿಗೆ ಪರ್ಯಾಯ ಮಾರ್ಗಗಳು
ತೀರ್ಥಹಳ್ಳಿ - ನಗರ - ನಾಗೋಡಿ - ಕೊಲ್ಲೂರು - ಕುಂದಾಪುರ - ಉಡುಪಿ
ತೀರ್ಥಹಳ್ಳಿ - ಶೃಂಗೇರಿ - ಕೆರೆಕಟ್ಟೆ - ಬಜಗೋಳಿ - ಕಾರ್ಕಳ - ಉಡುಪಿ
ಉಡುಪಿಯಿಂದ ತೀರ್ಥಹಳ್ಳಿಗೆ ಪ್ರಯಾಣಿಸುವ ವಾಹನಗಳಿಗೆ ಪರ್ಯಾಯ ಮಾರ್ಗಗಳು:
ಉಡುಪಿ - ಕುಂದಾಪುರ - ಕೊಲ್ಲೂರು - ನಾಗೋಡಿ- ನಗರ- ತೀರ್ಥಹಳ್ಳಿ
ಕಾರ್ಕಳ - ಬಜಗೋಳಿ - ಕೆರೆಕಟ್ಟೆ - ಶೃಂಗೇರಿ - ತೀರ್ಥಹಳ್ಳಿ ರಸ್ತೆ ಮಾರ್ಗದಲ್ಲಿ ಸಂಚರಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ, (ಏಜೆನ್ಸೀಸ್).