ಕೆಂಭಾವಿ ಸಮೀಪ ಆಲ್ಹಾಳ ಗ್ರಾಮದ ಬಳಿ ಬುಧವಾರ ತಾಳಿಕೋಟೆ ಕಡೆಗೆ ಸಂಚರಿಸುತ್ತಿದ್ದ ಸಾರಿಗೆ ಬಸ್ವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಉರುಳಿರುವುದು.
- ಈ ಘಟನೆಗೆ ಚಾಲಕನ ನಿರ್ಲಕ್ಷ್ಯವೇ ಕಾರಣ
- ಸಮುದಾಯ ಕೇಂದ್ರದಲ್ಲಿ ಹಲವರಿಗೆ ಚಿಕಿತ್ಸೆ
ಕೆಂಭಾವಿ: ಕೆಎಸ್ಆರ್ಟಿಸಿ ಬಸ್ವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಉರುಳಿ ಬಿದ್ದ ಪರಿಣಾಮ ಬಸ್ನಲ್ಲಿದ್ದ ಅನೇಕರಿಗೆ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸುರಪುರ-ಹುನಗುಂದ ರಾಜ್ಯ ಹೆದ್ದಾರಿಯ ಆಲ್ಹಾಳ ಗ್ರಾಮದ ಬಳಿ ಬುಧವಾರ ಬೆಳಗ್ಗೆ ನಡೆದಿದ್ದು, ಚಾಲಕನ ಅಜಾಗರೂಕತೆಯೇ ಈ ಘಟನೆಗೆ ಕಾರಣ ಎನ್ನಲಾಗಿದೆ.
ಕೆಂಭಾವಿಯಿಂದ ತಾಳಿಕೋಟೆಗೆ ಪ್ರಯಾಣಿಸುತ್ತಿದ್ದ ಬಸ್ನಲ್ಲಿ ಶಾಲಾ ವಿದ್ಯಾರ್ಥಿಗಳು ಸೇರಿ ಸುಮಾರು 60ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ರಸ್ತೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಪರಿಣಾಮ ಬಸ್ ಪಕ್ಕಕ್ಕೆ ಉರುಳಿ ಬಿದ್ದಿದೆ. ಬಸ್ ಪಲ್ಟಿಯಾಗುತ್ತಿದ್ದಂತೆ ಗ್ರಾಮಸ್ಥರು ಬಸ್ನಲ್ಲಿ ಸಿಲುಕಿದ್ದ ಹಲವರನ್ನು ರಸಿ ಖಾಸಗಿ ವಾಹನಗಳ ಮೂಲಕ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದರು.
ಸುಮಾರು 45 ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಥಮಿಕಚಿಕಿತ್ಸೆ ನೀಡಿ ಮನೆಗೆ ಕಳಿಸಲಾಗಿದೆ. ಗಂಭೀರ ಗಾಯಗೊಂಡ ಓರ್ವ ಬಾಲಕಿ ಸೇರಿ ಮೂವರನ್ನು ಶಹಾಪುರ ಹಾಗೂ ಕಲಬುರಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದರು. ಘಟನೆ ಕುರಿತು ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಸ್ ಅಪಘಾತಕ್ಕೆ ಚಾಲಕನ ಮದ್ಯ ಸೇವನೆ ಮತ್ತು ಮೊಬೈಲ್ ವೀಕ್ಷಣೆಯೆ ಮೂಲ ಕಾರಣ ಎಂದು ಗಾಯಗೊಂಡ ಹಲವು ಪ್ರಯಾಣಿಕರು ಆರೋಪಿಸಿದರು. ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಓರ್ವ ಶಾಲಾ ಬಾಲಕಿ ಈ ಕುರಿತು ಮಾತನಾಡಿ, ಬಸ್ ಜನರಿಂದ ತುಂಬಿ ತುಳುಕುತ್ತಿತ್ತು ಚಾಲಕನ ಬಳಿ ನಾನೆ ಕುಳಿತಿದ್ದು ಮದ್ಯದ ವಾಸನೆ ಬರುವುದರ ಜತೆಗೆ ಒಂದೇ ಕೈಯಲ್ಲಿ ಮೊಬೈಲ್ ಹಿಡಿದು ಬಸ್ ಚಾಲನೆ ಮಾಡುತ್ತಿದ್ದ ಎಂದು ಬಾಲಕಿ ಆರೋಪಿಸಿದಳು. ಯಾವುದಕ್ಕೂ ವೈದ್ಯರ ವರದಿ ಮತ್ತು ಪೊಲೀಸ್ ತನಿಖೆಯಿಂದ ಸತ್ಯಾಸತ್ಯತೆ ಹೊರ ಬೀಳಲಿದ್ದು ಬಸ್ ದುರಂತದ ಬಗ್ಗೆ ಸ್ಪಷ್ಟ ತನಿಖೆ ನಡೆಸಿ ಮುಂದೆ ಹೀಗಾಗದಂತೆ ಕ್ರಮ ಕೈಗೊಳ್ಳಬೇಕು ಎಂಬುದು ಪ್ರಯಾಣಿಕರು ಒತ್ತಾಯಿಸಿದ್ದಾರೆ.