Shidlakatt village colony road work poor? 
ರಾಜ್ಯ

ಶಿಡ್ಲಕಟ್ಟೆ ಗ್ರಾಮದ ಕಾಲನಿ ರಸ್ತೆ ಕಾಮಗಾರಿ ಕಳಪೆ?

ಹುಳಿಯಾರು: ಹುಳಿಯಾರು ಸಮೀಪದ ಶಿಡ್ಲಕಟ್ಟೆದ ಪರಿಶಿಷ್ಟರ ಕಾಲನಿಯಲ್ಲಿ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಮೂಲಕ 2023&24ನೇ ಸಾಲಿನಲ್ಲಿ ಮಂಜೂರಾದ ಸಿಮೆಂಟ್​ ರಸ್ತೆ ಕಾಮಗಾರಿ ಕಳಪೆ ಹಾಗೂ ಅವೈಜ್ಞಾನಿಕವಾಗಿ ನಡೆಯುತ್ತಿದೆ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ.
ಕೆಆರ್​ಐಡಿಎಲ್​ ಸಿರಾ ಉಪವಿಭಾಗದಿಂದ ತಯಾರಿಸಿದ ಅಂದಾಜು ಪಟ್ಟಿಯ ಪ್ರಕಾರ, ಪೋಚಕಟ್ಟೆ ಮುಖ್ಯರಸ್ತೆಯಿಂದ ಶಿಡ್ಲಕಟ್ಟೆ ಪರಿಶಿಷ್ಟರ ಕಾಲನಿಗೆ ಸಂಪರ್ಕಿಸುವ ಸುಮಾರು 342 ಮೀಟರ್​ ಉದ್ದ, 4 ಮೀಟರ್​ ಅಗಲ ಮತ್ತು 0.15 ಮೀಟರ್​ ದಪ್ಪದ ಸಿಮೆಂಟ್​ ರಸ್ತೆ ನಿರ್ಮಿಸಬೇಕಾಗಿದೆ. ಈ ಕಾಮಗಾರಿಯಲ್ಲಿ ನೆಲವನ್ನು ಸಡಿಲಗೊಳಿಸಿ ಸಮಮಾಡುವುದು, ಜಲ್ಲಿ ಮತ್ತು ಮಣ್ಣನ್ನು ಹಾಕಿ ರೋಲರ್​ ಮೂಲಕ ಬಿಗಿ ಮಾಡುವುದು, ನಂತರ ವೆಟ್​ ಮಿಕ್ಸ್​ ಮ್ಯಾಕಡಂ (ಡ್ಲ್ಯುಎಂಎಂ) ಹಾಕಿ ವೈಜ್ಞಾನಿಕವಾಗಿ ರಸ್ತೆ ನಿರ್ಮಿಸಬೇಕು ಎಂದು ಸ್ಪಷ್ಟವಾಗಿ ನಮೂದಿಸಲಾಗಿದೆ. ಆದರೆ ಸ್ಥಳದಲ್ಲಿ ನಡೆಯುತ್ತಿರುವ ಕಾಮಗಾರಿ ಸಂಪೂರ್ಣವಾಗಿ ಈ ಅಂದಾಜು ನಿಯಮಗಳಿಗೆ ವಿರುದ್ಧವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಜಲ್ಲಿ ಹಾಕಬೇಕಾದ ಸ್ಥಳದಲ್ಲಿ ಜಲ್ಲಿಯನ್ನು ಬಳಸದೇ ಎಂ ಸ್ಯಾಂಡ್​ ಮತ್ತು ಅರ್ಧ ಇಂಚಿನ ಚೂರು ಕಲ್ಲುಗಳನ್ನು ಮಾತ್ರ ಹಾಕಲಾಗುತ್ತಿದೆ. ನೆಲವನ್ನು ಬಿಗಿ ಮಾಡಲು ಅಗತ್ಯವಿರುವ ರೋಲರ್​ ಬಳಸಿಲ್ಲ. ಯಾವುದೇ ತಾಂತ್ರಿಕ ಕ್ರಮ ಪಾಲಿಸದೇ ಬೇಕಾಬಿಟ್ಟಿಯಾಗಿ ಕಾಮಗಾರಿ ಮಾಡಲಾಗುತ್ತಿದೆ. ಈಗಾಗಲೇ ರಸ್ತೆ ಬದಿ ಕಿತ್ತು ಹೋಗಿದೆ. ದೀರ್ಕಾಲ ಬಾಳಿಕೆ ಬರುವುದಿಲ್ಲ. ಸರ್ಕಾರ ಮಂಜೂರು ಮಾಡಿದ 25 ಲಕ್ಷ ರೂ. ದುರುಪಯೋಗಪಡಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ರಸ್ತೆ ನಿರ್ಮಾಣಕ್ಕೂ ಮೊದಲು ಚರಂಡಿ ವ್ಯವಸ್ಥೆ ಮಾಡಿಲ್ಲ. ಮಳೆಗಾಲದಲ್ಲಿ ರಸ್ತೆ ಮೇಲೆ ನೀರು ನಿಂತು, ಆ ನೀರು ಮನೆಗಳೊಳಗೆ ನುಗ್ಗುವ ಸಾಧ್ಯತೆ ಹೆಚ್ಚಿದೆ ಎಂದು ಆತಂಕ ವ್ಯಕ್ತಪಡಿಸಿದ ಗ್ರಾಮಸ್ಥರು, ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಹಾಗೂ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತಕ್ಷಣ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.