ಸಜ್ಜನ್‌ರಾವ್ ವೃತ್ತದಲ್ಲಿ ಸುಬ್ರಮಣ್ಯಸ್ವಾಮಿಯ ವೈಭವದ ಬೆಳ್ಳಿ ರಥೋತ್ಸವ
- ಸಜ್ಜನ್‌ರಾವ್ ವೃತ್ತದಲ್ಲಿ ವೈಭವದ ಬೆಳ್ಳಿ ರಥೋತ್ಸವ
- ವಲ್ಲಿ ದೇವಸೇನಾ ಸಮೇತ ಸಜ್ಜನ್‌ರಾವ್ ವೃತ್ತದಲ್ಲಿ ವೈಭವದ ಬೆಳ್ಳಿ ರಥೋತ್ಸವ ಮೂರ್ತಿ ಪ್ರತಿಷ್ಠಾಪನೆ
- ನಗರದ ಸುಬ್ರಹ್ಮಣ್ಯ ಸ್ವಾಮಿ ದೇವಾಲಯಗಳಲ್ಲಿ ವಿಶೇಷ ಅಲಂಕಾರ ಮತ್ತು ಪೂಜೆ
ಬೆಂಗಳೂರು: ಮಾರ್ಗಶಿರ ಮಾಸ (ಕಾರ್ತಿಕ ಮಾಸದ ಬಳಿಕ ಬರುವ ಮಾಸ)ದ ಷಷ್ಠಿ ಪ್ರಯುಕ್ತ ನಗರದ ವಿಶ್ವೇಶ್ವರಪುರದ ಸಜ್ಜನ್‌ರಾವ್ ವೃತ್ತದಲ್ಲಿರುವ ಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ಬೆಳ್ಳಿ ರಥೋತ್ಸವ ವಿಜೃಂಭಣೆಯಿಂದ ಆಚರಣೆಗೊಂಡಿತು.
ಈ ಬೆಳ್ಳಿ ತೇರಿನ ಉತ್ಸವಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರಿದ್ದರಿಂದ ಸಜ್ಜನ್‌ರಾವ್ ವೃತ್ತದಲ್ಲಿ ಜಾತ್ರೆ ನಡೆದಂತಿತ್ತು. ಮುಂಜಾನೆಯಿಂದಲೇ ಪೂಜಾ ಕೈಂಕರ್ಯಗಳು ಶಾಸೋಕ್ತವಾಗಿ ಆರಂಭವಾದವು. ನಂತರ ವಲ್ಲಿ ದೇವಸೇನಾ ಸಮೇತ ಸುಬ್ರಮಣ್ಯ ಸ್ವಾಮಿಯ ಮೂರ್ತಿ ಪ್ರತಿಷ್ಠಾಪನೆ ಮಾಡಿ ಬೆಳ್ಳಿ ತೇರಿಗೆ ಚಾಲನೆ ನೀಡಲಾಯಿತು. ಈ ವೇಳೆ ನೆರೆದ ಭಕ್ತರು ದೇವರಿಗೆ ಹೂ, ಹಣ್ಣು ಅರ್ಪಿಸಿ ಭಕ್ತಿ ಮೆರೆದರು.
ದೇವರ ಮೂರ್ತಿಗಳನ್ನು ಹೊತ್ತು ಹೂಗಳಿಂದ ಅಲಂಕೃತವಾಗಿದ್ದ ಬೆಳ್ಳಿ ತೇರು ಸಜ್ಜನ್ ರಾವ್ ವೃತ್ತದಲ್ಲಿ ಅರ್ಧ ಸುತ್ತು ಹಾಕಿ ಒಂದು ಬದಿ ನಿಂತಿತು. ಬಳಿಕ ಭಕ್ತರು ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಬೆಳ್ಳಿ ರಥೋತ್ಸವ:
ಸಜ್ಜನ್‌ರಾವ್ ವೃತ್ತದಲ್ಲಿ ‘ವಲ್ಲಿ ದೇವಸೇನಾ ಸಮೇತ ಸುಬ್ರಮಣ್ಯ ಸ್ವಾಮಿ ದೇವಸ್ಥಾನವು 1930ರಲ್ಲಿ ಸ್ಥಾಪನೆಯಾಯಿತು. ಅಂದಿನಿಂದಲೂ ಧಾರ್ಮಿಕ ಆಚರಣೆಗಳು ನಿರಂತರವಾಗಿ ನಡೆಯುತ್ತಾ ಬಂದಿದ್ದು, ಕಾರ್ತಿಕ ಮಾಸ ಬಳಿಕ ಬರುವ ಷಷ್ಠಿಯಂದು ನಡೆಯುವ ಬೆಳ್ಳಿ ರಥೋತ್ಸವಕ್ಕೆ ಸಾವಿರಾರು ಭಕ್ತರು ಸೇರುತ್ತಾರೆ. ದೇವಾಲಯ ಹಾಗೂ ಸುತ್ತಮುತ್ತಲ ರಸ್ತೆಗೆ ವಿಶೇಷ ದೀಪಾಲಂಕಾರ ಮಾಡಲಾಗಿತ್ತು.
ನಗರದ ಹಲವೆಡೆ ಪೂಜೆ:
ಷಷ್ಠಿ ಅಂಗವಾಗಿ ನಗರದ ಸುಬ್ರಹ್ಮಣ್ಯ ಸ್ವಾಮಿ ದೇವಾಲಯಗಳಲ್ಲಿ ವಿಶೇಷ ಅಲಂಕಾರ ಮತ್ತು ಪೂಜೆ ನಡೆಯಿತು. ನಾನಾ ಬಡಾವಣೆಗಳಲ್ಲಿ ಅಶ್ವತ್ಥಕಟ್ಟೆಯಲ್ಲಿನ ನಾಗರಕಲ್ಲುಗಳಿಗೆ ಬೆಳಗ್ಗೆಯಿಂದಲೇ ಭಕ್ತರು ಹಾಲು-ತುಪ್ಪು ಸಮರ್ಪಿಸಿ ವಿಶೇಷವಾಗಿ ನಾಗದೇವರನ್ನು ಸ್ಮರಿಸಿದರು.