ಆನೇಕಲ್​ ತಾಲೂಕು ಅತ್ತಿಬೆಲೆ ಗಡಿ.  
ರಾಜ್ಯ

ಆನೇಕಲ್​ ಭಾಗದಲ್ಲಿ ಆತಂಕ ಹೆಚ್ಚಿಸಿದ ಸರಣಿ ಕಳವು / ANEKAL

ನವೀನ್​ ಶೆಟ್ಟಿ ಕೆರಾಡಿ ಆನೇಕಲ್​ : ಆನೇಕಲ್​ ಉಪವಿಭಾಗದಲ್ಲಿ ಕಳವು ಪ್ರಕರಣ ದಿನೇದಿನೆ ಹೆಚ್ಚುತ್ತಿದ್ದು, ಜನ ಆತಂಕಗೊಂಡಿದ್ದಾರೆ. ಮನೆಯಿಂದ ಹೊರ ಹೋಗುವವರು ಎಚ್ಚರವಹಿಸಲೇಬೇಕು, ಇಲ್ಲವಾದರೆ ಮನೆಯಲ್ಲಿರುವ ಚಿನ್ನಾಭರಣಗಳು ಕಳ್ಳರ ಪಾಲಾಗಬಹುದು, ಪೊಲೀಸರು ಎಷ್ಟೇ ಕಾಳಜಿ ವಹಿಸಿದರೂ ಕಳ್ಳರು ಹೊಸಹೊಸ ಮಾರ್ಗ ಹುಡುಕುತ್ತಿದ್ದಾರೆ.
ಕಳೆದ ಮೂರು ದಿನದಲ್ಲಿ ಪಟ್ಟಣದಲ್ಲಿ ಎರಡು, ಅತ್ತಿಬೆಲೆ ಠಾಣೆ ವ್ಯಾಪ್ತಿಯಲ್ಲಿ ಒಂದು ಮನೆಯಲ್ಲಿ ಕಳವು ಆಗಿದೆ. ಮನೆಯಲ್ಲಿ ಯಾರೂ ಇಲ್ಲದೆ ಇರುವುದನ್ನು ಸಂಪೂರ್ಣವಾಗಿ ಅರಿತು ಹೊಂಚು ಹಾಕಿ ಕಳವು ಮಾಡಲಾಗುತ್ತಿದೆ.
ಆನೇಕಲ್​ ತಾಲೂಕು ಸರ್ಜಾಪುರ ಠಾಣೆ ವ್ಯಾಪ್ತಿಯ ಬಾಗಲೂರು ತಮಿಳುನಾಡಿಗೆ ಹೊಂದಿಕೊಂಡಿದೆ, ಅದೇ ರೀತಿ ಅತ್ತಿಬೆಲೆ ತಮಿಳುನಾಡಿನ ಹೊಸೂರಿಗೆ ಹೊಂದಿಕೊಂಡಿದೆ.
ಸೋಲೂರು ಹಾಗೂ ಗುಡ್ಡನಹಳ್ಳಿ ಭಾಗ ಹೊಸೂರಿಗೆ ಹೊಂದಿಕೊಂಡಿದೆ, ಆದರೆ ಮೂರು ಪೊಲೀಸ್​ ಠಾಣೆಗಳ ವ್ಯಾಪ್ತಿಯ ಗಡಿಗಳಲ್ಲಿ ಎಲ್ಲಿಯೂ ಒಂದೇ ಒಂದು ಚೆಕ್​ಪೋಸ್ಟ್​ ಇಲ್ಲ, ರಾತ್ರಿ ಸಮಯದಲ್ಲಿ ತಮಿಳುನಾಡು ಭಾಗದಿಂದ ಬಂದು ಬೈಕ್​ ಕಳವು ಸೇರಿ ಮನೆಗಳಲ್ಲಿ ಕಳವು ಮಾಡುವುದು ಅವ್ಯಾಹತವಾಗಿದ್ದು, ಗಡಿಭಾಗದಲ್ಲಿ ಯಾವುದೇ ಚೆಕ್​ ಪೋಸ್ಟ್​ ಇಲ್ಲದೆ ಇರುವುದು ಕಳ್ಳರಿಗೆ ವರದಾನ ಆಗಿದೆ. ಆನೇಕಲ್​, ಸರ್ಜಾಪುರ, ಅತ್ತಿಬೆಲೆ, ಹೆಬ್ಬಗೋಡಿ, ಜಿಗಣಿ ಭಾಗದಲ್ಲಿ ಬೈಕ್​ ಕಳವು ನಿರಂತರವಾಗಿ ನಡೆಯುತ್ತಿದ್ದು, ಪ್ರಕರಣಗಳನ್ನು ಭೇದಿಸುವುದೇ ಪೊಲೀಸರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.
