Seven interstate thieves arrested 
ರಾಜ್ಯ

7ಮಂದಿ ಅಂತಾರಾಜ್ಯ ಕಳ್ಳರ ಬಂಧನ

ಕೋಲಾರ ಡೆಸ್ಕ್

ಬಂಗಾರಪೇಟೆ:

ಕೆಜಿಎಫ್​ ಪೊಲೀಸ್​ ಜಿಲ್ಲೆಯ ವಿವಿಧ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಮನೆಗಳು ಹಾಗೂ ದೇವಸ್ಥಾನ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 7 ಮಂದಿ ಆರೋಪಿಗಳನ್ನು ಕೋಲಾರ ಪೊಲೀಸರು ಬಂಧಿಸಿ, 306.780 ಗ್ರಾಂ ಚಿನ್ನಾಭರಣ, 975 ಗ್ರಾಂ ಬೆಳ್ಳಿ ವಸ್ತುಗಳು ಹಾಗೂ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ನಗರದಲ್ಲಿ ಶುಕ್ರವಾರ ಕೆಜಿಎಫ್​ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಶಿವಾಂಶು ರಜಪೂತ್​ ಅವರು ಮಾಹಿತಿ ನೀಡಿದರು.
ಬಂಗಾರಪೇಟೆ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಎರಡು ಮನೆ ಕಳವು ಪ್ರಕರಣ ತನಿಖೆ ನಡೆಸಿದ ಪೊಲೀಸರು ತಮಿಳುನಾಡು ಮೂಲದ ಸುರೇಶ (35), ವೀರಾಪಾಂಡಿಯನ್​ ಕುರುಪ್​ (25) ಹಾಗೂ ಲಕ್ಷ್ಮಣಕಾಂತನ್​ (30) ಎಂಬ ಮೂವರನ್ನು ಪೊಲೀಸ್​ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆರೋಪಿಗಳು ತಮಿಳುನಾಡಿನಿಂದ ಬಂದು ಕಳವು ನಡೆಸಿರುವುದಾಗಿ ವಿಚಾರಣೆ ವೇಳೆ ತಿಳಿದುಬಂದಿದ್ದು, ಕಳವು ಮಾಡಿದ್ದ ಸುಮಾರು 45 ಲಕ್ಷ ಮೌಲ್ಯದ 300 ಗ್ರಾಂ ಚಿನ್ನಾಭರಣ ಹಾಗೂ 475 ಗ್ರಾಂ ಬೆಳ್ಳಿ ವಸ್ತುಗಳನ್ನು ತಮಿಳುನಾಡಿನ ಸರವಣ ಜುವೆಲ್ಲರಿ ಅಂಗಡಿಯಲ್ಲಿ ಮಾರಾಟ ಮಾಡಿರುವುದಾಗಿ ತಿಳಿಸಿದ್ದು, ಪೊಲೀಸರು ಕಳವು ಮಾಲು ವಶಪಡಿಸಿಕೊಂಡಿದ್ದಾರೆ.

ಕಾಮಸಮುದ್ರದಲ್ಲಿ ಮತ್ತೊಬ್ಬ ಆರೋಪಿ ಬಂಧನ

ಕಾಮಸಮುದ್ರ ಪೊಲೀಸ್​ ಠಾಣೆ ವ್ಯಾಪ್ತಿಯ ಯರಗೋಳ ಗ್ರಾಮದ ವೆಂಕುಬಾಯಿ ಮನೆಯಲ್ಲಿ ಸುಮಾರು 24 ಗ್ರಾಂ ತೂಕದ ಚಿನ್ನದ ಸರ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಗ್ರಾಮದ ಉಪೇಂದ್ರರಾವ್​ (28) ಎಂಬಾತನನ್ನು ಬಂಧಿಸಲಾಗಿದ್ದು, ಕಳವು ಮಾಡಿದ ಚಿನ್ನದ ಸರವನ್ನು ಮಾರಾಟ ಮಾಡಿರುವುದು ತನಿಖೆಯಿಂದ ತಿಳಿದುಬಂದಿದ್ದು, ವಶಪಡಿಸಿಕೊಳ್ಳುವ ಪ್ರಕ್ರಿಯೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

