Chandru Lamani | ಶಿರಹಟ್ಟಿ ಶಾಸಕ ಚಂದ್ರು ಲಮಾಣಿ 
ರಾಜ್ಯ

ಬೆಂಗಳೂರಿನತ್ತ ಶಿರಹಟ್ಟಿ ಶಾಸಕ; ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಚಂದ್ರು ಲಮಾಣಿ ಹಾಜರು ಸಾಧ್ಯತೆ | Chandru Lamani

ಗದಗ: ಲಂಚ ಪ್ರಕರಣದಲ್ಲಿ ಲೋಕಾಯುಕ್ತರ ಬಲೆಗೆ ಬಿದ್ದು ಆರೋಪಿ ಸ್ಥಾನದಲ್ಲಿ ನಿಂತಿರುವ ಶಿರಹಟ್ಟಿ ಶಾಸಕ ಚಂದ್ರು ಲಮಾಣಿ(Chandru Lamani), ಆಪ್ತ ಸಹಾಯಕರಾದ ಮಂಜು ವಾಲ್ಮೀಕಿ ಮತ್ತು ಗುರು ಲಮಾಣಿಯನ್ನು ತಡರಾತ್ರಿ 2 ಗಂಟೆಗೆ ಗದಗ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಈ ವೇಳೆ ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ವಾಕ್ಸಮರ, ತಳ್ಳಾಟ-ನೂಕಾಟ ನಡೆದು ಕೆಲಹೊತ್ತು ಹೈಡ್ರಾಮಾ ನಡೆಯಿತು.
ಆರೋಗ್ಯ ತಪಾಸಣೆ ಬಳಿಕ ಮೂವರನ್ನು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆದುಕೊಂಡು ಹೋಗಲಾಗಿದ್ದು, ಒಂದೇ ಪ್ರಕರಣ ಆಗಿದ್ದರಿಂದ ಆಪ್ತ ಸಹಾಯಕರನ್ನು ಬೆಂಗಳೂರಿನ ನ್ಯಾಯಾಲಯಕ್ಕೆ ಹಾಜರು ಪಡಿಸಲು ಲೋಕಾಯುಕ್ತರು ಕರೆದುಕೊಂಡು ಹೋಗಿದ್ದಾರೆ. ಭಾನುವಾರ ಕೋರ್ಟ ರಜೆ ಇರುವ ಹಿನ್ನಲೆಯಲ್ಲಿ ನ್ಯಾಯಾಧೀಶರ ಗೃಹ ಕಚೇರಿಯಲ್ಲಿ ಚಂದ್ರು ಲಮಾಣಿ ಮತ್ತು ಇತರರನ್ನು ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಕೇಳುವ ಸಾಧ್ಯತೆ ಇದೆ.

ಇದೇ ಮೊದಲಲ್ಲ

ಶಿರಹಟ್ಟಿ ತಾಲ್ಲೂಕು ಆಸ್ಪತ್ರೆಯಲ್ಲಿ ವೈದ್ಯರಾಗಿದ್ದ ವೇಳೆ ಡಾ. ಚಂದ್ರು ಲಮಾಣಿ ವಿರುದ್ಧ ಮೊದಲ ಬಾರಿಗೆ ಲೋಕಾಯುಕ್ತ ಪ್ರಕರಣ ದಾಖಲಾಗಿತ್ತು. ಚಂದ್ರು ಲಮಾಣಿ ಬಿಜೆಪಿಯಿಂದ ಸ್ಪರ್ಧೆ ಬಯಸಿದ್ದ ವೇಳೆಗೆ ಅವರು ತಮ್ಮ ಕೆಲಸಕ್ಕೆ ನೀಡಿದ್ದ ರಾಜೀನಾಮೆ ಇನ್ನೂ ಅಂಗೀಕಾರಗೊಂಡಿರಲಿಲ್ಲ, ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆಯಾದ ಬಳಿಕವೂ ಅವರಿಗೆ ಟಿಕೆಟ್‌ ಕೈ ತಪ್ಪುವ ಭೀತಿ ಎದುರಾಗಿತ್ತು.
ಅಂದಿನ ಸಮಯದಲ್ಲಿ ಜಿಲ್ಲಾಧಿಕಾರಿಯಾಗಿದ್ದ ವೈಶಾಲಿ ಎಂ.ಎಲ್‌. ಅವರು, 2023ರ ಏಪ್ರಿಲ್‌ 17ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ ಆಯುಕ್ತರಿಗೆ ಪತ್ರ ಬರೆದು ಈ ಕುರಿತಾಗಿ ಮಾಹಿತಿ ನೀಡಿದ್ದರು.
ಡಾ. ಚಂದ್ರು ಲಮಾಣಿ ಅವರು ತಮ್ಮ ಮೇಲೆ ಬಂದಿರುವ ಆರೋಪಗಳಿಂದ ನುಣುಚಿಕೊಳ್ಳಲು 2021ರ ಜುಲೈ 31ರಂದು ವೈದ್ಯ ವೃತ್ತಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಅವರ ರಾಜೀನಾಮೆ ಈವರೆಗೆ ಅಂಗೀಕಾರಗೊಂಡಿಲ್ಲ. ಸರ್ಕಾರಿ ನೌಕರರಾಗಿದ್ದರೂ ರಾಜಕೀಯ ಪ್ರಭಾವ ಬಳಸಿ, ಶಿರಹಟ್ಟಿ ಮೀಸಲು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಿಸಿಕೊಂಡು ಸರ್ಕಾರಿ ನೌಕರರ ನಿಯಮಗಳ ಶಿಸ್ತು ಉಲ್ಲಂಘನೆ ಮಾಡಿದ್ದಾರೆ’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.
ಚಂದ್ರು ಲಮಾಣಿ ಕೊನೆಗೂ ಬಿಜೆಪಿಯಿಂದ ಬಿ ಫಾರಂ ಪಡೆದು, ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಕೂಡ ದಾಖಲಿಸಿದ್ದರು.