High court 
ರಾಜ್ಯ

ಶರಾವತಿ ಪಿಎಸ್​ಪಿ ಕಾರ್ಯಸಾಧುವಲ್ಲ| ಕೇಂದ್ರ ಸರ್ಕಾರದ ಮಾಹಿತಿ| High court

ಬೆಂಗಳೂರು:  ಶರಾವತಿ ವನ್ಯಜೀವಿ ಧಾಮದೊಳಗೆ ನಡೆಸಲು ಉದ್ದೇಶಿಸಿರುವ ಪಂಪ್ಡ್​ ಸ್ಟೋರೇಜ್​ ಯೋಜನೆಯನ್ನು ಅನುಷ್ಠಾನಗೊಳಿಸುವುದು ಕಾರ್ಯಸಾಧುವಲ್ಲ ಎಂದು ತಜ್ಞರ ಸಮಿತಿ ವರದಿ ನೀಡಿದೆ ಎಂದು ಕೇಂದ್ರ ಸರ್ಕಾರ ಹೈಕೋರ್ಟ್​ಗೆ ತಿಳಿಸಿದೆ. 
ಉದ್ದೇಶಿತ ಯೋಜನೆಗೆ ರಾಜ್ಯ ವನ್ಯಜೀವಿ ಮಂಡಳಿ ನೀಡಿರುವ ಅನುಮೋದನೆ ಮತ್ತು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿ ನೀಡಿರುವ ತಾತ್ವಿಕ ಒಪ್ಪಿಗೆಯನ್ನು ಪ್ರಶ್ನಿಸಿ ಸಾಗರದ ಅಖಿಲೇಶ್​ ಚಿಪ್ಲಿ ಮತ್ತಿತರರು ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಕೆ.ಎಸ್​. ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ಈ ವೇಳೆ ಮಾಹಿತಿ ನೀಡಿದ ಹೆಚ್ಚುವರಿ ಸಾಲಿಸಿಟರ್​ ಜನರಲ್​ ಅರವಿಂದ್​ ಕಾಮತ್​, ರಾಷ್ಟ್ರೀಯ ವನ್ಯಜೀವಿ ಮಂಡಳಿ ಮತ್ತು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ರಚಿಸಿದ್ದ ತ್ರಿಸದಸ್ಯ ಸಮಿತಿಯು ಈ ವರದಿ ನೀಡಿದೆ ಎಂದು ತಿಳಿಸಿದರು. ಸಮಿತಿಯು ಯೋಜನೆಯು ಪರಿಸರದ ಮೇಲೆ ಬೀರಬಹುದಾದ ಪ್ರಭಾವದ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸಿದ್ದು, ಯೋಜನೆ ಈ ಪ್ರದೇಶಕ್ಕೆ ಸೂಕ್ತವಲ್ಲ ಮತ್ತು ರಾಜ್ಯ ಸರ್ಕಾರ ನಡೆಸಿದ್ದ ಪರಿಸರ ಮೌಲ್ಯಮಾಪನವು ವಾಸ್ತವಿಕವಾಗಿ ತಪ್ಪಾಗಿದೆ ಎಂದು ತಿಳಿಸಿದರು.

ಅಂತಿಮ ವರದಿಗೆ ನಿರೀಕ್ಷೆ:

ಕೆಪಿಸಿಎಲ್​ ಪರ ವಾದಿಸಿದ ವಕೀಲರು, ಕೇಂದ್ರ ಸರ್ಕಾರ ರಚಿಸಿದ್ದ ಸಮಿತಿಯ ವರದಿ ತಮಗೆ ಇಂದು ಬೆಳಿಗ್ಗೆಯಷ್ಟೇ ಲಭ್ಯವಾಗಿದೆ. ಅದರನ್ನು ಪರಿಶೀಲಿಸಿ, ಪ್ರತಿಕ್ರಿಯೆ ಸಲ್ಲಿಸಲು ಕಾಲಾವಕಾಶ ಬೇಕು ಎಂದು ಕೋರಿದರು. ಅಲ್ಲದೆ, ಶರಾವತಿ ಪಿಎಸ್​ಪಿ ಯೋಜನೆಯ ಮುಂದುವರಿಕೆ ಕುರಿತಾದ ಅಂತಿಮ ನಿರ್ಧಾರವನ್ನು ರಾಷ್ಟ್ರೀಯ ವನ್ಯಜೀವಿ ಮಂಡಳಿ ಇನ್ನೂ ತಿಳಿಸಿಲ್ಲ. ಅದನ್ನು ನಿರೀಸಲಾಗುತ್ತಿದೆ ಎಂದು ತಿಳಿಸಿದರು. ಇದನ್ನು ಆಲಿಸಿದ ನ್ಯಾಯಪೀಠ ಮುಂದಿನ ವಿಚಾರಣೆಯನ್ನು ಅ.1ಕ್ಕೆ ನಿಗದಿಪಡಿಸಿದ್ದು, ವನ್ಯಜೀವಿ ಧಾಮದ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳದಂತೆ ರ್ನಿಬಂಧಿಸಿದ್ದ ಮಧ್ಯಂತರ ಆದೇಶವನ್ನು ಮುಂದುವರಿಸಿದೆ.
ℹ️

ಪರ್ಯಾಯ ಪರಿಶೀಲನೆಗೆ ಸೂಚನೆ 

ತ್ರಿಸದಸ್ಯ ಸಮಿತಿಯು ಯೋಜನೆಯು ಕಾರ್ಯಸಾಧುವಲ್ಲ ಎಂದು ಅಭಿಪ್ರಾಯಪಟ್ಟಿರುವ ಹಿನ್ನೆಲೆಯಲ್ಲಿ, ಪ್ರಸ್ತಾವಿತ ಶರಾವತಿ ವನ್ಯಜಿವಿ ಧಾಮದ ಪ್ರದೇಶದ ಹೊರಗೆ ಪರ್ಯಾಯ ಯೋಜನೆಗಳನ್ನು ಪರಿಗಣಿಸುವಂತೆ ಕೇಂದ್ರ ಪರಿಸರ ಸಚಿವಾಲಯವು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ ಎಂದು ವಿಚಾರಣೆ ವೇಳೆ ಎಎಸ್​ಜಿ ಅರವಿಂದ ಕಾಮತ್​ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಕಳವಳ ವ್ಯಕ್ತಪಡಿಸಿದ್ದ ಕೋರ್ಟ್​:
ಉದ್ದೇಶಿತ ಯೋಜನೆಯಿಂದ ವನ್ಯಜಿವಿಗಳ ಆವಾಸಕ್ಕೆ ಧಕ್ಕೆಯಾಗುವ ಸಾಧ್ಯತೆಯಿದೆ. ಶರಾವತಿ ಅಭಯಾರಣ್ಯವು ಅಪರೂಪದ ಸಿಂಹಬಾಲದ ಸಿಂಗಳೀಕಗಳ ಸಂರತ ಪ್ರದೇಶವಾಗಿದ್ದು, ಯೋಜನೆಯಿಂದ ಅವುಗಳ ಆವಾಸಸ್ಥಾನದ ಮೇಲಾಗುವ ಪರಿಣಾಮಗಳ ವೈಜ್ಞಾನಿಕ ಮೌಲ್ಯಮಾಪನದ ಅಗತ್ಯವಿದೆ. ಕಾಡಿನ ಮೇಲ್ಪದರ ನಾಶವಾದರೂ ಅದು ವನ್ಯಜಿವಿಗಳ ಸಂವಹನ ಮತ್ತು ಸಂಚಾರದ ಮೇಲೆ ಗಂಭೀರ ಪರಿಣಾಮಗಳನ್ನು ಬೀರಬಹುದು ಎಂದು ಹಿಂದಿನ ವಿಚಾರಣೆಗಳ ವೇಳೆ ಹೈಕೋರ್ಟ್​ ಕಳವಳ ವ್ಯಕ್ತಪಡಿಸಿತ್ತು. ಆ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದ ತ್ರಿಸದಸ್ಯ ಸಮಿತಿ ಈ ವರದಿ ನೀಡಿದೆ.