ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಖೇಲೋ ಇಂಡಿಯಾ ಸಂವಾದ "ಖೇಲ್ ಕಿ ಬಾತ್, ಪಿಎಂ ಮೋದಿ ಕೆ ಸಾಥ್' ಕಾರ್ಯಕ್ರಮದಲ್ಲಿ ಪ್ರೊ.ಬಟ್ಟು ಸತ್ಯನಾರಾಯಣ, ಪ್ರೊ.ಬಸವರಾಜ ಕುಬಕಡ್ಡಿ, ಸುಮೀತ್ ಪಾರ್ಕಿ, ಡಾ.ಎಂ.ಎಸ್.ಪಾಸೋಡಿ, ಡಾ.ಮಲ್ಲಿಕಾರ್ಜುನ ಹೂಗಾರ, ಡಾ.ಸಾಯಿ ಅಭಿನವ ಇತರರಿದ್ದರು.
- ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಸಲಹೆ
- ಕೇಂದ್ರೀಯ ವಿವಿಯಲ್ಲಿ ಖೇಲೋ ಇಂಡಿಯಾ ಸಂವಾದ
ಕಲಬುರಗಿ: ವಿದ್ಯಾರ್ಥಿಗಳು ತಮ್ಮ ದೈನಂದಿನ ಶೈಕ್ಷಣಿಕ ಚಟುವಟಿಕೆಗಳ ಜತೆಗೆ ಕಡ್ಡಾಯವಾಗಿ ಯಾವುದಾದರೊಂದು ಕ್ರೀಡೆಯಲ್ಲಿ ಭಾಗವಹಿಸಬೇಕು. ನಿತ್ಯ ದೈಹಿಕ ಚಟುವಟಿಕೆಗೆ ಸಮಯ ಮೀಸಲಿಡಬೇಕು ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಸಲಹೆ ನೀಡಿದರು.
ರಾಷ್ಟ್ರೀಯ ಕ್ರೀಡಾ ದಿನಾಚರಣೆ ನಿಮಿತ್ತ ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಮೈ ಭಾರತ್ನಿಂದ ಗುರುವಾರ ಆಯೋಜಿಸಿದ್ದ ಖೇಲೋ ಇಂಡಿಯಾ ಸಂವಾದ "ಖೇಲ್ ಕಿ ಬಾತ್, ಪಿಎಂ ಮೋದಿ ಕೆ ಸಾಥ್' ಕಾರ್ಯಕ್ರಮದಲ್ಲಿ ವರ್ಚುವಲ್ ಮೂಲಕ ಭಾಗವಹಿಸಿ ಮಾತನಾಡಿ, ಕ್ರೀಡೆ ಮತ್ತು ವ್ಯಾಯಾಮ ಉತ್ತಮ ಆರೋಗ್ಯ ಕಾಪಾಡುವುದರ ಜತೆಗೆ ಏಕಾಗ್ರತೆ, ಆತ್ಮವಿಶ್ವಾಸ ಮತ್ತು ಮಾನಸಿಕ ಸದೃಢತೆ ಹೆಚ್ಚಿಸುತ್ತದೆ ಎಂದರು.
ಕಾನೂನು ಅಧ್ಯಯನ ಮತ್ತು ವಿದ್ಯಾರ್ಥಿ ಕಲ್ಯಾಣದ ಡೀನ್ ಪ್ರೊ.ಬಸವರಾಜ ಕುಬಕಡ್ಡಿ ಮಾತನಾಡಿದರು.
ಮೈ ಭಾರತ್ ಕೇಂದ್ರದ ಜಿಲ್ಲಾ ಸಹಾಯಕ ನಿರ್ದೇಶಕ ಸುಮೀತ್ ಪಾರ್ಕಿ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಎಂ.ಎಸ್.ಪಾಸೋಡಿ, ಕಾರ್ಯಕ್ರಮ ಸಂಯೋಜಕ ಡಾ.ಮಲ್ಲಿಕಾರ್ಜುನ ಹೂಗಾರ, ಕ್ರೀಡಾ ಸಂಯೋಜಕ ಡಾ.ಸಾಯಿ ಅಭಿನವ ಇತರರಿದ್ದರು.
ವಿವಿ ಕ್ರೀಡಾ ವಿಭಾಗದ ನೂತನ ವೆಬ್ಸೈಟ್ ಅನ್ನು ಅನಾವರಣಗೊಳಿಸಲಾಯಿತು. ರಾಜ್ಯ ಮತ್ತು ಜಿಲ್ಲಾ ಮಟ್ಟದ ಬಾಸ್ಕೆಟ್ಬಾಲ್ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದ ಸುರೇಶ್, ಸಿರಾಜುದ್ದೀನ್ ಮತ್ತು ಸಂತೋಷ್ ಅವರನ್ನು ಸತ್ಕರಿಸಲಾಯಿತು.