ಕರ್ನಾಟಕ ರಾಜ್ಯ ನೌಕರರ ಸಂಘದ ತಾಲೂಕು ಘಟಕದಿಂದ ಚನ್ನರಾಯಪಟ್ಟಣದಲ್ಲಿ ಆಯೋಜಿಸಿದ್ದ ವಾರ್ಷಿಕ ಸಭೆ ಆರೋಗ್ಯ ಶಿಬಿರ ಹಾಗೂ ಉಪನ್ಯಾಸ ಕಾರ್ಯಕ್ರಮವನ್ನು ಶಾಸಕ ಸಿ.ಎನ್. ಬಾಲಕೃಷ್ಣ ಉದ್ಘಾಟಿಸಿದರು. ಚಟ್ಟನಹಳ್ಳಿ ಮಹೇಶ್, ಎನ್.ಕುಮಾರ್ ಎಚ್.ಎನ್.ದೀಪಾ, ಎಂ.ಆರ್. ಮಂಜುನಾಥ್, ಬಿ.ಪಿ.ಕೃಷ್ಣೇಗೌಡ, ಜಿ.ಎಸ್. ಶಂಕರಪ್ಪ ಇತರರು ಇದ್ದರು.
ಚನ್ನರಾಯಪಟ್ಟಣ: ಸರ್ಕಾರಿ ಕೆಲಸ ದೇವರ ಕೆಲಸ. ಈ ಮಾತನ್ನು ಸಾರ್ಥಕ ಪಡಿಸಬೇಕಾದರೆ ಸರ್ಕಾರಿ ನೌಕರರು ಸೇವಾ ಮನೋಭಾವದಿಂದ ದುಡಿಯಬೇಕು ಎಂದು ವಾಗ್ಮಿ ಚಟ್ಟನಹಳ್ಳಿ ಮಹೇಶ್ ತಿಳಿಸಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಕರ್ನಾಟಕ ರಾಜ್ಯ ನೌಕರರ ಸಂಘದ ತಾಲೂಕು ಘಟಕದ ವತಿಯಿಂದ ಆಯೋಜಿಸಿದ್ದ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಹಾಗೂ ಉಚಿತ ಆರೋಗ್ಯ ತಪಾಸಣೆ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾರ್ವಜನಿಕ ಸೇವೆಯಲ್ಲಿರುವ ಸರ್ಕಾರಿ ನೌಕರರು ಎಷ್ಟರ ಮಟ್ಟಿಗೆ ತಮ್ಮನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಬೆರಳೆಣಿಕೆಯಷ್ಟು ಸರ್ಕಾರಿ ನೌಕರರನ್ನು ಮಾತ್ರ ಜನ ಮೆಚ್ಚುತ್ತಾರೆ. ಪುಣ್ಯಾತ್ಮ ನಮಗೆ ಸಹಾಯ ಮಾಡಿಕೊಟ್ಟ ಅಂತ ಜೀವನವಡೀ ನೆನೆಸಿಕೊಳ್ಳುತ್ತಾರೆ. ಆದರೆ ಪ್ರಸ್ತುತ ಸಮಾಜದಲ್ಲಿ ಹೆಚ್ಚಾಗಿ ದುಡ್ಡಿಲ್ಲದೆ ಏನೂ ನಡಿಯೋದಿಲ್ಲ ಎಂಬ ಮಾತು ಕೇಳಿಬರುತ್ತದೆ. ಈ ರೀತಿ ವಾತಾವರಣದಲ್ಲಿ ಜನ ಸೇವೆ ಎಂಬುದು ಅರ್ಥಹೀನವಾಗಿದೆ ಎಂದರು.
ಅರ್ಹರಿಗೆ, ನೊಂದವರಿಗೆ ಸೇವೆ ಮಾಡಿದರೆ ಸರ್ಕಾರಿ ನೌಕರನಾಗಿದ್ದಕ್ಕೂ, ಸೇವಕನಾಗಿದ್ದಕ್ಕೂ ಸಾರ್ಥಕತೆ ದೊರೆಯುತ್ತದೆ. ಇಲ್ಲಿ ಮುಖ್ಯವಾಗಿರಬೇಕಾದದ್ದು ನಿಸ್ವಾರ್ಥ ಸೇವೆ. ನಾವು ಕೊಡುವುದಕ್ಕಿಂತ ಮಿಗಿಲಾಗಿ, ಆತ ನಮ್ಮಿಂದ ಪಡೆಯಲು ಬಂದಿರುವುದು ದೇವಸದೃಶವೆಂದು ಭಾವಿಸಬೇಕು. ಈ ಮಹತ್ವವನ್ನು ಎತ್ತಿಹಿಡಿಯಲೆಂದೇ ಮಹನೀಯರಾದ ಕೆಂಗಲ್ ಹನುಮಂತಯ್ಯ ಅವರ ವಿಧಾನ ಸೌಧದ ಹಣೆಯ ಮೇಲೆ ಎಲ್ಲರಿಗೂ ಕಾಣಿಸುವಂತೆ ’ಸರ್ಕಾರದ ಕೆಲಸ ದೇವರ ಕೆಲಸ’ ಎಂದು ಬರೆಸಿದ್ದಾರೆ ಎಂದು ಹೇಳಿದರು.
