ಹೊಸೂರು : ರಾಜ್ಯದಿಂದ ತಮಿಳುನಾಡು ನದಿಗೆ ಹರಿಯುತ್ತಿರುವ ಅಪಾಯಕಾರಿ ರಾಸಾಯನಿಕಮಿಶ್ರಿತ ನೀರನ್ನು ತಕ್ಷಣ ನಿಲಿಸಬೇಕು ಎಂದು ಒತ್ತಾಯಿಸಿ ತಮಿಳುನಾಡಿ ರೈತ ಸಂ ಮಂಗಳವಾರ ಹೊಸೂರಿನಲ್ಲಿ ಪ್ರತಿಭಟನೆ ನಡೆಸಿತು.
ಬೆಂಗಳೂರು ನಗರದ ಕೊಳಚೆ ನೀರು ಮತ್ತು ರಾಸಾಯನಿಕ ಕಾರ್ಖಾನೆಗಳ ತ್ಯಾಜ್ಯವನ್ನು ಯಾವುದೇ ಸಂಸ್ಕರಣೆಯಿಲ್ಲದೆ ಹೊಸೂರು ಬಳಿಯ ಕೆಲವರಪಲ್ಲಿ ಅಣೆಕಟ್ಟಿನ ಮೂಲಕ ನಿರಂತರವಾಗಿ ತೆನ್ಪೆನ್ನೈ ನದಿಗೆ ಹರಿಸಲಾಗುತ್ತಿದೆ. ಇದರಿಂದಾಗಿ, ಕೃಷ್ಣಗಿರಿ, ಧರ್ಮಪುರಿ, ತಿರುವಣ್ಣಾಮಲೈ ಮತ್ತು ಕಡಲೂರು ಸೇರಿ 4 ಜಿಲ್ಲೆಗಳ ಜನರಿಗೆ ಕುಡಿಯುವ ನೀರು ಮತ್ತು ನೀರಾವರಿಯ ಪ್ರಮುಖ ಮೂಲ ನಾಶವಾಗುತ್ತಿದೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಮೆರವಣಿಗೆ: ಕರ್ನಾಟಕ ಸರ್ಕಾರವು ತ್ಯಾಜ್ಯ ನೀರನ್ನು ಸಂಸ್ಕರಿಸಿ ಕಳುಹಿಸುವಂತೆ ಒತ್ತಾಯಿಸಿ, ಹೊಸೂರಿನಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ, ತಮಿಳುನಾಡು ಕಿಸಾನ್ ಸಂಘಂ ಪ್ರತಿಭಟನಾ ಮೆರವಣಿಗೆ ನಡೆಸಿತು. ಸಂಘದ ಹೊಸೂರು ಪ್ರಾದೇಶಿಕ ಅಧ್ಯಕ್ಷ ರಾಜಾರೆಡ್ಡಿ ನೇತೃತ್ವದಲ್ಲಿ ಕೆಲವರಪಲ್ಲಿ ಅಣೆಕಟ್ಟಿನಿಂದ ಹೊಸೂರು ಉಪ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಕಾರರು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ತಕ್ಷಣದ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದರು.
ರಾಸಾಯನಿಕ ಕೊಳವಾಗಿದೆ : ನಾವು ಕರ್ನಾಟಕ ಸರ್ಕಾರವನ್ನು ಕಾವೇರಿ ನೀರಿಗಾಗಿ ಕೇಳುತ್ತಿದ್ದೇವೆ, ಆದರೆ ಅವರು ಕೊಳಚೆ ನೀರನ್ನು ಕಳುಹಿಸುತ್ತಿದ್ದಾರೆ. 40 ವರ್ಷಗಳ ಹಿಂದೆ ಜಿಂಕೆ, ನವಿಲು ಮತ್ತು ಮೀನುಗಳಂತಹ ವಿವಿಧ ಜಾತಿಗಳಿಗೆ ನೆಲೆಯಾಗಿದ್ದ ಕೆಲವರಪಲ್ಲಿ ಅಣೆಕಟ್ಟು ಇಂದು ದುರ್ವಾಸನೆ ಬೀರುವ ರಾಸಾಯನಿಕ ಕೊಳವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ರಾಜ್ಯ ಕಾರ್ಯದರ್ಶಿ ಪಿ. ಪೆರುಮಾಳ್, ಜಿಲ್ಲಾಧ್ಯಕ್ಷ ನಾಗರಾಜ ರೆಡ್ಡಿ, ಜಿಲ್ಲಾ ಕಾರ್ಯದರ್ಶಿ ಪ್ರಕಾಶ್, ಜಿಲ್ಲಾಧ್ಯಕ್ಷ ಮುರುಗೇಶ್ ಮತ್ತಿತರರು ಇದ್ದರು.