ಬಂಧಿತ ಪ್ರಮುಖ ಆರೋಪಿ ಸುರೇಶ ವಿರುದ್ಧ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ಕೇರಳ ರಾಜ್ಯಗಳಲ್ಲಿ 73 ಪ್ರಕರಣ ದಾಖಲಾಗಿವೆ ಎಂದು ತಿಳಿಸಿದ್ದಾರೆ. ಮತ್ತೊಬ್ಬ ಆರೋಪಿ ವೀರಾಪಾಂಡಿಯನ್​ ವಿರುದ್ಧ 37 ಹಾಗೂ ಲಕ್ಷ್ಮಣಕಾಂತನ್​ ವಿರುದ್ಧ 57 ಪ್ರಕರಣ ದಾಖಲಾಗಿರುವುದಾಗಿ ಪೊಲೀಸ್​ ಇಲಾಖೆ ಮಾಹಿತಿ ನೀಡಿದೆ.
ಬೇತಮಂಗಲ ಪೊಲೀಸ್​ ಠಾಣೆ ವ್ಯಾಪ್ತಿಯ ನೆರ್ನಹಳ್ಳಿಯ ವನಿತಮ್ಮ ಎಂಬುವರ ಮನೆಯಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮಡೆಡ್ಡಿ(26), ವೆಂಕಟಪ್ಪ (69) ಹಾಗೂ ರಾಜಶೇಖರ್​ ಬುಡ್ಡ (27) ಎಂಬ ಮೂವರನ್ನು ಬಂಧಿಸಲಾಗಿದೆ.
ಆರೋಪಿಗಳಿಂದ 6.780 ಗ್ರಾಂ ಚಿನ್ನಾಭರಣ, 500 ಗ್ರಾಂ ಬೆಳ್ಳಿ ಆಭರಣ, ಒಂದು ಜತೆ ಕಂಚಿನ ದೀಪ, ಒಂದು ಹಿತ್ತಾಳೆ ಕಮಾಕ್ಷಿ ದೀಪ ಹಾಗೂ ಕೃತ್ಯಕ್ಕೆ ಬಳಸಿದ್ದ ಎರಡು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ. ವಿಚಾರಣೆ ವೇಳೆ ಕಾಮಸಮುದ್ರ, ಬಂಗಾರಪೇಟೆ ಹಾಗೂ ಮಾಸ್ತಿ ಪೊಲೀಸ್​ ಠಾಣೆಗಳಲ್ಲಿ ದಾಖಲಾಗಿದ್ದ ಇತರ ಕಳವು ಪ್ರಕರಣಗಳಲ್ಲಿಯೂ ಆರೋಪಿಗಳ ಕೈವಾಡ ಇರುವುದು ಬೆಳಕಿಗೆ ಬಂದಿದೆ.
ಕಾರ್ಯಾಚರಣೆಯಲ್ಲಿ ಡಿವೈಎಸ್​ಪಿ ಲಕ್ಷ್ಮಯ್ಯ ವಿ. ಅವರ ಮಾರ್ಗದರ್ಶನವಿದ್ದು, ಬಂಗಾರಪೇಟೆ ಠಾಣೆ ಇನಸ್ಪೆಕ್ಟರ್​ ಸಿ.ರವಿಕುಮಾರ್​, ಕಾಮಸಮುದ್ರ ಪಿಎಸ್​ಐ ಬಿ.ವಿ. ಕಿರಣ್​ಕುಮಾರ್​, ಬೇತಮಂಗಲ ವೃತ್ತದ ಸಿಪಿಐ ಜಗದೀಶ್​ ಎಸ್​.ಆರ್​ ಸೇರಿ ವಿವಿಧ ಪೊಲೀಸ್​ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು ಎಂದು ಎಸ್​ಪಿ ತಿಳಿಸಿದರು.