ಶಾಸಕ ಸಿ.ಎನ್.ಬಾಲಕೃಷ್ಣ ಕಾರ್ಯಕ್ರಮನು ಉದ್ಘಾಟಿಸಿ ಮಾತನಾಡಿ, ಸರ್ಕಾರಿ ಕೆಲಸವನ್ನು ದೇವರ ಕೆಲಸವೆಂದು ಭಾವಿಸಿ ನಿಷ್ಕಳಂಕರಾಗಿ ಕಾರ್ಯ ನಿರ್ವಹಿಸುತ್ತಿರುವ ನೌಕರರ ಸೇವೆಗೆ ಬೆಲೆ ಕಟ್ಟಲಾಗದು ಎಂದರು.
ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳಲ್ಲಿಯೂ ಹಲವು ವರ್ಷಗಳಿಂದ ಸಾವಿರಾರು ಹುದ್ದೆಗಳು ಖಾಲಿ ಇವೆ. ಅಧಿಕಾರಕ್ಕೆ ಬಂದ ಪಕ್ಷಗಳು ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಇಚ್ಛಾಶಕ್ತಿ ಪ್ರದರ್ಶಿಸಿಲ್ಲ. ಹುದ್ದೆಗಳನ್ನು ತುಂಬುವುದರಿಂದ ಹೊರೆ ಹೆಚ್ಚುತ್ತದೆ ಎಂದು ಮಿತವ್ಯಯ ನೆಪ ಮುಂದಿಟ್ಟು ಹುದ್ದೆಗಳ ಭರ್ತಿಗೆ ಅಡ್ಡಗಲು ಹಾಕುತ್ತಿದೆ. ಹಾಲಿ ಇರುವ ಸಿಬ್ಬಂದಿಗೆ ಅಧಿಕ ಕೆಲಸದ ಒತ್ತಡದ ಜತೆಗೆ ಮಾನಸಿಕವಾಗಿಯೂ ಪರಿಣಾಮ ಉಂಟಾಗಿದೆ. ಸರ್ಕಾರ ಕೂಡಲೇ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸದಾ ಕಚೇರಿಯ ಕಡತಗಳೊಂದಿಗೆ ವ್ಯವಹರಿಸುವ ಸರ್ಕಾರಿ ನೌಕರರು ಬಿಡುವಿನ ಅವಧಿಯಲ್ಲಿ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದು ಒಳ್ಳೆಯದು. ಇದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಧೃಡವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆಯೋಜಿಸಿದ್ದ ಆರೋಗ್ಯ ಹಾಗೂ ರಕ್ತದಾನ ಶಿಬಿರದಲ್ಲಿ ಸರ್ಕಾರಿ ನೌಕರರು ಆರೋಗ್ಯ ತಪಾಸಣೆ ಮಾಡಿಸಿಕೊಂಡು ರಕ್ತದಾನ ಮಾಡಿದರು. ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ.ಕೃಷ್ಣೇಗೌಡ, ತಹಸೀಲ್ದಾರ್ ಜಿ.ಎಸ್. ಶಂಕರಪ್ಪ ಮಾತನಾಡಿದರು. ತಾಲೂಕು ನೌಕರರ ಸಂಘದ ಅಧ್ಯಕ್ಷ ಎಂ.ಆರ್. ಮಂಜುನಾಥ, ಆರಕ್ಷಕ ಉಪ ಅಧೀಕ್ಷಕ ಎನ್.ಕುಮಾರ್, ತಾಪಂ ಇಒ ಜಿ. ಆರ್.ಹರೀಶ್, ಬಿಇಒ ಎಚ್.ಎನ್.ದೀಪಾ, ಬಿಆರ್‌ಸಿ ಕೆ.ಎನ್.ಅನಿಲ್, ಟಿಎಚ್‌ಒ ಪಿ.ತೇಜಸ್ವಿನಿ, ಸಿಡಿಪಿಒ ಮಮತಾ ಇತರರು ಇದ್ದರು.