ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಗೌರವಾಧ್ಯಕ್ಷರೂ ಆದ ವಿರಾಜಪೇಟೆ ಅರಮೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಪ್ರಥಮ ಶರಣ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ ನಡೆಯಿತು. ಶ್ರೀ ಸದಾಶಿವ ಸ್ವಾಮೀಜಿ, ಶ್ರೀ ಮಲ್ಲೇಶ ಸ್ವಾಮೀಜಿ, ಎಚ್.ವಿ.ಶಿವಪ್ಪ ಇದ್ದರು.
ಮಡಿಕೇರಿ: ಹನ್ನೆರಡನೇ ಶತಮಾನದಲ್ಲಿ ಸಮಾಜದಲ್ಲಿದ್ದ ಅಂಕು ಡೊಂಕುಗಳು, ಮೇಲು- ಕೀಳು ಭೇದಗಳನ್ನು ಬುಡಸಹಿತ ಕಿತ್ತೊಗೆಯಲು ರಚನೆಯಾದ ವಚನಗಳು ಹಾಗೂ ಶರಣ ಸಾಹಿತ್ಯವನ್ನು ಹಳ್ಳಿ- ಪೇಟೆ, ನಗರಗಳ ಪ್ರತಿ ಮನೆ ಮನೆಗೆ, ಜನಸಾಮಾನ್ಯರ ಮನೆ ಮನಕ್ಕೆ ತಲುಪಿಸುವ ಉದ್ದೇಶವೇ ಶರಣ ಸಾಹಿತ್ಯ ಸಮ್ಮೇಳನದ ಮೂಲ ಧ್ಯೇಯ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಗೌರವಾಧ್ಯಕ್ಷ ಹಾಗೂ ವಿರಾಜಪೇಟೆ ಅರಮೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ಕುಶಾಲನಗರದ ಚೌಡೇಶ್ವರಿ ದೇವಾಲಯ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಪ್ರಥಮ ಶರಣ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಜೂ. 23ಕ್ಕೆ ಕುಶಾಲನಗರದ ರೈತ ಸಹಕಾರ ಭವನದಲ್ಲಿ ಜಿಲ್ಲಾ ಪ್ರಥಮ ವಚನ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದ್ದು, ಕುಶಾಲನಗರದ ಸರ್ವರೂ ಸಮ್ಮೇಳನದ ಭಾಗವಾಗಬೇಕು. ಶರಣ ಸಾಹಿತ್ಯ ಸಮ್ಮೇಳನ ಕೇವಲ ಸಮುದಾಯವೊಂದಕ್ಕೆ ಸೀಮಿತವಾದುದಲ್ಲ. ಇದು ಜನಪರವಾದ, ಜೀವಪರವಾದ ಅಭಿವ್ಯಕ್ತಿ. ಸಮ್ಮೇಳನದ ಯಶಸ್ಸಿಗೆ ವಿವಿಧ ಸಮಿತಿಗಳನ್ನು ಮಾಡಿಕೊಂಡು ಶಿಸ್ತುಬದ್ಧವಾಗಿ, ಸಮಯ ಪಾಲನೆಯೊಂದಿಗೆ ಶರಣ ಸಾಹಿತ್ಯ ಸಮ್ಮೇಳನ ರೂಪುಗೊಳ್ಳಬೇಕು ಎಂದರು.
ಕೊಡ್ಲಿಪೇಟೆಯ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ಇದೇ ಮೊದಲ ಬಾರಿಗೆ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನ ಆಯೋಜನೆಯಾಗುತ್ತಿದ್ದು ಎಲ್ಲರೂ ಸೇರಿ ಸಮ್ಮೇಳನ ಯಶಸ್ವಿಗೊಳಿಸಬೇಕು. ಸಮಯಪಾಲನೆಗೆ ಒತ್ತು ಕೊಡಬೇಕು. ಕೊಡಗು ಜಿಲ್ಲೆಗೆ ಆಗಮಿಸುವ ಸುತ್ತೂರು ಶ್ರೀಗಳನ್ನು ಅಷ್ಟೇ ಭಕ್ತಿ ಹಾಗೂ ಗೌರವಗಳಿಂದ ಆದರಿಸಿ ಬೀಳ್ಕೊಡಬೇಕಿದೆ ಎಂದರು.
ತೊರೆನೂರು ವಿರಕ್ತ ಮಠದ ಶ್ರೀ ಮಲ್ಲೇಶ ಸ್ವಾಮೀಜಿ ಮಾತನಾಡಿ, ಶರಣ ಸಾಹಿತ್ಯ ಸಮ್ಮೇಳನಕ್ಕೆ ಎಲ್ಲ ಜಾತಿ ವರ್ಗಗಳ ಜನರು ಸೇರುವ ಮೂಲಕ ಶರಣ ವಿಚಾರಗಳನ್ನು ಅರಿಯಲು ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು.