ರಾಜ್ಯ ಗಡಿಯಲ್ಲಿಲ್ಲ ಚೆಕ್​ಪೋಸ್ಟ್​ : ರಾಜ್ಯದ ಗಡಿಗೆ ಹೊಂದಿಕೊಂಡಿರುವ ಎಲ್ಲ ಗಡಿ ಭಾಗದಲ್ಲೂ ತಮಿಳುನಾಡು ಪೊಲೀಸರು ಚೆಕ್​ಪೋಸ್ಟ್​ ನಿರ್ಮಾಣ ಮಾಡಿದ್ದಾರೆ, ಪ್ರತಿಯೊಂದು ವಾಹನವನ್ನು ರಾತ್ರಿ ಸಮಯದಲ್ಲಿ ತಪಾಸಣೆ ಮಾಡುತ್ತಾರೆ, ಅದೇ ರೀತಿ ಕರ್ನಾಟಕ ರಾಜ್ಯ ಪೊಲೀಸರೂ ಗಡಿಭಾಗದಲ್ಲಿ ಚೆಕ್​ ಪೋಸ್ಟ್​ ನಿರ್ಮಾಣ ಮಾಡಬೇಕು, ಇದರಿಂದ ಅಕ್ರಮಗಳನ್ನು ತಡೆಯಲು ಸಾಧ್ಯವಾಗುತ್ತದೆ.
ಎಲ್ಲೆಲ್ಲಿ ಕಳವು? : ಆನೇಕಲ್​ನ ನೆರಳೂರು ಬಳಿ ಲಗ್ನಪತ್ರಿಕೆ ಕೊಡುವ ನೆಪದಲ್ಲಿ ಗುರುವಾರ ಮನೆಯಲ್ಲಿ ಮಹಿಳೆಯನ್ನು ಕಟ್ಟಿಹಾಕಿ ಚಿನ್ನಾಭರಣ ದೋಚಲಾಗಿತ್ತು. ಶುಕ್ರವಾರ ಆನೇಕಲ್​ ತಾಲೂಕಿನ ಚಿಕ್ಕ ಹೊಸಹಳ್ಳಿ ಬಳಿ ಮನೆಯಲ್ಲಿ ಯಾರು ಇಲ್ಲದೆ ಇರುವ ವೇಳೆ ಮನೆಯ ಬಾಗಿಲು ತೆರೆದು ಬೀರುವಿನಲ್ಲಿ ಇದ್ದ ಲಾಂತರ ರೂಪಾಯಿ ಬೆಲೆಬಾಳುವ ಚಿನ್ನ ದೋಚಿದ್ದರು, ಶನಿವಾರ ಆನೇಕಲ್​ ಕೋರ್ಟ್​ ಹಿಂಭಾಗದಲ್ಲಿ ಮನೆಯಲ್ಲಿ 150 ಗ್ರಾಂ ಚಿನ್ನಾಭರಣ ದೋಚಲಾಗಿದೆ. ಇದಲ್ಲದೆ ಸರ್ಜಾಪುರ ಹಾಗೂ ಸೂರ್ಯ ನಗರ ಠಾಣೆ ವ್ಯಾಪ್ತಿಯಲ್ಲಿಯೂ ಕಳವು ಪ್ರಕರಣಗಳು ದಾಖಲಾಗಿವೆ.
ಹೊರ ಹೋಗುವಾಗ ಸ್ಟೇಟಸ್​ ಹಾಕಬೇಡಿ : ಮನೆಯಲ್ಲಿ ಯಾರು ಇಲ್ಲದೆ ದೂರದ ಊರಿಗೆ ಹಾಗೂ ಪ್ರವಾಸಕ್ಕೆ ಹೋಗುವವರು ಖುಷಿಗಾಗಿ ಸ್ಟೇಟಸ್​ ಹಾಕುತ್ತಾರೆ, ಆದರೆ ಇದನ್ನೇ ಬಂಡವಾಳ ಮಾಡಿಕೊಂಡು ಮನೆಯಲ್ಲಿ ಯಾರು ಇಲ್ಲ ಎಂದು ಕಳವು ಮಾಡುವ ಸಾಧ್ಯತೆಗಳು ಹೆಚ್ಚಾಗುತ್ತಿದೆ, ಹೀಗಾಗಿ ಸಾರ್ವಜನಿಕರು ಎಚ್ಚರ ವಹಿಸಬೇಕು.
ಸಿಬ್ಬಂದಿ ಕೊರತೆ : ಆನೇಕಲ್​ ಉಪ ವಿಭಾಗದ ಬಹುತೇಕ ಠಾಣೆಗಳಲ್ಲಿ ಸಿಬ್ಬಂದಿ ಕೊರತೆ ಇದೆ. ನಿರಂತರ ಕಳವು, ಕ್ರೆಂ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆರೋಪಿಗಳ ಬಂಧನ ಸೇರಿ ಠಾಣೆಯ ಕೆಲಸಗಳನ್ನು ಮಾಡಲು ಸಿಬ್ಬಂದಿ ಕೊರತೆ ಎದುರಾಗಿದೆ.