ಬೆಂಗಳೂರು : ಆಶ್ವೀಜ ಶುದ್ದ ಪ್ರತಿಪದೆಯಿಂದ ಆರಂಭವಾಗುವ ಶರನ್ನವರಾತ್ರಿ ಹಿನ್ನೆಲೆಯಲ್ಲಿ ನಗರದ ವಿವಿಧ ಶಕ್ತಿದೇವತೆಗಳ ದೇವಾಲಯದಲ್ಲಿ ಭಾನುವಾರ ವಿಶೇಷ ಪೂಜೆ ಆಂಭವಾಯಿತು. 10 ದಿನಗಳ ಕಾಲ ನಡೆಯುವ ವಿವಿಧ ಆಚರಣೆಗೆ ದೇವಾಲಯಗಳಲ್ಲಿ ಚಾಲನೆ ದೊರೆಯಿತು.
ನಾಡಹಬ್ಬದ ಸಂಭ್ರಮ ಕೇವಲ ಮೈಸೂರು ನಗರಕ್ಕೆ ಮಾತ್ರ ಸೀಮಿತವಾಗಿರದೆ ಬೆಂಗಳೂರಿನ ಹಲವು ದೇವಾಲಯಗಳಲ್ಲೂ ಕಂಡು ಬಂತು. ಬೆಳಗ್ಗಿನಿಂದಲೇ ಭಕ್ತರು ದೇವಾಲಯಗಳಿಗೆ ಭೇಟಿ ನೀಡಿ ದರ್ಶನ ಪಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಹೆಸರೇ ಹೇಳುವಂತೆ ನವರಾತ್ರಿಯಲ್ಲಿ ರಾತ್ರಿ ವೇಳೆ ದೇವರ ಆರಾಧನೆಗೆ ವಿಶೇಷ ಮಹತ್ವವಿದೆ. ಆದರೆ ಬೆಳಗ್ಗಿನಿಂದಲೇ ಭಕ್ತರು ದೇವಾಲಯಕ್ಕೆ ಹರಿದು ಬರುತ್ತಿದ್ದರು. ಈ ಹಿನ್ನೆಲೆಯಲ್ಲಿ ಶಕ್ತಿದೇವಾಲಯಗಳಲ್ಲಿ ವಿಶೇಷ ಆರಾಧನೆ, ಪೂಜೆ, ಪುರಾಣ, ಪ್ರವಚನಗಳು ನಡೆದವು. ನವರಾತ್ರಿಯಲ್ಲಿ ಬೊಂಬೆ ಪ್ರದರ್ಶನಕ್ಕೆ ಆದ್ಯತೆ ನೀಡಲಾಗಿದ್ದು, ಕೆಲ ದೇವಾಲಯಗಳಲ್ಲಿ ಸಾಂಕೇತಿಕವಾಗಿ ಬೊಂಬೆ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ವಿಶೇಷವಾಗಿ ನವರಾತ್ರಿಯ ಸಂದರ್ಭದಲ್ಲಿ ದೇವಿಯನ್ನು 9 ಅವತಾರಗಳಲ್ಲಿ ಪೂಜಿಸುವುದು ವಾಡಿಕೆ. ಮೊದಲ ದಿನ ಶೈಲಪುತ್ರಿ ಅವತಾರದಲ್ಲಿ ದೇವಿಯನ್ನು ಆರಾಧಿಸಲಾಯಿತು. ವಿಗ್ರಹಗಳಿಗೆ ಮಾಡಲಾಗು ಅಲಂಕಾರವನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾತುರದಿಂದ ಆಗಮಿಸುತ್ತಿದ್ದರು.
ಐತಿಹಾಸಿನ ಬೆಂಗಳೂರಿನ ಬನಶಂಕರಿ ದೇವಾಲಯದಲ್ಲಿ ಮೊದಲ ದಿನದಂದು ಬನಶಂಕರಿ ದೇವರ ವಿಗ್ರಹಕ್ಕೆ ಹರಿದ್ರಾ ಕುಂಕುಮದ ಅಲಂಕಾರವನ್ನು ಮಾಡಿ ದೇವರಿಗೆ ಪೂಜೆ ಸಲ್ಲಿಸಲಾಗಿತ್ತು. ಚಾಮರಾಜಪೇಟೆಯ ಶಂಕರಪುರಂನಲ್ಲಿರುವ ಶಂಕರಮಠದ ಶ್ರೀಶಾರದಾಂಬ ದೇವಿಗೆ ಬ್ರಾಹ್ಮಿ ಮುಹೂರ್ತದಲ್ಲಿ ಮಹಾಭಿಷೇಕ ನಂತರ ಹರಿದ್ರಾಲಂಕಾರ ಮತ್ತು ಜಗತ್ಪ್ರಸೂತಿಕಾಲಂಕಾರವನ್ನು ಮಾಡಿ ಪೂಜೆ ಸಲ್ಲಿಸಲಾಯಿತು. ಸಂಜೆ 6ಕ್ಕೆ ನಾದಸ್ವರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಉತ್ತರಹಳ್ಳಿಯಲ್ಲಿರುವ ಅವಧೂತ ಶ್ರೀವಿನಯ ಗುರೂಜಿ ಆಶ್ರಮದಲ್ಲಿ ಬೆಳಗ್ಗೆಯೇ ಶ್ರೀಚಕ್ರ ಸಹಿತ ವಾರಾಹಿ ಅಮ್ಮನವರಿಗೆ ವಿಶೇಷ ಅಭಿಷೇಕ, ಅಲಂಕಾರ ಮತ್ತು ಮಹಾಮಂಗಳಾರತಿ ನೆರವೇರಿಸಲಾಯಿತು.
ಮಲ್ಲೇಶ್ವರದ ಸರ್ಕಲ್ ಮಾರಮ್ಮ ದೇವಾಲಯ, ಗಂಗಮ್ಮದೇವಿ ದೇವಾಲಯ, ಕನ್ನಿಕಾಪರಮೇಶ್ವರಿ ದೇವಾಲಯದಲ್ಲಿ ನವರಾತ್ರಿಯ ಅಂಗವಾಗಿ ವಿಶೇಷ ಅಭಿಷೇಕ, ಅಲಂಕಾರ ಮತ್ತು ಪೂಜೆ ನೆರವೇರಿದವು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ದರ್ಶನ ಮಾಡಿದರು.
ಇನ್ನುಳಿದಂತೆ ಜಾಲಹಳ್ಳಿಯ ಶಾರದಾಂಬ ದೇವಿ ದೇವಾಲಯ, ಮುತ್ಯಾಲಮ್ಮ ದೇವಿ ದೇವಾಲಯ, ಮತ್ತಿಕೆರೆ ಚೌಡೇಶ್ವರಿ ದೇವಾಲಯ, ವಿದ್ಯಾರಣ್ಯಪುರದ ದುರ್ಗಾಪರಮೇಶ್ವರಿ ದೇವಾಲಯ, ಕೆ.ಜಿ.ನಗರದ ಬಂಡೆ ಮಹಾಂಕಾಳಿ ದೇವಾಲಯ ಮತ್ತಿತರ ಪ್ರಮುಖ ಶಕ್ತಿದೇವತೆಗಳ ದೇವಾಲಯದಲ್ಲಿ ನವರಾತ್ರಿ ಅಂಗವಾಗಿ ವಿಶೇಷ ಪೂಜೆ ನಡೆಯಿತು. ಜೆ.ಸಿ.ನಗರದ ಸರ್ಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ನವರಾತ್ರಿ ಹಿನ್ನೆಲೆಯಲ್ಲಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.