ಆನೇಕಲ್​ ತಾಲೂಕಿನ ಮರಾಠ ಭವನದಲ್ಲಿ ಆಯೋಜಿಸಿದ್ದ ಶಿವಾಜಿ ಜಯಂತಿಯಲ್ಲಿ ಕ್ಷತ್ರಿಯ ಮರಾಠ ಪರಿಷತ್​ ಅಧ್ಯಕ್ಷ ಎ.ಸುರೇಶರಾವ್​ ಸಾಟೆ, ಕಾರ್ಯದರ್ಶಿ ಸುನಿಲ್​ ರಾವ್​ ಚವ್ಹಾಣ್​, ಖಜಾಂಚಿ ವೆಂಕಟರಾವ್​ ಚವ್ಹಾಣ್​ ಇತರರು ಇದ್ದರು.  
ರಾಜ್ಯ

ಜಾತಿ ಮತ ಮೀರಿದ ಶಿವಾಜಿ / ANEKAL

ಆನೇಕಲ್​ : ಛತ್ರಪತಿ ಶಿವಾಜಿ ಮಹಾರಾಜರು ಜಾತಿ ಮತ ಮೀರಿ ನಿಲ್ಲುತ್ತಾರೆ. ಅವರನ್ನು ನೆನೆಯುವ ಇಂತಹ ಕಾರ್ಯಕ್ರಮಗಳು ಸಮಾಜಕ್ಕೆ ಹಾಗೂ ಮುಂದಿನ ಪೀಳಿಗೆಗೆ ಅತ್ಯವಶ್ಯಕ ಎಂದು ಶಾಸಕ ಬಿ.ಶಿವಣ್ಣ ಹೇಳಿದರು.
ಪಟ್ಟಣ ಸಮೀಪದ ಬನ್ನೇರುಘಟ್ಟ ರಸ್ತೆಯ ಮರಾಠ ಭವನದಲ್ಲಿ ಆಯೋಜಿಸಿದ್ದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶ್ವವೇ ಮೆಚ್ಚಿದ ನಾಯಕ ಶಿವಾಜಿ. ಕಠಿಣ ಜೀವನ ಮತ್ತು ಅಸಾಧಾರಣ ಸಾಧನೆಗಳ ಮೂಲಕ ಮಹಾರಾಜರು ದೇಶ ಕಟ್ಟುವ ಕಾಯಕದಲ್ಲಿ ನಿಸ್ವಾರ್ಥ ಸೇವಕರಾಗಿ ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ದಾಖಲಾಗಿದ್ದಾರೆ ಎಂದರು.
ಕೇಂದ್ರ ಮಾಜಿ ಸಚಿವ ಎ.ನಾರಾಯಣ ಸ್ವಾಮಿ ಮಾತನಾಡಿ, ಶಿವಾಜಿ ಜಯಂತಿಯನ್ನು ಶೈಕ್ಷಣಿಕ ಪ್ರಗತಿ ಮತ್ತು ಆಸಕ್ತರ ನೆರವಿನ ಸಂದರ್ಭವನ್ನಾಗಿ ರೂಪಿಸುವ ಪರಿಷತ್​ ಕಾರ್ಯ ಶ್ಲಾಘನೀಯ. ಕೆಲಸ ಹಾಗೂ ಅವರು ರೀತಿ&ನೀತಿ ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶಕ. ಶಿವಾಜಿ ಅನುಸರಣೆಯಿಂದ ಮರಾಠರು ಹಿಂದೂ ಪಾಲಕರು ಎಂಬುದನ್ನು ದೇಶಪ್ರೇಮದ ಮೂಲಕ ಪ್ರತಿಪಾದಿಸುತ್ತಾ ಬಂದಿದ್ದಾರೆ ಎಂದು ಹೇಳಿದರು.
ಶಿವಾಜಿ ಪ್ರತಿಮೆಯೊಂದಿಗೆ ಪಟ್ಟಣದ ರಾಜ ಬೀದಿಗಳಲ್ಲಿ ಡೊಳ್ಳುಕುಣಿತ ಸಮೇತ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ಬಾಲ ಗಂಗಾಧರ ತಿಲಕ್​, ಗಾಂಧಿ ಮತ್ತು ಡಾ.ಅಂಬೇಡ್ಕರ್​ ವೃತ್ತಗಳಲ್ಲಿನ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಲಾಯಿತು.
ಕೇಂದ್ರ ಸಮಿತಿಯಿಂದ ವಿದ್ಯಾರ್ಥಿ ವೇತನ, ವೃದ್ದಾಪ್ಯ, ಅಂಗವಿಕಲ ವೇತನ ವಿತರಿಸಲಾಯಿತು. ಮರಾಠ ಭವನದ ವಿಸ್ತರಣೆಗೆ ಪರಿಷತ್​ ಅಧ್ಯಕ್ಷ ಮತ್ತು ಕೇಂದ್ರದ ಮಾಜಿ ಮಂತ್ರಿಗಳಿಂದ ಆರ್ಥಿಕ ನೆರವು ಘೋಷಿಸಲಾಯಿತು.
ಮೋಹನರಾವ್​ ಶಿವಾಜಿ ಕುರಿತು ಉಪನ್ಯಾಸ ನೀಡಿದರು. ಗೌರ್ನಿಂಗ್​ ಕೌನ್ಸಿಲ್​ ಛೇರ್ಮನ್​ ಎಸ್​.ಆರ್​. ಸಿಂಧ್ಯಾ, ಜಿಲ್ಲಾಧ್ಯಕ್ಷ ವಿಕಾಸ್​ ಚವ್ಹಾಣ್​, ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ನೂತನ್​ ರಾವ್​, ಪುರಸಭೆ ಮಾಜಿ ಅಧ್ಯಕ್ಷ ಬಿ.ನಾಗರಾಜ್, ಉಪಾಧ್ಯಕ್ಷೆ ಚಂದ್ರಿಕಾ ಹನುಮಂತರಾವ್​, ಆನೇಕಲ್​ ಶಾಖೆ ಅಧ್ಯಕ್ಷ ಚಂದ್ರರಾವ್​, ಜಗನ್ನಾಥರಾವ್​ ಬಹುಳೆ, ಶಂಕರರಾವ್​, ಮುಖಂಡರಾದ ದೊಡ್ಡಹಾಗಡೆ ಶಂಕರ್​, ಜಯಪ್ರಕಾಶ್​, ಮಾರ್ಕಂಡರಾವ್​ ಪವಾರ್​ ಇದ್ದರು.