Serve for the good of the people.
ಮಧುಗಿರಿ: ಜನರಿಗೆ ಉತ್ತಮವಾದ ಸೇವೆ ನೀಡಿ, ಅನುಕೂಲ ಕಲ್ಪಿಸಿಕೊಟ್ಟರೆ ಸ್ಮರಿಸುತ್ತಾರೆ. ಅಧಿಕಾರಿಗಳು, ನೌಕರರು ತಾರತಮ್ಯ ಬಿಟ್ಟು ಒಮ್ಮತದಿಂದ ಸೇವೆ ಸಲ್ಲಿಸಬೇಕು ಎಂದು ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.
ಪಟ್ಟಣದಲ್ಲಿ ಕೆಎನ್ಆರ್, ಆರ್ಆರ್ ಅಭಿಮಾನಿ ಬಳಗ ಹಾಗೂ ನೂತನ ಮಧುಗಿರಿ ಕೆಎಸ್ಆರ್ಟಿಸಿ ವಿಭಾಗೀಯ ವಿಭಾಗದ ನೌಕರರ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ತಾಲೂಕಿನಲ್ಲಿ ಸರಿಯಾದ ಸಮಯಕ್ಕೆ ಸಾರಿಗೆ ಸೌಲಭ್ಯ ನೀಡುತ್ತಿರುವುದರಿಂದ ಗ್ರಾಮೀಣ ಭಾಗದ ವಿಧ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಿದೆ. ಇದಕ್ಕಿಂತ ಪುಣ್ಯದ ಕೆಲಸ ಬೇರೊಂದಿಲ್ಲ. ಇದಕ್ಕೆ ನಿಮ್ಮ ಸಹಕಾರ ಕೂಡ ಕಾರಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಹಿಂದೆ ಗಡಿಭಾಗದಲ್ಲಿ ಬಡಕುಟುಂಬದ ಮಕ್ಕಳು ದೂರದ ಶಾಲೆಗಳಿಗೆ ಹೋಗಲು ಪ್ರಯಾಸ ಪಡುವಂತಾಗುತ್ತಿತ್ತು. ಅದರಲ್ಲೂ ಹೆಣ್ಣುಮಕ್ಕಳಿಗೆ ಬಹಳ ಕಷ್ಟಕರವಾಗಿತ್ತು. ಈಗ ಅಂತಹ ಪರಿಸ್ಥಿತಿ ಇಲ್ಲ. ಗ್ರಾಮೀಣ ಭಾಗದಲ್ಲಿ ಸಾರಿಗೆ ಸೌಕರ್ಯ ಕಲ್ಪಿಸಿರುವುದರಿಂದ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಅನುಕೂಲವಾಗಿದೆ. ಮುಂದಿನ ದಿನಗಳಲ್ಲಿ ಮಧುಗಿರಿ ನೂತನ ವಿಭಾಗವು ಯಶಸ್ವಿಯಾಗಿ ಕಾರ್ಯ ನಿರ್ವಹಿಸಲಿ ಎಂದು ಶುಭ ಹಾರೈಸಿದರು.