Shivaji, the epitome of courage and endurance
ಗುಬ್ಬಿ : ಸ್ವರಾಜ್ಯಕ್ಕಾಗಿ ಹೋರಾಟವನ್ನು ಹುಟ್ಟು ಹಾಕಿ ಗೆರಿಲ್ಲಾ ಯುದ್ಧದ ಪ್ರವರ್ತಕ ಎಂದೆನಿಸಿ ವಿಭಜಿತ ಭೂಮಿಯಲ್ಲಿ ಧಾರ್ಮಿಕ ಸಹಿಷ್ಣುತೆಯ ರಾಜ್ಯವನ್ನು ಸ್ಥಾಪಿಸಿದ ಕೀರ್ತಿ ಛತ್ರಪತಿ ಶಿವಾಜಿ ಅವರಿಗೆ ಸಲ್ಲುತ್ತದೆ ಎಂದು ಯುವ ಮುಖಂಡ ರಂಜಿತ್ ಕಾಳೆ ತಿಳಿಸಿದರು.
ತಾಲೂಕಿನ ಮರಾಠಿಪಾಳ್ಯ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಶಿವಾಜಿ ಮಹಾರಾಜರ ಜೀವನ, ದಾರ್ಶನಿಕ ನಾಯಕನಿಂದ ಗೌರವಾನ್ವಿತ ರಾಜನವರೆಗಿನ ಅವರ ಪ್ರಯಾಣ ಇಂದು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಶಿವಾಜಿ ಮಹಾರಾಜರ ಧೈರ್ಯ ಮತ್ತು ಸ್ಫೂರ್ತಿದಾಯಕ ಕಾರ್ಯಗಳನ್ನು ಗೌರವಿಸಬೇಕಿದೆ. ಶಿವಾಜಿಯ ತಾಯಿ ಜೀಜಾಬಾಯಿ ಮತ್ತು ಮಾರ್ಗದರ್ಶಕ ದಾದಾಜಿ ಕೊಂಡದೇವ ಅವರ ಕೊಡುಗೆ ಶಿವಾಜಿ ಬದುಕಿನಲ್ಲಿ ಮಹತ್ತರ ತಿರುವು ತಂದುಕೊಟ್ಟಿತು ಎಂದರು.
ಶಾಮರಾವ್ ಕಾಳೆ ಮಾತನಾಡಿ, ಉತ್ತಮ ಮಿಲಿಟರಿ ಕೌಶಲ ಮತ್ತು ಬುದ್ಧಿವಂತ ತಂತ್ರಗಳನ್ನು ಬೆಳೆಸಿಕೊಂಡಿದ್ದ ಶಿವಾಜಿ ಅವರು ತಮ್ಮ ಜನರನ್ನು ದಮನಿಸಿದ ಮೊಲ್ ಮತ್ತು ಆದಿಲ್ ಶಾಹಿ ಆಡಳಿತಗಾರರ ವಿರುದ್ಧ ದಿಟ್ಟ ಹೋರಾಟ ನಡೆಸಿದ್ದರು. ಅವರಲ್ಲಿನ ಧೈರ್ಯ ಮತ್ತು ನಾಯಕತ್ವ ಅವರನ್ನು ನಾಯಕನನ್ನಾಗಿ ಮಾಡಿತು ಎಂದರು.
ಮುಖಂಡ ರು ಗಾಯಕ್ವಾಡ್ ಮಾತನಾಡಿ, ಶಿವಾಜಿ ಸ್ಮರಣೆ ಹಿಂದೂ ಧರ್ಮದಲ್ಲಿ ವಿಶೇಷ ಗೌರವ ಪಡೆದುಕೊಂಡಿದೆ. ಅವರ ಧೈರ್ಯ ಮತ್ತು ಸ್ಥಿತಿಸ್ಥಾಪಕತ್ವದ ಮಹತ್ವವನ್ನು ಎಲ್ಲರಿಗೂ ತಿಳಿಯಪಡಿಸುವ ಅರ್ಥಪೂರ್ಣ ಜಯಂತಿ ಆಚರಣೆಯಾಗಲಿ ಎಂದರು.
ಈ ಸಂದರ್ಭದಲ್ಲಿ ಶಿವಾಜಿ ಭಾವಚಿತ್ರದ ಮೆರವಣಿಗೆ ಅದ್ದೂರಿಯಾಗಿ ನೆರವೇರಿತು. ಸಾರ್ವಜನಿಕರಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು.