ಸಿವಿಲ್ ಕಾನ್‌ಸ್ಟೆಬಲ್ ನೇಮಕಾತಿ 
ರಾಜ್ಯ

ಸಿವಿಲ್ ಕಾನ್‌ಸ್ಟೆಬಲ್ ನೇಮಕಾತಿಗೆ ಅರ್ಜಿ ಸಲ್ಲಿಸಲು ಕೈಕೊಟ್ಟ ಸರ್ವರ್

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸಿವಿಲ್ ಕಾನ್‌ಸ್ಟೆಬಲ್ ನೇಮಕಾತಿಗೆ ಅರ್ಜಿ ಸಲ್ಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ(ಕೆಇಎ) ವೆಬ್‌ಸೈಟ್ ತಾಂತ್ರಿಕ ದೋಷ ಉಂಟಾಗಿದ್ದು, ಅಭ್ಯರ್ಥಿಗಳು ಪರದಾಡುವಂತಾಗಿದೆ.
ಹೈದರಾಬಾದ್ ಕರ್ನಾಟಕ ಹೊರತುಪಡಿಸಿ 3395 ಹುದ್ದೆ ಮತ್ತು ಹೈದರಾಬಾದ್ ಕರ್ನಾಟಕಕ್ಕೆ 596 ಕಾನ್‌ಸ್ಟೆಬಲ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಜೂನ್ 10ರಿಂದ ಜುಲೈ 3ರವರೆಗೆ ಕೆಇಎ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ, ವೆಬ್‌ಸೈಟ್‌ನಲ್ಲಿ ಹಲವಾರು ಸಮಸ್ಯೆ ಎದುರಾಗಿದ್ದು, ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಕೆಇಎ ಸರ್ವರ್‌ನಲ್ಲಿ ಲಾಗಿನ್ ಸಮಸ್ಯೆ ಎದುರಾಗಿದ್ದು, ಹುಟ್ಟಿದ ದಿನಾಂಕಕ್ಕೂ ಮತ್ತು ಆಧಾರ್ ಕಾರ್ಡ್‌ಗೂ ಹೊಂದಾಣಿಕೆಯಾಗುತ್ತಿಲ್ಲ.
4 ಮತ್ತು 5ನೇ ಪುಟ ಓಪನ್ ಆಗಲು ಸಾಕಷ್ಟು ಸಮಯ ತೆಗೆದುಕೊಂಡು ಕೊನೆಗೆ ಸರ್ವರ್‌ಡೌನ್ ಆಗುತ್ತಿದೆ. ಜಾತಿ ಪ್ರಮಾಣಪತ್ರವನ್ನು ಲಿಂಕ್ ಮಾಡುವಾಗ ಆರ್‌ಡಿ ಸಂಖ್ಯೆ ತೆಗೆದುಕೊಳ್ಳುತ್ತಿಲ್ಲ. ಆಧಾರ್‌ಗೂ ಮತ್ತು ಅಂಕಪಟ್ಟಿಯಲ್ಲಿ ಇರುವ ಹೆಸರಿಗೂ ಒಂದು ಅಕ್ಷರ ಏರುಪೇರಾದರೂ ಹೊಂದಾಣಿಕೆ ಆಗುತ್ತಿಲ್ಲ. ಶೈಕ್ಷಣಿಕ ಪ್ರಮಾಣಪತ್ರಗಳು ಆನ್‌ಲೈನ್‌ನಲ್ಲಿ ಸಿಗುತ್ತಿಲ್ಲ. ಸರ್ವರ್ ಸಮಸ್ಯೆಗಳ ನಡುವೆ ಅರ್ಜಿ ಭರ್ತಿ ಮಾಡುವ ಹೊತ್ತಿಗೆ ನಿಗದಿತ ಸಮಯ ಮುಕ್ತಾಯ ಆಗುತ್ತಿದೆ. ಕೊನೆಗೆ ಶುಲ್ಕ ಪಾವತಿಗೆ ಹೋದಾಗ ಅಲ್ಲಿಯೂ ಪೇಮೆಂಟ್ ಗೇಟ್ ವೇ ಸಮಸ್ಯೆ ಆಗುತ್ತಿದೆ. ಇದೇ ರೀತಿಯಾಗಿ ಸಾಕಷ್ಟು ಸಮಸ್ಯೆಗಳು ಎದುರಾಗಿದ್ದು, ಕೂಡಲೇ ಪರಿಹರಿಸಬೇಕೆಂದು ಉದ್ಯೋಗಾಕಾಂಕ್ಷಿಗಳು ಕೆಇಎಗೆ ಮನವಿ ಮಾಡಿದ್ದಾರೆ.
ಜತೆಗೆ ಅರ್ಜಿ ಸಲ್ಲಿಸಲು ಇರುವ ಕಾಲಾವಕಾಶವನ್ನು ಕನಿಷ್ಠ 5 ರಿಂದ 6 ದಿನಗಳ ಕಾಲ ಮುಂದೂಡಿ ಹೆಚ್ಚುವರಿ ಸಮಯ ನೀಡಬೇಕು. ಎದುರಾಗಿರುವ ಸಮಸ್ಯೆಗಳನ್ನು ನಿವಾರಿಸಲು ಕೆಇಎ ಅಧಿಕಾರಿಗಳಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ ನೀಡಬೇಕೆಂದು ಮನವಿ ಮಾಡಿದ್ದಾರೆ.