Sewerage chaos in Nuligumba
ಗುಡಿಬಂಡೆ: ತಾಲೂಕಿನ ನುಲಿಗುಂಬ ಗ್ರಾಮದ ಚರಂಡಿಗಳು ತುಂಬಿ ಗಬ್ಬುನಾರುತ್ತಿದ್ದರು ಸ್ವಚ್ಛತೆ ಮಾಡಿಸದೇ ಇರುವುದರಿಂದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಎಲ್ಲೋಡು ಗ್ರಾಪಂ ವ್ಯಾಪ್ತಿಯ ನುಲಿಗುಂಬ ಗ್ರಾಮದಲ್ಲಿ ಚರಂಡಿಗಳು ತುಂಬಿ ತುಳುಕುತ್ತಿದೆ. ರಸ್ತೆಗೆ ಚರಂಡಿ ನೀರು ಹರಿಯುತ್ತಿದ್ದು, ಸೊಳ್ಳೆಗಳ ಕಾಟ ಹೆಚ್ಚಾಗಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿ ಗ್ರಾಮಸ್ಥರು ಬದುಕುತ್ತಿದ್ದಾರೆ.
ಇದರ ಬಗ್ಗೆ ಗ್ರಾಪಂಗೆ ಸಾಕಷ್ಟು ಬಾರಿ ದೂರು ನೀಡಿದರೂ ಯಾವೊಬ್ಬ ಅಧಿಕಾರಿಯೂ ಕಾಳಜಿವಹಿಸುತ್ತಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.
ಗ್ರಾಮದ ನಿವಾಸಿ ಶಿರೀಷಾ ಮಾತನಾಡಿ, ನೀರು ತುಂಬಿದ ಕಸದ ಗುಂಡಿ ಇರುವುದರಿಂದ ಗರ್ಭಿಣಿ, ಬಾಣಂತಿ, ಚಿಕ್ಕಮಕ್ಕಳನ್ನು ಮನೆ ಹೊರಗೆ ಬಿಡಲು ಭಯವಾಗುತ್ತದೆ. ಕಸದ ಗುಂಡಿಯಿಂದಾಗಿ ಕ್ರಿಮಿಕೀಟಗಳು ಹೆಚ್ಚುತ್ತಿವೆ. ದುರ್ವಾಸನೆಗೆ ಹೊಟ್ಟೆ ತೊಳೆಸಿದಂತಾಗುತ್ತಿದ್ದು, ಆಸ್ಪತ್ರೆಗೆ ಅಲೆದಾಡುವುದೇ ಕೆಲಸವಾಗಿದೆ. ಗ್ರಾಪಂಗೆ ಅನೇಕ ಬಾರಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಊರಲ್ಲಿ ಎಲ್ಲಿ ನೋಡಿದರೂ ಕಸದ ರಾಶಿಗಳು, ತುಂಬಿದ ಚರಂಡಿಗಳನ್ನು ನೋಡುವಂತಾಗಿದೆ ಎಂದರು.
ಗ್ರಾಮದ ಸದಸ್ಯರು ಇಲ್ಲದೆ ಇರುವುದರಿಂದ ಈ ಸಮಸ್ಯೆ ಈಗಾಗಲೇ ಗ್ರಾಪಂ ಸದಸ್ಯರ ಅಧಿಕಾರ ಅವಧಿ ಮುಕ್ತಾಯವಾಗಿದ್ದು, ಗ್ರಾಪಂ ಸದಸ್ಯರು ಇದ್ದಾಗ ಅಧಿಕಾರಿಗಳ ಗಮನಕ್ಕೆ ತಂದು ಸ್ವಚ್ಛತೆ ಮಾಡಿಸಲಾಗುತ್ತಿತ್ತು. ಸದಸ್ಯರ ಅಧಿಕಾರ ಅವಧಿ ಮುಗಿದಿರುವುದರಿಂದ ಅಧಿಕಾರಿಗಳ ಗಮನಕ್ಕೆ ತರುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದರು.