Prajwal Revanna | ಮಾಜಿ ಸಂಸದ ಪ್ರಜ್ವಲ್ ರೇವಣ್ಣ 
ರಾಜ್ಯ

ಪ್ರಜ್ವಲ್​ ರೇವಣ್ಣಗೆ ಹಿನ್ನಡೆ​; ಜೀವಾವಧಿ ಶಿಕ್ಷೆ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಹೈ ಕೋರ್ಟ್​ | Prajwal Revanna

ಬೆಂಗಳೂರು: ತಮ್ಮ ವಿರುದ್ಧ ದಾಖಲಾಗಿರುವ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಬೇಕು ಮತ್ತು ಮಧ್ಯಂತರ ಜಾಮೀನು ನೀಡಬೇಕು ಎಂದು ಕೋರಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಬುಧವಾರ (ಡಿ.3) ವಜಾಗೊಳಿಸಿದ್ದು, ಅಂತಿಮ ವಿಚಾರಣೆಯನ್ನು ಜನವರಿ 12ಕ್ಕೆ ನಿಗದಿಪಡಿಸಿ ಆದೇಶ ಹೊರಡಿಸಿದೆ.
ನ್ಯಾಯಮೂರ್ತಿ ಕೆ.ಎಸ್. ಮುದಗಲ್ ಮತ್ತು ಟಿ. ವೆಂಕಟೇಶ್ ನಾಯಕ್ ಅವರ ವಿಭಾಗೀಯ ಪೀಠವು ಜಾಮೀನು ನೀಡಲು ಇದು ಸೂಕ್ತ ಪ್ರಕರಣವಲ್ಲ, ಒಂದು ವೇಳೆ ಹಾಗೆ ಮಾಡಿದರೆ ಸಮಾಜಕ್ಕೆ ಕೆಟ್ಟ ಸಂದೇಶ ನೀಡಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ. ದಾಖಲೆಯಲ್ಲಿರುವ ಸಾಕ್ಷ್ಯಗಳನ್ನು ಪರಿಗಣಿಸಿ ಮೇಲ್ಮನವಿ ಸಲ್ಲಿಸಿದ ವ್ಯಕ್ತಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ, ಇತರ ಬಾಕಿ ಇರುವ ಪ್ರಕರಣಗಳ ಮೇಲೂ ಇದು ಪರಿಣಾಮ ಬೀರವು ಸಾಧ್ಯತೆಯ ಹಿನ್ನಲೆಯಲ್ಲಿ ನ್ಯಾಯಾಲಯ ಈ ತೀರ್ಮಾನಕ್ಕೆ ಬಂದಿದೆ ಎಂದು ವರದಿಯಾಗಿದೆ.
ರೇವಣ್ಣ ವಿರುದ್ಧ ಹಲವಾರು ಲೈಂಗಿಕ ದೌರ್ಜನ್ಯ ಪ್ರಕರಣಗಳು ಬಾಕಿ ಉಳಿದಿವೆ ಎಂದು ಉಲ್ಲೇಖಿಸಿರುವ ಪೀಠ, ಆರೋಪಿ ಸ್ಥಾನದಲ್ಲಿ ನಿಂತಿರುವ ವ್ಯಕ್ತಿ, ತನ್ನ ರಾಜಕೀಯ ಮತ್ತು ಆರ್ಥಿಕ ಪ್ರಭಾವದಿಂದಾಗಿ ಆರಂಭದಲ್ಲಿ ಘಟನೆಯನ್ನು ವರದಿ ಮಾಡಿರಲಿಲ್ಲ ಎಂದು ತಿಳಿಸಿದೆ. ಈ ಸಂದರ್ಭದಲ್ಲಿ ಜಾಮೀನಿನ ಮೇಲೆ ಬಿಡುಗಡೆ ಮಾಡುವುದರಿಂದ ಪ್ರಕರಣದ ಮೇಲೂ ಇದು ಪ್ರಭಾವ ಬೀರಬಹುದು, ಸಾಕ್ಷ್ಯ ನಾಶವಾಗಬಹುದು ಎಂದು ತಿಳಿಸಿದೆ.
ಪ್ರಜ್ವಲ್​ ರೇವಣ್ಣ ಪರ ಹಾಜರಾದ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ, ಎಲೆಕ್ಟ್ರಾನಿಕ್, ವೈದ್ಯಕೀಯ ಮತ್ತು ವಿಧಿವಿಜ್ಞಾನ ಸಾಕ್ಷ್ಯಗಳಲ್ಲಿನ ವ್ಯತ್ಯಾಸಗಳನ್ನು ಉಲ್ಲೇಖಿಸುತ್ತಾ, ಅಪರಾಧವನ್ನು ವರದಿ ಮಾಡುವಲ್ಲಿ ಮೂರರಿಂದ ನಾಲ್ಕು ವರ್ಷಗಳ ವಿಳಂಬವು ಪ್ರಾಸಿಕ್ಯೂಷನ್ ಪ್ರಕರಣವನ್ನು ದುರ್ಬಲಗೊಳಿಸುತ್ತದೆ, ಇದು ರಾಜಕೀಯ ದ್ವೇಷದ ಆರೋಪವಾಗಿದ್ದು, ಶಿಕ್ಷೆಯ ಸಂದರ್ಭದಲ್ಲಿ ಆರೋಪಿಯ ಸಂಪೂರ್ಣ ವಿಚಾರಣೆಯನ್ನು ನಿರಾಕರಿಸಲಾಯಿತು ಎಂದು ವಾದಿಸಿದರು.
ಅರ್ಜಿಯನ್ನು ವಿರೋದ್ಧ ವಾದ ಮಂಡಿಸಿದ ವಿಶೇಷ ಸಾರ್ವಜನಿಕ ಅಭಿಯೋಜಕ ಪ್ರೊಫೆಸರ್ ರವಿವರ್ಮ ಕುಮಾರ್, ರೇವಣ್ಣ ಸಮಾಜಕ್ಕೆ ಮತ್ತು ನಡೆಯುತ್ತಿರುವ ವಿಚಾರಣೆಗಳಿಗೆ ಅಪಾಯವನ್ನುಂಟುಮಾಡಿದ್ದಾರೆ, ಆರೋಪಿಯು ತನಿಖೆಯ ಸಮಯದಲ್ಲಿ ಸಹಕರಿಸಲಿಲ್ಲ, ವೀಡಿಯೊಗಳನ್ನು ರೆಕಾರ್ಡ್ ಮಾಡಲು ಬಳಸಿದ ಫೋನ್ ತಡೆಹಿಡಿದು ವಿಚಾರಣೆಯನ್ನು ವಿಫಲಗೊಳಿಸಲು ಪ್ರಯತ್ನಿಸಿದ್ದರು ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಪ್ರಜ್ವಲ್​ ಪರ ವಕೀಲರು ಎತ್ತಿದ ಅಂಶಗಳು ಪ್ರಕರಣದ ಅರ್ಹತೆಗೆ ಸಂಬಂಧಿಸಿದ್ದು, ಅವುಗಳನ್ನು ಅಂತಿಮ ವಿಚಾರಣೆಯ ಸಮಯದಲ್ಲಿ ಮಾತ್ರ ಪರಿಶೀಲಿಸಲಾಗುವುದು, ಜಾಮೀನು ಹಂತದಲ್ಲಿ ಅಲ್ಲ ಎಂದು ನ್ಯಾಯಾಲಯ ತಿಳಿಸಿದ್ದು, ಶಿಕ್ಷೆಯ ಅಮಾನತು ಅರ್ಜಿಯನ್ನು ನಿರ್ಧರಿಸುವಾಗ ಆಪಾದಿತ ಲೋಪದೋಷಗಳು ಅಥವಾ ಸಾಕ್ಷ್ಯಗಳಲ್ಲಿನ ಅಂತರವನ್ನು ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಜೀವಾವಧಿ ಶಿಕ್ಷೆ ಹಿನ್ನಲೆ..

ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣವು ಸ್ವತಃ ಅವರೇ ಚಿತ್ರೀಕರಿಸಿದ ಅಶ್ಲೀಲ ವಿಡಿಯೋಗಳನ್ನು ಹೊಂದಿರುವ ಪೆನ್ ಡ್ರೈವ್ ಪ್ರಸಾರವಾದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿತು. ಆರೋಪಿ ಆ ಎಲ್ಲ ವಿಡಿಯೋಗಳನ್ನು ಮಾರ್ಫ್ ಮಾಡಲಾಗಿದೆ ಎಂದು ಹೇಳಿಕೊಂಡಿದ್ದು, ಈ ಸಂಬಂಧ ದೂರನ್ನು ಸಹ ದಾಖಲಿಸಿದ್ದಾರೆ. ಆಗಸ್ಟ್‌ನಲ್ಲಿ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಪ್ರಜ್ವಲ್​ಗೆ, ಲೈಂಗಿಕ ದೌರ್ಜನ್ಯ, ಲೈಂಗಿಕ ಕಿರುಕುಳ ಮತ್ತು ಸಾಕ್ಷ್ಯ ನಾಶದ ಆರೋಪದಡಿಯಲ್ಲಿ ತಪ್ಪಿತಸ್ಥರೆಂದು ತೀರ್ಪು ನೀಡಿ ಜೀವಾವಧಿ ಶಿಕ್ಷೆ ವಿಧಿಸಿತು. ಹೈಕೋರ್ಟ್ ಮೇಲ್ಮನವಿಯನ್ನು ಅಂತಿಮ ವಿಚಾರಣೆಗಾಗಿ 2026ರ ಜನವರಿ 12 ಕ್ಕೆ ಮುಂದೂಡಿದೆ(ಏಜೆನ್ಸೀಸ್​).