ಅಖಿಲ ಭಾರತ ವೀರಶೈವ ಮಹಾಸಭಾ ಕೊಡಗು ಜಿಲ್ಲಾಧ್ಯಕ್ಷ ಎಚ್.ವಿ.ಶಿವಪ್ಪ, ಪ್ರಧಾನ ಕಾರ್ಯದರ್ಶಿ ಶಾಂಬಶಿವಯ್ಯ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್. ಮೂರ್ತಿ, ಕುಶಾಲನಗರ ತಾಲೂಕು ಅಧ್ಯಕ್ಷ ಎಂ.ಎಸ್. ಶಿವಾನಂದ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಎ.ಎಸ್. ಮಹೇಶ್, ಜಿಲ್ಲಾ ಕದಳಿ ವೇದಿಕೆ ಅಧ್ಯಕ್ಷೆ ಸರೋಜಾ ಆರಾಧ್ಯ, ಕುಶಾಲನಗರ ತಾಲೂಕು ಅಧ್ಯಕ್ಷೆ ಹೇಮಲತಾ, ಪ್ರಮುಖರಾದ ಹಕ್ಕೆ ಮೋಹನ್, ಕೆ.ಜಿ. ರಾಜಶೇಖರ, ಕೊಡ್ಲಿಪೇಟೆ ಗಂಗಾ ವೀರಶೈವ ಮಹಿಳಾ ಸಮಾಜದ ಅಧ್ಯಕ್ಷೆ ಮಂಜುಳಾ ಸುರೇಶ, ಕುಶಾಲನಗರ ಚೌಡೇಶ್ವರಿ ದೇವಾಲಯ ಸಮಿತಿ ಅಧ್ಯಕ್ಷ ಡಿ.ವಿ. ರಾಜೇಶ್, ಪ್ರಮುಖರಾದ ಸದಾಶಿವಯ್ಯ ಪಲ್ಲೇದ, ಟಿ.ಜಿ. ಪ್ರೇಮಕುಮಾರ್, ಎಸ್. ನಂದೀಶ್, ಎಂ.ಕೆ. ಧನರಾಜು, ಎಂ.ಬಿ. ಸುರೇಶ್, ಶಿವಲಿಂಗ, ಜಿ.ಬಿ.ಲೋಕೇಶ್, ವಿಜಯಪಾಲಾಕ್ಷ, ಪರಮೇಶ್ ಇತರರಿದ್ದರು.
ಹಣಕಾಸು ಸಮಿತಿಯ ಅಧ್ಯಕ್ಷರಾಗಿ ಶಾಂಬಶಿವಯ್ಯ, ಸಂಚಾಲಕರಾಗಿ ಧನರಾಜು, ಸಾಂಸ್ಕೃತಿಕ ಸಮಿತಿ ಅಧ್ಯಕ್ಷರಾಗಿ ಎಸ್. ನಂದೀಶ್, ಸಂಚಾಲಕರಾಗಿ ಶಿವಲಿಂಗ, ಆಹಾರ ಸಮಿತಿ ಅಧ್ಯಕ್ಷರಾಗಿ ಎಂ.ಎಸ್. ಗಣೇಶ್, ಸಂಚಾಲಕರಾಗಿ ಉದಯಕುಮಾರ್, ಧ್ವಜಾರೋಹಣ ಸಮಿತಿ ಅಧ್ಯಕ್ಷರಾಗಿ ಸದಾಶಿವಯ್ಯ ಪಲ್ಲೇದ್, ವೇದಿಕೆ ಸಮಿತಿ ಅಧ್ಯಕ್ಷರಾಗಿ ಎಸ್.ಬಿ. ಹೇಮಲತಾ, ಸಂಚಾಲಕರಾಗಿ ಡಾ. ಹೇಮಲತಾ, ಮೆರವಣಿಗೆ ಸಮಿತಿ ಅಧ್ಯಕ್ಷರಾಗಿ ಎಚ್.ಎಂ. ಮಧುಸೂದನ್, ಸಂಚಾಲಕರಾಗಿ ಧಮೇರ್ಂದ್ರ, ಅತಿಥಿ ಸತ್ಕಾರ ಸಮಿತಿ ಅಧ್ಯಕ್ಷರಾಗಿ ಜಿ.ಬಿ. ಲೋಕೇಶ್, ಸಂಚಾಲಕರಾಗಿ ಎಂ.ಬಿ.ಸುರೇಶ್, ಪ್ರಚಾರ ಸಮಿತಿ ಅಧ್ಯಕ್ಷರಾಗಿ ಹುಲುಸೆ ಶಿವನಂಜಪ್ಪ, ಸಂಚಾಲಕರಾಗಿ ಮರೂರು ಮಹದೇವ್ ಅವರನ್ನು ನೇಮಕ ಮಾಡಲಾಯಿತು. ಈ ಎಲ್ಲ ಸಮಿತಿಯವರು ಪ್ರತ್ಯೇಕ ಸಮಿತಿ ಮಾಡಿಕೊಂಡು ತಂಡವಾಗಿ ಕಾರ್ಯನಿರ್ವಹಿಸುವ ಮೂಲಕ ಸಮ್ಮೇಳನದ ಯಶಸ್ವಿಗೆ ಶ್ರಮಿಸಬೇಕು ಎಂದು ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನಿರ್ದೇಶನ ನೀಡಿದರು.