ಶಹಾಬಾದ್ನ ಹನುಮಾನ ನಗರದಲ್ಲಿ ಕಳ್ಳರ ದಾಳಿಗೆ ಒಳಗಾಗಿ ಕಾಲು ಮುರಿದುಕೊಂಡಿರುವ ಶ್ವಾನ.
- ಪೆಪ್ಪರ್ ಸೆ, ಕಲ್ಲಿನ ಏಟಿಗೂ ಜಗ್ಗದೆ ಹೋರಾಟ
- ದರೋಡೆಯಿಂದ ಮನೆಯನ್ನು ರಕ್ಷಿಸಿದ ಶ್ವಾನ
ಶಹಾಬಾದ್: ಹನುಮಾನ್ ನಗರ ಬಡಾವಣೆ ಮನೆಯೊಂದಕ್ಕೆ ನುಗ್ಗಿದ ಕಳ್ಳರನ್ನು ಓಡಿಸಲು ಶ್ವಾನವೊಂದು ತೀವ್ರ ಹೋರಾಟ ನಡೆಸಿ ಯಶಸ್ವಿಯಾದ ಪ್ರಸಂಗ ಶುಕ್ರವಾರ ಬೆಳಕಿಗೆ ಬಂದಿದೆ.
ನಗರದ ಗಂಗಾ, ಜಮುನಾ, ಸರಸ್ವತಿ ಬಿಲ್ಡಿಂಗ್ ಹಿಂದುಗಡೆಯ ಶ್ರೀನಿವಾಸ ಕಾರ್ಪೆಂಟರ್ ಮನೆಯಲ್ಲಿ ಒಬ್ಬ ವೃದ್ಧ, ಹೆಣ್ಣುಮಕ್ಕಳು, ಶ್ರೀನಿವಾಸ ಎಂಬುವರು ವಾಸಿಸುತ್ತಿದ್ದರು. ಇವರು ಶೇರು ಎಂಬ ಶ್ವಾನವನ್ನು ಸಾಕಿದ್ದಾರೆ. ಮನೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದ ಕಳ್ಳರು ದರೋಡೆಗೆ ಹೊಂಚು ಹಾಕಿ ಮೂರ್ನಾಲ್ಕು ವಾರದ ಹಿಂದೆ ಮಧ್ಯರಾತ್ರಿ ಗೇಟ್ ಹಾರಿ ಒಳಗೆ ಬಂದಿದ್ದರು. ಈ ವೇಳೆ ಮೆಟ್ಟಿಲುಗಳಲ್ಲಿ ಮಲಗಿದ್ದ ಶ್ವಾನ ಗೇಟ್ ಹಾರಿ ಬಂದಿದ್ದ ಕಳ್ಳರ ಮೇಲೆ ಏರಗಿತು. ವಿಚಲಿತರಾದ ಕಳ್ಳರು ಕೆಲಕಾಲ ತಪ್ಪಿಸಿಕೊಳ್ಳಲು ಪರದಾಡಿದರು. ಆದರೂ ಶ್ವಾನ ಬಿಡದ್ದರಿಂದ ಕಣ್ಣಿಗೆ ಪೆಪ್ಪರ್ ಸೆ ಸಿಂಪಡಿಸಿದರು. ಇದರಿಂದ ನಾಯಿ ಕಣ್ಣಿಂದ ನೀರು ಸುರಿಯಲಾರಂಭಿಸಿತು. ಆದರೂ ಬಿಡದೆ ದಾಳಿ ಮುಂದುವರಿಸಿತು. ಕೊನೆಗೆ ಹೇಗಾದರೂ ಮಾಡಿ ತಪ್ಪಿಸಿಕೊಳ್ಳಬೇಕು ಎಂದು ಅಲ್ಲೇ ಬಿದ್ದಿದ್ದ ಕಲ್ಲನ್ನು ನಾಯಿ ಕಾಲ ಮೇಲೆ ಹಾಕಿ ಚೋರರು ಓಡಿಹೋಗಿದ್ದಾರೆ.
ನಾಯಿ ಕೂಗಾಟದಿಂದ ಎಚ್ಚರಗೊಂಡ ಮನೆಯವರು ಕೂಡಲೇ ಹೊರಬಂದಿದ್ದಾರೆ. ಶ್ವಾನ (ಶೇರು) ಎಡಭಾಗದ ಕಾಲಿನ ಮೂಳೆ ಮುರಿದಿದ್ದು, ಹತ್ತಿರದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.