ಬೆಂಗಳೂರಲ್ಲಿ ಹಾಡಹಗಲೇ ATM ವಾಹನ ದರೋಡೆ
- ಎಟಿಎಂಗೆ ಹಣ ತುಂಬುವ ವಾಹನದಲ್ಲಿ ದರೋಡೆ
- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಾಡಹಗಲಲ್ಲೇ ನಡೆದ ದುಷ್ಕೃತ್ಯ
- ಬರೋಬ್ಬರಿ 7.11 ಕೋಟಿ ರೂಪಾಯಿ ಎಗರಿಸಿದ ಖದೀಮರು
ಬೆಂಗಳೂರು: ಎಟಿಎಂಗೆ ( ATM ) ಹಣ ತುಂಬುವ ವಾಹನದಿಂದ ಬರೋಬ್ಬರಿ 7.11 ಕೋಟಿ ರೂಪಾಯಿ ದರೋಡೆ ಮಾಡಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಾಡಹಗಲಲ್ಲೇ ನಡೆದಿದೆ. ಕೇಂದ್ರ ತೆರಿಗೆ ಅಧಿಕಾರಿಗಳ ಸೋಗಿನಲ್ಲಿ ಬಂದ ಗ್ಯಾಂಗ್ ಈ ದುಷ್ಕೃತ್ಯ ಎಸಗಿ ಪರಾರಿಯಾಗಿದೆ.
ಸಿಎಂಎಸ್ ಕಂಪನಿಗೆ ಸೇರಿದ ವಾಹನದಿಂದ ಹಣವನ್ನು ಎಗರಿಸಲಾಗಿದೆ. ಈ ದುಷ್ಕೃತ್ಯ ಅಶೋಕ ಪಿಲ್ಲರ್ ಬಳಿ ಹಾಡಹಗಲಲ್ಲೇ ನಡೆದಿದ್ದು, ಬೆಂಗಳೂರು ಜತೆಯನ್ನು ಆತಂಕಕ್ಕೆ ದೂಡಿದೆ.
ಪ್ರಕರಣದ ವಿವರಣೆಗೆ ಬರುವುದಾದರೆ, ಎಚ್‌ಡಿಎಫ್‌ಸಿ ಬ್ಯಾಂಕಿನ ಜೆಪಿ ನಗರ ಶಾಖೆಯಿಂದ ಹಣ ತರುತ್ತಿದ್ದ ವಾಹನವನ್ನು ಇನ್ನೋವಾ ಕಾರಿನಲ್ಲಿ ಬೆನ್ನಟ್ಟಿ ಬಂದ ಒಂದು ಗ್ಯಾಂಗ್ ತಡೆದಿದೆ. ಬಳಿಕ, ತಾವು ಕೇಂದ್ರ ತೆರಿಗೆ ಇಲಾಖೆಯ ಅಧಿಕಾರಿಗಳೆಂದು ಹೇಳಿಕೊಂಡಿದ್ದಾರೆ. ದಾಖಲೆಗಳನ್ನು ಪರಿಶೀಲಿಸಬೇಕಾಗಿದೆ ಎಂದು ಹೇಳಿದ್ದಾರೆ.
ಇದಾದ ಬಳಿಕ ಸಿಎಂಎಸ್ ಸಿಬ್ಬಂದಿಗೆ ಮಾತನಾಡಲು ಅವಕಾಶ ನೀಡದೇ, ಅವರನ್ನು ಹಾಗೂ ಹಣವಿದ್ದ ಬಾಕ್ಸ್ ಅನ್ನು ಇನ್ನೋವಾ ಕಾರಿಗೆ ದುಷ್ಕರ್ಮಿಗಳು ವರ್ಗಾಯಿಸಿಕೊಂಡಿದ್ದಾರೆ. ಬಳಿಕ, ಅಲ್ಲಿಂದ ಡೈರಿ ಸರ್ಕಲ್ಗೆ ಕರೆದೊಯ್ದ ಕಿರಾತಕರು ಸಿಎಂಎಸ್ ಸಿಬ್ಬಂದಿಯನ್ನು ವಾಹನದಿಂದ ಕೆಳಗಡೆ ಇಳಿಸಿ, ಹಣದೊಂದಿಗೆ ಪರಾರಿಯಾಗಿದ್ದಾರೆ.
ಸದ್ಯ ಸಿಎಂಎಸ್ ಕಂಪನಿಯ ನೌಕರರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದ್ದು, ದಕ್ಷಿಣ ವಿಭಾಗ ಪೊಲೀಸರು ವಿಶೇಷ ತಂಡವನ್ನು ರಚಿಸಿ ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಪೊಲೀಸರ ಆರಂಭಿಕ ಅಂದಾಜಿನ ಪ್ರಕಾರ ಇದರ ಹಿಂದೆ ದೊಡ್ಡ ದರೋಡೆಕೋರರ ಗುಂಪೇ ಇದೆ ಎನ್ನಲಾಗಿದೆ.
ಘಟನೆ ಬೆನ್ನಲ್ಲೇ ತನಿಖೆ ಆರಂಭಿಸಿರುವ ಪೊಲೀಸರು ಪ್ರತ್ಯಕ್ಷದರ್ಶಿಗಳಿಂದ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಅಲ್ಲದೆ, ಕೆಲವು ಶಂಕಿತರನ್ನೂ ಗುರುತಿಸಲಾಗಿದೆ.