Cubbon Park Lotus Pond 
ರಾಜ್ಯ

ತಾವರೆಕೊಳದಲ್ಲಿ ಮೀನುಗಳ ಸಾವಿಗೆ ಕೊಳಚೆ ನೀರು ಕಾರಣ

ಪ್ರಮುಖ ಮುಖ್ಯಾಂಶಗಳು

  • * ಕಬ್ಬನ್‌ಪಾರ್ಕ್ ವಾಯುವಿಹಾರಿಗಳ ಸಂಘ ಆಕ್ರೋಶ
ಬೆಂಗಳೂರು: ಕಬ್ಬನ್‌ಪಾರ್ಕ್‌ನ ತಾವರೆಕೊಳಕ್ಕೆ ಒಳಚರಂಡಿ ನೀರು ಹರಿದು, ಕೊಳದಲ್ಲಿನ ಸಾಕಷ್ಟು ಮೀನುಗಳು ಸಾವನ್ನಪ್ಪಿದ್ದು, ಉದ್ಯಾನದ ಪರಿಸರಕ್ಕೂ ಧಕ್ಕೆ ಉಂಟಾಗಿದೆ ಎಂದು ಕಬ್ಬನ್‌ಪಾರ್ಕ್ ವಾಯುವಿಹಾರಿಗಳ ಸಂಘವು ತೋಟಗಾರಿಕೆ ಇಲಾಖೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಚಿನ್ನಸ್ವಾಮಿ ಸ್ಟೇಡಿಯಂ ಮತ್ತು ಬಿಎಂಆರ್‌ಸಿಎಲ್‌ನಿಂದ ಕಬ್ಬನ್‌ಪಾರ್ಕ್‌ಗೆ ನೇರವಾಗಿ ಒಳಚರಂಡಿ ನೀರು ಹರಿದುಬರುತ್ತಿದ್ದರೂ ತೋಟಗಾರಿಕೆ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಂಘದ ಅಧ್ಯಕ್ಷ ಎಸ್. ಉಮೇಶ್ ದೂರಿದ್ದಾರೆ. ಕಬ್ಬನ್‌ಪಾರ್ಕ್‌ಗೆ ಹರಿದುಬರುತ್ತಿರುವ ಕೊಳಚೆ ನೀರನ್ನು ಶಾಶ್ವತವಾಗಿ ತಡೆಯಬೇಕು. ಇಲ್ಲದಿದ್ದರೆ ಇದರ ವಿರುದ್ಧ ಬಹೃತ್ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಚರಂಡಿ ನೀರು ಹರಿದಿಲ್ಲ:

ಇತ್ತೀಚೆಗೆ ಸುರಿದ ಮಳೆಯಿಂದಾಗಿ ಕಬ್ಬನ್‌ಪಾರ್ಕ್‌ನ ತಾವರೆಕೊಳಕ್ಕೆ ನೀರು ಹರಿದಿದೆ. ಹೀಗೆ ಹೊಸ ನೀರು ಹರಿದಾಗ ಟರ್ಬೆನ್ ಆಕ್ಸಿಡೈಸ್ ಉಂಟಾಗಿ ಆಕ್ಸಿಜನ್ ಪ್ರಮಾಣ ಕುಸಿಯುತ್ತದೆ. ಈ ಬದಲಾವಣೆಯಿಂದ ಮೀನುಗಳು ಸಾಯುವುದು ಸಹಜ. ಈ ಬಗ್ಗೆ ಬಿಡಬ್ಲುೃಎಸ್‌ಎಸ್‌ಬಿ ಹಾಗೂ ಮೀನುಗಾರಿಕೆ ಇಲಾಖೆಯಿಂದ ಪರಿಶೀಲನೆ ನಡೆಸಲಾಗಿದೆ. ಕೊಳಕ್ಕೆ ಯಾವುದೇ ಕೊಳಚೆ ನೀರು ಹರಿದಿಲ್ಲ, ಬದಲಿಗೆ ಮಳೆನೀರು ನುಗ್ಗಿದ್ದರಿಂದ ಮೀನುಗಳು ನೈಸರ್ಗಿಕವಾಗಿ ಸಾವನ್ನಪ್ಪಿವೆ. ಮುಂದೆ ಇಂತಹ ಸಮಸ್ಯೆ ಎದುರಾಗದಂತೆ ನಿರ್ವಹಿಸಬೇಕು ಎಂಬ ಮೀನುಗಾರಿಕಾ ಇಲಾಖೆ ಸಲಹೆ ನೀಡಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಳೆಗೆ ಬಿದ್ದ ಮರಗಳು:

ನಗರದಲ್ಲಿ ಸುರಿದ ಗಾಳಿಸಹಿತ ಮಳೆಗೆ ಕಬ್ಬನ್‌ಪಾರ್ಕ್‌ನಲ್ಲಿ 15 ಮರಗಳು ಹಾಗೂ ಲಾಲ್‌ಬಾಗ್‌ನಲ್ಲಿ 8 ಮರಗಳು ಬಿದ್ದಿದ್ದು, ಅವುಗಳ ತೆರವು ಕೈಗೊಳ್ಳಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಇಲಾಖೆ ಸಿಬ್ಬಂದಿ ಜನಗಣತಿ ಕಾರ್ಯದಲ್ಲಿ ತೊಡಗಿಕೊಂಡಿರುವುದರಿಂದ ಈ ಕೆಲಸಗಳಿಗೆ ಸಿಬ್ಬಂದಿ ಕೊರತೆ ಎದುರಾಗಿದೆ. ಹಾಗಾಗಿ ಕೆಲಸ ಸ್ವಲ್ಪ ವಿಳಂಬವಾಗಿದ್ದು, ಮರಗಳ ತೆರವಿಗೆ ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.