Siddaramaih | ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷರಾಗಿ ಆರು ವರ್ಷಗಳ ಯಶಸ್ವಿ ಅವಧಿಯನ್ನು ಪೂರೈಸಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaih) ಅಭಿನಂದನೆಗಳನ್ನು ತಿಳಿಸಿದ್ದು, ಡಿಕೆಶಿ ಅವರ ಸಂಘಟನಾ ಚಾತುರ್ಯ ಮತ್ತು ಪಕ್ಷದ ಮೇಲಿನ ನಿಷ್ಠೆಯನ್ನು ಕೊಂಡಾಡಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಅಭಿನಂದನೆಗಳು. ಶಿವಕುಮಾರ್ ಅವರ ಸಂಘಟನಾ ಚಾತುರ್ಯ, ಸೈದ್ಧಾಂತಿಕ ಬದ್ದತೆ ಮತ್ತು ಕಠಿಣ ಶ್ರಮ ನಮ್ಮ ಪಕ್ಷದ ಎಲ್ಲ ಯುವನಾಯಕರಿಗೆ ಮಾದರಿಯಾದುದು.
ವಿರೋಧ ಪಕ್ಷವಾದ ಬಿಜೆಪಿ ಸುಳ್ಳು ಕೇಸ್ ಗಳನ್ನು ಹಾಕಿ ಬಗೆಬಗೆಯ ಕಿರುಕಳ ನೀಡಿದರೂ ಶಿವಕುಮಾರ್ ಅದಕ್ಕೆ ಮಣಿಯದೆ ಪಕ್ಷಕ್ಕೆ ನಿಷ್ಠರಾಗಿ ಉಳಿದಿರುವುದು ಕಾಂಗ್ರೆಸ್ ಪಕ್ಷದ ಬಗ್ಗೆ ಅವರಲ್ಲಿರುವ ರಾಜಿ ಇಲ್ಲದ ನಿಷ್ಠೆಗೆ ಸಾಕ್ಷಿಯಾಗಿದೆ, ಇದು ಕಾಂಗ್ರೆಸ್ ಪಕ್ಷದ ಲಕ್ಷಾಂತರ ಕಾರ್ಯಕರ್ತರ ಪಾಲಿಗೆ ಸ್ಪೂರ್ತಿದಾಯಕ ನಡವಳಿಕೆಯಾಗಿದೆ.
ಕೋಮುವಾದಿ ಶಕ್ತಿಗಳನ್ನು ಸೋಲಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಜೊತೆಯಲ್ಲಿ ಡಿ.ಕೆ. ಶಿವಕುಮಾರ್ ಹಗಲಿರುಳು ದುಡಿದಿದ್ದಾರೆ, ರಾಜ್ಯವನ್ನು ಸರ್ವಜನಾಂಗದ ಶಾಂತಿಯ ತೋಟವಾಗಿ ಮತ್ತೆ ಕಟ್ಟುವಲ್ಲಿ ನನ್ನ ಹೆಗಲಿಗೆ ಹೆಗಲಾಗಿ ನಿಂತಿದ್ದಾರೆ.
ನನಗಿಂತ ಕಿರಿಯರಾದ ಶಿವಕುಮಾರ್ ಅವರಿಗೆ ರಾಜಕೀಯದಲ್ಲಿ ಉಜ್ವಲ ಭವಿಷ್ಯವಿದೆ, 2028ರಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎನ್ನುವುದು ನಮ್ಮೆಲ್ಲರ ಬಯಕೆಯಾಗಿದೆ. ಇದಕ್ಕಾಗಿ ನಡೆಯುವ ಪಕ್ಷದ ಸಂಘಟನೆ ಮತ್ತು ಹೋರಾಟದಲ್ಲಿ ನಾನು ಕೂಡಾ ಜೊತೆ ಇರುತ್ತೇನೆ ಎಂದು ಸಿಎಂ ಬರೆದುಕೊಂಡಿದ್ದಾರೆ.