ಕೊಟ್ಟೂರಿನ ಜವಳೇರ ಗುರುಬಸಮ್ಮ ಲೇಔಟ್‌ನಲ್ಲಿ ಚರಂಡಿ ನೀರು ನಿಂತಿರುವುದು.  
ರಾಜ್ಯ

ಚರಂಡಿ ನೀರು ಮಡುಗಟ್ಟಿ ರೋಗ ಭೀತಿ

ಕೊಟ್ಟೂರು: ಪಟ್ಟಣದ ಜವಳೇರ ಗುರುಬಸಮ್ಮ ಲೇಔಟ್‌ನಲ್ಲಿ ಚರಂಡಿ ನೀರು ಮಡುಗಟ್ಟಿ  ಸೊಳ್ಳೆ ಮತ್ತು ವಿಷ ಜಂತುಗಳ ಹಾವಳಿ ಹೆಚ್ಚಾಗಿದೆ. 
ಬಸವೇಶ್ವರ ನಗರದಿಂದ ಹರಿದು ಬರುವ ಚರಂಡಿ ನೀರು ಮುಂದೆ ಸರಾಗವಾಗಿ ಹರಿದು ಹೋಗಲು ಕಾಲುವೆ ಜೋಡಣೆ ಇಲ್ಲ.  ಉದ್ಯಾನಕ್ಕೆ ಕಾಯ್ದಿರಿಸಿದ ಜಾಗದಲ್ಲಿ ನೀರು ಶೇಖರಣೆಗೊಂಡು ಗುಂಡಿಯಾಗಿ ಮಾರ್ಪಟ್ಟಿದೆ.
 ನೀರು ಮಡುಗಟ್ಟಿ ಗಬ್ಬೆದ್ದು ನಾರುತ್ತಿದ್ದು, ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಇದೆ. ಜನರು ಸಾಂಕ್ರಾಮಿಕ ರೋಗ ಹಾಗೂ ಜೀವ ಭಯದಲ್ಲಿ ಕಾಲ ಕಳೆಯುತ್ತಿದ್ದಾರೆ. 
ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ, ಆರೋಗ್ಯ ಅಧಿಕಾರಿಗಳಿಗೆ ಹಲವು ಬಾರಿ ಅರ್ಜಿ ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ ಎಂದು ಬಡಾವಣೆ ನಿವಾಸಿಗಳು ದೂರಿದ್ದಾರೆ. 

ಜವಳೇರ ಗುರುಬಸಮ್ಮ ಬಡಾವಣೆಯಲ್ಲಿ ನೀರು ನಿಲ್ಲುವ ಬಗ್ಗೆ ಗಮನಕ್ಕಿದ್ದು, ಈ ಸ್ಥಳದಲ್ಲಿ ಚರಂಡಿ ನಿರ್ಮಾಣಕ್ಕೆ ಈಗಾಗಲೆ ಕ್ರಿಯಾಯೋಜನೆ ಸಿದ್ಧವಾಗಿದೆ. ಪಟ್ಟಣದ ಎಲ್ಲ ವಾರ್ಡ್‌ಗಳಲ್ಲಿ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಅದು ಮುಗಿದ ತಕ್ಷಣ, ಜವಳೇರ ಬಡಾವಣೆಯಲ್ಲಿ ಚರಂಡಿ ಕಾಮಗಾರಿ ಆರಂಭಿಸಲಾಗುವುದು.

— ಎ.ನಸರುಲ್ಲಾ ಪಪಂ ಮುಖ್ಯಾಧಿಕಾರಿ, ಕೊಟ್ಟೂರು