ಮೈಸೂರಿನಲ್ಲಿ 'ಶಿಲ್ಪ ಸಮಾಗಮ ಪ್ರದರ್ಶನ 2026': ಕುಶಲಕರ್ಮಿಗಳಿಗೆ ಆರ್ಥಿಕ ಸಬಲೀಕರಣದ ಭರವಸೆ 
ರಾಜ್ಯ

ಮೈಸೂರಿನಲ್ಲಿ 'ಶಿಲ್ಪ ಸಮಾಗಮ ಪ್ರದರ್ಶನ 2026': ಕುಶಲಕರ್ಮಿಗಳಿಗೆ ಆರ್ಥಿಕ ಸಬಲೀಕರಣದ ಭರವಸೆ

ಬೆಂಗಳೂರು: ಮೈಸೂರಿನ ಅರಮನೆ ಮೈದಾನದಲ್ಲಿರುವ ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಆಯೋಜಿಸಲಾಗಿರುವ 9 ದಿನಗಳ 'ಶಿಲ್ಪ ಸಮಾಗಮ ಪ್ರದರ್ಶನ 2026' ಇಂದಿಗೆ ಮುಕ್ತಾಯಗೊಳ್ಳಲಿದೆ. ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಡಿಯಲ್ಲಿ ನಡೆಯುತ್ತಿರುವ ಈ ಪ್ರದರ್ಶನಕ್ಕೆ ಸಚಿವಾಲಯದ ಕಾರ್ಯದರ್ಶಿ ಸುಧಾಂಶು ಪಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪರಿಶಿಷ್ಟ ಜಾತಿಗಳು, ಇತರೆ ಹಿಂದುಳಿದ ವರ್ಗಗಳು ಮತ್ತು ಸಫಾಯಿ ಕರ್ಮಚಾರಿ ಸಮುದಾಯಗಳ ಕುಶಲಕರ್ಮಿಗಳಿಗೆ ಮಾರುಕಟ್ಟೆ ಪ್ರವೇಶ ಕಲ್ಪಿಸುವ ಹಾಗೂ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಮೇಳವನ್ನು ಹಮ್ಮಿಕೊಳ್ಳಲಾಗಿದೆ.

ಪ್ರದರ್ಶನದಲ್ಲಿ ಒಟ್ಟು 83 ಮಳಿಗೆಗಳಿದ್ದು, ಅದರಲ್ಲಿ 80 ಮಳಿಗೆಗಳನ್ನು ಕುಶಲಕರ್ಮಿಗಳಿಗೆ ಮೀಸಲಿಡಲಾಗಿದೆ. ವಿಶೇಷವೆಂದರೆ, ಇದರಲ್ಲಿ 37 ಮಳಿಗೆಗಳು ಮಹಿಳಾ ಕುಶಲಕರ್ಮಿಗಳ ಒಡೆತನದಲ್ಲಿದೆ. ಕರ್ನಾಟಕ ಸೇರಿದಂತೆ ಒಟ್ಟು 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕುಶಲಕರ್ಮಿಗಳು ತಮ್ಮ ಕರಕುಶಲ ಹಾಗೂ ಕೈಮಗ್ಗ ಉತ್ಪನ್ನಗಳನ್ನು ಪ್ರದರ್ಶಿಸಿದ್ದಾರೆ.

ಕುಶಲಕರ್ಮಿಗಳಿಗೆ ಉಚಿತ ಮಳಿಗೆಗಳು, ಪ್ರಯಾಣ ಭತ್ಯೆ, ಸರಕು ಸಾಗಣೆ ಮತ್ತು ಊಟದ ವ್ಯವಸ್ಥೆಯನ್ನು ಸಚಿವಾಲಯ ಕಲ್ಪಿಸಿದೆ. 2026-27ನೇ ಸಾಲಿನ ಮೊದಲ ಪ್ರದರ್ಶನ ಇದಾಗಿದ್ದು, ಮುಂಬರುವ ದಿನಗಳಲ್ಲಿ ಗುವಾಹಟಿ, ನವದೆಹಲಿ, ಜೋಧಪುರ, ಲಖನೌ ಹಾಗೂ ಸೂರಜ್ಕುಂಡ್‌ನಲ್ಲಿಯೂ ಇಂತಹ ಪ್ರದರ್ಶನಗಳನ್ನು ಆಯೋಜಿಸಲು ಸಚಿವಾಲಯ ಮಹತ್ವದ ಉದ್ದೇಶವನ್ನು ಹೊಂದಿದೆ. ಹಿಂದುಳಿದ ಸಮುದಾಯಗಳ ಆರ್ಥಿಕ ಸಬಲೀಕರಣ ಮತ್ತು ಸಾಂಪ್ರದಾಯಿಕ ಕಲೆಗಳ ಸಂರಕ್ಷಣೆಗೆ ಇಂತಹ ವೇದಿಕೆಗಳು ಬಹಳಷ್ಟು ಸಹಕಾರಿಯಾಗಿದೆ ಎಂದು ಕಾರ್ಯದರ್ಶಿಗಳು ಅಭಿಪ್ರಾಯಿಸಿದರು.