sitaram siddi 
ರಾಜ್ಯ

ಮತಾಂತರಗೊಂಡವರನ್ನು ಎಸ್‌ಟಿ ಪಟ್ಟಿಯಲ್ಲಿ ಕೈ ಬಿಡುವಂತೆ ಶಾಂತಾರಾಮ ಸಿದ್ದಿ ಆಗ್ರಹ

ಪ್ರಮುಖ ಮುಖ್ಯಾಂಶಗಳು

  • ದೇಶದಲ್ಲಿ ಸುಮಾರು 12 ಕೋಟಿ ಬುಡಕಟ್ಟು ಸಮುದಾಯದ ಜನರಿದ್ದು, ಅವರಲ್ಲಿ 1 ರಿಂದ 2 ಕೋಟಿ ಜನ ಮತಾಂತರಗೊಂಡಿದ್ದಾರೆ
  • ನಾವು ಯಾವುದೇ ಧರ್ಮ ಅಥವಾ ಮತವನ್ನು ವಿರೋಧಿಸುವುದಿಲ್ಲ
ಬೆಂಗಳೂರು:
ಮತಾಂತರಗೊಂಡ ಬುಡಕಟ್ಟು ಸಮುದಾಯದವರನ್ನು ಪರಿಶಿಷ್ಟ ಪಂಗಡ (ಎಸ್‌ಟಿ) ಪಟ್ಟಿಯಿಂದ ಕೈಬಿಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದಲ್ಲಿ ಸುಮಾರು 12 ಕೋಟಿ ಬುಡಕಟ್ಟು ಸಮುದಾಯದ ಜನರಿದ್ದು, ಅವರಲ್ಲಿ 1 ರಿಂದ 2 ಕೋಟಿ ಜನ ಮತಾಂತರಗೊಂಡಿದ್ದಾರೆ ಎಂದು ಹೇಳಿದರು.
ಮೂಲ ಬುಡಕಟ್ಟು ಸಮುದಾಯದವರಿಗೆ ಸಿಗಬೇಕಾದ ಸರ್ಕಾರಿ ಸೌಲಭ್ಯಗಳನ್ನು ಮತಾಂತರಗೊಂಡವರೇ ಹೆಚ್ಚಾಗಿ ಪಡೆದುಕೊಳ್ಳುತ್ತಿರುವುದರಿಂದ ನಿಜವಾದ ಫಲಾನುಭವಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು.
ಕೆಲವು ಪ್ರದೇಶಗಳಲ್ಲಿ ಮತಾಂತರಗೊಂಡವರು ಪರಿಶಿಷ್ಟ ಪಂಗಡದ ಸೌಲಭ್ಯಗಳ ಜೊತೆಗೆ ತಾವು ಮತಾಂತರಗೊಂಡ ಧರ್ಮಕ್ಕೆ ಸಂಬಂಧಿಸಿದ ಸೌಲಭ್ಯಗಳನ್ನೂ ಪಡೆಯುತ್ತಿದ್ದು, ಇದರಿಂದ ದ್ವಿಪಾತ್ರ ಲಾಭವಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ಈ ವಿಚಾರವಾಗಿ ರಾಷ್ಟ್ರಮಟ್ಟದ ಜನಜಾತಿ ಸುರಕ್ಷಾ ವೇದಿಕೆ ವತಿಯಿಂದ ದೆಹಲಿಯಲ್ಲಿ ಏರ್ಪಡಿಸಿದ್ದ ಬೃಹತ್ ಸಮ್ಮೇಳನದಲ್ಲಿ ಅಮಿತ್ ಷಾ ಭಾಗವಹಿಸಿದ್ದರು. ಬಳಿಕ ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
"

ನಾವು ಯಾವುದೇ ಧರ್ಮ ಅಥವಾ ಮತವನ್ನು ವಿರೋಧಿಸುವುದಿಲ್ಲ. ಆದರೆ ಬೇರೆ ಧರ್ಮಕ್ಕೆ ಮತಾಂತರಗೊಂಡವರು ಮೂಲ ಬುಡಕಟ್ಟು ಸಮುದಾಯಕ್ಕೆ ಮೀಸಲಾಗಿರುವ ಸರ್ಕಾರಿ ಸೌಲಭ್ಯಗಳನ್ನು ಪಡೆಯಬಾರದು ಎಂಬುದು ನಮ್ಮ ಸ್ಪಷ್ಟ ನಿಲುವು.

-ಶಾಂತಾರಾಮ ಸಿದ್ದಿ


ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ
ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಕುರಿತು ಬರೆದ ಪತ್ರದ ಬಗ್ಗೆ ಪ್ರತಿಕ್ರಿಯಿಸಿದ ಶಾಂತಾರಾಮ ಸಿದ್ದಿ, ಆರ್‌ಎಸ್‌ಎಸ್ ಶಾಖೆಗೆ ನಿಯಮಿತವಾಗಿ ಹೋಗುವವರಿಗೇ ಸಂಘವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದು ಕಷ್ಟ. ಇನ್ನು ಪ್ರಿಯಾಂಕ್ ಖರ್ಗೆಗೆ ಅದರ ಬಗ್ಗೆ ಏನು ಗೊತ್ತು? ಎಂದು ಪ್ರಶ್ನಿಸಿದರು.
ಆರ್‌ಎಸ್‌ಎಸ್ ಕೇವಲ ವ್ಯಕ್ತಿ ನಿರ್ಮಾಣ ಮಾಡುವ ಶಿಸ್ತಿನ ಕೇಂದ್ರವಾಗಿದ್ದು, ಯಾವುದೇ ರೀತಿಯ ಹಣಕಾಸಿನ ವ್ಯವಹಾರಗಳು ಅಲ್ಲಿ ನಡೆಯುವುದಿಲ್ಲ ಎಂದು ಅವರು ಹೇಳಿದರು. ಸಂಘದ ಚಟುವಟಿಕೆಗಳೆಲ್ಲವೂ ತೆರೆದ ಮೈದಾನಗಳಲ್ಲಿ ಸಾರ್ವಜನಿಕರ ಕಣ್ಣೆದುರೇ ನಡೆಯುತ್ತವೆ. ಆದ್ದರಿಂದ ಅನಗತ್ಯ ಆರೋಪಗಳಿಗೆ ಉತ್ತರಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.