Server problem is stealing money 
ರಾಜ್ಯ

ಕೂಲಿ ಕಸಿಯುತ್ತಿದೆ ಸರ್ವರ್​ ಸಮಸ್ಯೆ

ಚಿಕ್ಕಬಳ್ಳಾಪುರ ಡೆಸ್ಕ್
ಬಾಗೇಪಲ್ಲಿ: ಸರ್ಕಾರದಿಂದ ನೀಡುವ ಉಚಿತ ಅಕ್ಕಿ ಪಡೆದುಕೊಳ್ಳಲು ಕೂಲಿ ಬಿಟ್ಟು ಬೆಳಗ್ಗೆಯಿಂದ ಸಂಜೆವರೆಗೂ ನ್ಯಾಯಬೆಲೆ ಅಂಗಡಿ ಮುಂದೆ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ನಿಮಾರ್ಣಗೊಂಡಿದೆ. ಆದರೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಣ್ಮುಚ್ಚಿ ಕುಳಿತಿದೆ ಎಂದು ಪಡಿತರ ಚೀಟಿದಾರರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"

ಕೂಲಿಯಿಂದ ಬರುವ ಹಣದಲ್ಲಿ ಕುಟುಂಬ ನಿರ್ವಹಣೆ ಮಾಡುವವರು ಕೂಲಿ ಬಿಟ್ಟು ಸರ್ಕಾರ ನೀಡುವ ಅಕ್ಕಿಗಾಗಿ ನ್ಯಾಯಬೆಲೆ ಅಂಗಡಿಗಳ ಬಳಿ ಕಾಯುವ ಪರಿಸ್ಥಿತಿ ಎದುರಾಗಿದೆ. ಸರ್ವರ್​ ಒಮ್ಮೆ ಕೆಲಸ ಮಾಡುತ್ತೆ, ಇಲ್ಲವಾದಲ್ಲಿ ಕೈ ಕೊಡುತ್ತೆ. ಪಡಿತರ ಅಕ್ಕಿ ಬಿಡಲಾಗದು. ಕೂಲಿಗೆ ಹೋಗದೆ ಇರಲಾಗದು. ಸರ್ಕಾರ ಸರ್ವರ್​ ಸಮಸ್ಯೆ ಬಾರದಂತೆ ನೋಡಿಕೊಳ್ಳುವ ವ್ಯವಸ್ಥೆ ಮಾಡಲಿ.

> ಪ್ರಮೀಳಮ್ಮ, ಪಡಿತರದಾರರು, ಬಾಗೇಪಲ್ಲಿ

ಬಾಗೇಪಲ್ಲಿ ತಾಲೂಕು ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಆಹಾರ ಪದಾರ್ಥಗಳು ಪಡೆದುಕೊಳ್ಳಲು ಪಡಿತರದಾರರು ದಿನಗಟ್ಟಲೇ ಕಾದು ಕುಳಿತುಕೊಳ್ಳುವಂತಾಗಿದ್ದು, ಇಲಾಖೆಯ ಸರ್ವರ್​ ಸಮಸ್ಯೆಯಿಂದ ಕೂಲಿ ಕಾರ್ಮಿಕರು, ಜನರು ಹೈರಾಣಾಗುತ್ತಿದ್ದಾರೆ.
ಸರ್ವರ್​ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಪಡಿತರ ಪದಾರ್ಥಗಳ ವಿತರಣೆ ಸಮಯವನ್ನು ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ವಿಸ್ತರಿಸಿದರೂ ಸಮಸ್ಯೆ ಬಗೆಹರಿಯುತ್ತಿಲ್ಲ. ಕೇಂದ್ರ ಸರ್ಕಾರದಿಂದ ಒಬ್ಬ ಸದಸ್ಯನಿಗೆ 5 ಕೆಜಿ ಅಕ್ಕಿ ನೀಡುತ್ತಿದ್ದು, ಮೇ, ಜೂನ್​ 2 ತಿಂಗಳ ಪಡಿತರವನ್ನು ಒಂದೇ ಬಾರಿಗೆ ವಿತರಣೆ ಮಾಡುತ್ತಿರುವುದರಿಂದ ಏಕಕಾಲದಲ್ಲಿ ಎರಡು ಬಾರಿ ತಂಬ್​ ಪಡೆದುಕೊಳ್ಳಬೇಕಾಗಿದೆ. ಆದರೆ, ಸರ್ವರ್​ ಸಪೋರ್ಟ್​ ಮಾಡುತ್ತಿಲ್ಲ ಎಂದು ಹೇಳಿ ಆಹಾರ ಇಲಾಖೆ ಅಧಿಕಾರಿಗಳು ನುಣುಚಿಕೊಂಡರೆ ಬಡವರ ಪರಿಸ್ಥಿತಿ ಏನಾಗಬೇಕು ಎಂಬ ಪ್ರಶ್ನೆ ಉದ್ಭವಿಸಿದೆ.
"

ಕೇಂದ್ರ ಸರ್ಕಾರ ಮೇ, ಜೂನ್​ 2 ತಿಂಗಳ ಪಡಿತರ ಅಕ್ಕಿಯನ್ನು ಮೇ ತಿಂಗಳಿನಲ್ಲೇ ವಿತರಿಸುತ್ತಿರುವ ಕಾರಣ ಪಡಿತರ ಚೀಟಿದಾರರು ಎರಡು ಹೆಬ್ಬೆಟ್ಟಿನ ತಂಬ್​ ನೀಡಬೇಕು. ರಾಜ್ಯಾದ್ಯಂತ ಆಹಾರ ಇಲಾಖೆ ಸರ್ವರ್​ ಮೇಲೆ ಲೋಡ್​ ಹೆಚ್ಚಾಗಿ ಸಮಸ್ಯೆ ಎದುರಾಗಿದೆ. ಆದ ಕಾರಣ ಬೆಳಗ್ಗೆ 6 ರಿಂದ ರಾತ್ರಿ 10ರ ವರೆಗೆ ಪಡಿತರ ಪದಾರ್ಥ ವಿತರಣೆ ಮಾಡುವಂತೆ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಸೂಚಿಸಿದ್ದೇವೆ.

> ನಾಗರಾಜು, ಚಿಕ್ಕಬಳ್ಳಾಪುರ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪನಿರ್ದೇಶಕ

ಮುಂಗಾರಿನ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವವರು, ದಿನಗೂಲಿ ನೌಕರರು, ಕೂಲಿ ಕಾರ್ಮಿಕರು ಬದುಕಿನ ಕಾಯಕ ಬಿಟ್ಟು ಸರ್ಕಾರದಿಂದ ನೀಡುತ್ತಿರುವ ಉಚಿತ ಅಕ್ಕಿಗಾಗಿ ಬೆಳಗ್ಗೆ 6ರಿಂದ ಸಂಜೆವರೆಗೂ ನ್ಯಾಯಬೆಲೆ ಅಂಗಡಿಗಳ ಮುಂದೆ ಸಾಲಿನಲ್ಲಿ ನಿಂತರೂ ಪಡಿತರ ಸಿಗುವ ಖಾತ್ರಿ ಇಲ್ಲದಂತಾಗಿದೆ. ಇದರಿಂದ ಕೂಲಿ ಕಾರ್ಮಿಕರು ಕೂಲಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಸರ್ವರ್​ ಸಮಸ್ಯೆಗೆ ಸರ್ಕಾರ ಪರಿಹಾರ ಕಲ್ಪಿಸಬೇಕು ಎಂದು ಪಡಿತರದಾರರು ಒತ್ತಾಯಿಸಿದ್ದಾರೆ.