Sericulture farmers in trouble 
ರಾಜ್ಯ

ರೇಷ್ಮೆ ಬೆಳೆಗಾರರಿಗೆ ಸಂಕಷ್ಟ

ಬೂದಿಕೋಟೆ:

ಕೋಲಾರ ಜಿಲ್ಲೆಯಲ್ಲಿ ಅತಿ ಹೆಚ್ಚು ಮಾವು ಮತ್ತು ಟೊಮ್ಯಾಟೊ ಬೆಳೆಗಾರರು ಇದ್ದು, ಕಾಲಾನಂತರದಲ್ಲಿ ಎರಡೂ ಬೆಳೆಗೆ ಸರಿಯಾದ ಬೆಲೆ ಸಿಗದ ಕಾರಣ ಉಪಕಸುಬುಗಳಾದ ಕೋಳಿ ಸಾಕಣೆ, ಹೈನುಗಾರಿಕೆ, ಮತ್ಸ$ ಕೃಷಿ ಅಳವಡಿಸಿಕೊಂಡರು. ಆಗಾಗ ಎದುರಾಗುವ ಬರ ಹಾಗೂ ರೋಗಗಳಿಗೆ ಬೆಳೆ ತುತ್ತಾದ ಕಾರಣ ಅನೇಕರು ರೇಷ್ಮೆ ಕೃಷಿಯತ್ತ ದಾಪುಗಾಲಿಟ್ಟರು. ಈಗ ರೇಷ್ಮೆ ಹುಳುಗಳು ಸಾಯುತ್ತಿದ್ದು, ಇದರಲ್ಲೂ ನಷ್ಟ ಅನುಭವಿಸುವ ಸ್ಥಿತಿ ಎದುರಾಗಿದೆ.

ರೇಷ್ಮೆ ಕೃಷಿಯಲ್ಲಿ ಖರ್ಚು ಕಡಿಮೆ ಲಾಭ ಹೆಚ್ಚಾಗಿದ್ದರಿಂದ ನಾವು ಆ ಬೆಳೆ ಮಾಡಲು ಆಯ್ದುಕೊಂಡಿದ್ದೇವೆ. ಆದರೆ ಸುತ್ತಲಿರುವ ರೈತರು ತರಕಾರಿ ಬೆಳೆಗಳನ್ನು ಬೆಳೆದು ಅದಕ್ಕೆ ಔಷಧ ಸಿಂಪಡಿಸುತ್ತಾರೆ. ಅದರ ವಾಸನೆಗೆ ಹುಳಗಳು ಸಾಯುತ್ತಿವೆ. ಇದರಿಂದ ಅಪಾರ ನಷ್ಟವಾಗುತ್ತಿದೆ.

— ಮುನಿರಾಜು ಗೊಡಗಮಂದೆ , ಪ್ರಗತಿಪರ ರೈತ

ಕೋಲಾರ ಬರಪೀಡಿತ ಪ್ರದೇಶವಾಗಿದ್ದರೂ, ರೈತರು ಬೋರ್​ವೆಲ್​ ಕೊರೆಸಿ, ನೀರು ಒದಗಿಸಿಕೊಂಡು ರೇಷ್ಮೆ ಕೃಷಿ ಮುಂದುವರಿಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ ರೇಷ್ಮೆ ಬೆಳೆಯಲ್ಲಿಯೂ ಅನಿರೀಕ್ಷಿತ ಸಮಸ್ಯೆ ಕಾಣಿಸಿಕೊಳ್ಳುತ್ತಿವೆ. ಉತ್ತಮ ಇಳುವರಿ ದೊರೆಯದೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆ ಕೊರತೆಯಿಂದ ಕೆರೆ-ಕಟ್ಟೆಗಳು ಬತ್ತಿಹೋಗಿದ್ದು, ಸುಮಾರು 2,000 ಅಡಿ ಆಳದ ಬೋರ್​ವೆಲ್​ ಕೊರೆಸಿದರೂ ಅನೇಕ ಕಡೆಗಳಲ್ಲಿ ಸಮರ್ಪಕ ನೀರು ದೊರೆಯುತ್ತಿಲ್ಲ.

ಗಾಜಗ ಗ್ರಾಮದ ರೈತರೊಬ್ಬರು ಹುಳು ಸಾಕಾಣೆ ಮಾಡಿರುವುದು.

ಕೀಟನಾಶಕ ಕಾರಣ

ಈ ಹಿಂದೆ ಗುಲ್ಲಹಳ್ಳಿ ಗ್ರಾಪಂ ವ್ಯಾಪ್ತಿಯ ಮುತ್ತನೂರಿನಲ್ಲಿ ಬಹುತೇಕ ರೈತರು ತರಕಾರಿ ಬೆಳೆಯುತ್ತಿದ್ದು, ತರಕಾರಿಗೆ ಕೀಟನಾಶಕಗಳನ್ನು ಬಳಸಿದ್ದರಿಂದ ಪಕ್ಕದಲ್ಲೇ ಇದ್ದ ಹಿಪು$್ಪನೇರಳೆ ಸೊಪ್ಪಿಗೆ ತಾಗಿ ಮತ್ತು ರೇಷ್ಮೆ ಮನೆಯ ಸುತ್ತಲೂ ಇದೇ ಪರಿಸ್ಥಿತಿ ಇದ್ದರಿಂದ ಹುಳುಗಳು ಗೂಡು ಕಟ್ಟುವ ಮುನ್ನವೇ ಸಾಯುತ್ತಿವೆ. ರೇಷ್ಮೆ ತೋಟದ ಸುತ್ತಮುತ್ತ ಇರುವ ಟೊಮ್ಯಾಟೊ, ಕ್ಯಾಪ್ಸಿಕಂ ಸೇರಿ ವಿವಿಧ ತರಕಾರಿಗೆ ಸಿಂಪಡಿಸುವ ಕೀಟನಾಶಕ ಔಷಧವೇ ರೇಷ್ಮೆ ಕೃಷಿ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಬೆಳೆಗಾರರು ಆರೋಪಿಸಿದ್ದಾರೆ.

ಬರದ ನಡುವೆಯೂ ಕಡಿಮೆ ಅವಧಿಯಲ್ಲಿ ಆದಾಯ ತಂದುಕೊಡುವ ರೇಷ್ಮೆ ಸಾಕಣೆ ರೈತರ ಪಾಲಿಗೆ ಆಶಾಕಿರಣವಾಗಿದೆ. ರೇಷ್ಮೆ ಹುಳು ಸಾಕಣೆಗೆ ಸುಮಾರು 25 ದಿನದ ಅವಧಿ ಸಾಕಾಗುತ್ತದೆ. ಈ ಅವಧಿಯಲ್ಲಿ ರೈತರು ಸೂಕ್ತ ನಿರ್ವಹಣೆ ಮಾಡಿದರೆ ಗುಣಮಟ್ಟದ ಗೂಡು ಉತ್ಪಾದಿಸಿ ಆದಾಯ ಗಳಿಸಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಹುಳುಗಳು ಗೂಡು ಕಟ್ಟದ ಸಮಸ್ಯೆ, ರೋಗಬಾಧೆ, ಮಾರುಕಟ್ಟೆಯಲ್ಲಿ ಬೆಲೆ ಏರಿಳಿತ ಹಾಗೂ ಉತ್ಪಾದನಾ ವೆಚ್ಚ ಹೆಚ್ಚಳದಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ.

ಈಗ ಮಳೆ ಇಲ್ಲ ಕಷ್ಟಪಟ್ಟು ಬೆಳೆ ಮಾಡಿ ತುಂಬಾ ಕನಸು ಕಂಡಿದ್ದೆ ಆದರೆ ಗೂಡುಕಟ್ಟದೆ ನಮಗೆ ತುಂಬಾ ತೊಂದರೆ ಅನುಭವಿಸುತ್ತಿದ್ದೇವೆ . ರೈತರ ಕಷ್ಟ ಯಾರಿಗೂ ಬೇಡ. ಬೇರೆ ಬೆಳೆ ಮಾಡೋಣ ಅಂದ್ರೆ ಬೆಂಬಲ ಬೆಲೆ ಸಿಗಲ್ಲ ಈಗ ರೇಷ್ಮೆ ಮಾಡಿದರೆ ಈ ಪರಿಸ್ಥಿತಿ ಆಗಿದೆ.

— ವೆಂಕಟಸ್ವಾಮಿ ರೆಡ್ಡಿ ಪ್ರಗತಿಪರ ರೈತ ಗಾಜಗ

ಮುತ್ತನೂರು ಗ್ರಾಮದಲ್ಲಿ ರೇಷ್ಮೆ ಕೃಷಿಯೇ ಪ್ರಮುಖ ಬೆಳೆ ಆಗಿದ್ದು, ರೈತರು ತಮ್ಮ ಆದಾಯಕ್ಕಾಗಿ ಹೆಚ್ಚಿನ ಒತ್ತು ರೇಷ್ಮೆ ಸಾಕಣೆಗೆ ನೀಡುತ್ತಿದ್ದಾರೆ. ಸಂಬಂಧಪಟ್ಟ ರೇಷ್ಮೆ ಇಲಾಖೆ ಅಧಿಕಾರಿಗಳು ವೈಜ್ಞಾನಿಕ ಅರಿವು ಮೂಡಿಸಿ, ವಿವಿಧ ಬೆಳೆ ಸಮನ್ವಯವಾಗಿ ಬೆಳೆಸುವ ಬಗ್ಗೆ ಮಾರ್ಗದರ್ಶನ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.