ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಟರ್ನ್‌ಶಿಪ್ ಸಂಯೋಜಕರಿಗೆ ಆಯೋಜಿಸಿದ್ದ ಕಾರ್ಯಾಗಾರ
- ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ ವಿದ್ಯಾಸಂಸ್ಥೆಗಳಲ್ಲಿರುವ ಇಂಟರ್ನ್‌ಶಿಪ್ ಸಂಯೋಜಕರಿಗೆ ಆಯೋಜಿಸಿದ್ದ ಕಾರ್ಯಾಗಾರ
- ನಕಲಿ ಪ್ರಮಾಣ ಪತ್ರಗಳನ್ನು ನಿಯಂತ್ರಿಸುವ ಉದ್ದೇಶದಿಂದ ಸಮಗ್ರ ಇಂಟರ್ನ್‌ಶಿಪ್ ಪೋರ್ಟಲ್ ಅನ್ನು ಜಾರಿ
- ಈವರೆಗೆ 81 ಸಾವಿರ ವಿದ್ಯಾರ್ಥಿಗಳು ನೋಂದಾಯಿಸಿದ್ದು, ಇವರಿಗೆ ಫೆಬ್ರವರಿ ಮೊದಲ ವಾರದಿಂದಲೇ ಇಂಟರ್ನ್‌ಶಿಪ್ ಆರಂಭ
ಬೆಂಗಳೂರು: ಇಂಟರ್ನ್‌ಶಿಪ್ ಸಮಯದಲ್ಲಿ ವಿದ್ಯಾರ್ಥಿಗಳು ಮತ್ತು ಕಂಪನಿಗಳ ಕಾರ್ಯ ವೈಖರಿ ಪರಿಶೀಲನೆಗೆ ಪ್ರತ್ಯೇಕ ವಿಚಕ್ಷಣಾ ದಳ(ಸ್ಕ್ವಾಡ್ ಗಳ) ನೇಮಕ ಮಾಡಲಾಗುತ್ತದೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಕುಲಪತಿ ಡಾ. ಎಸ್. ವಿದ್ಯಾಶಂಕರ್ ತಿಳಿಸಿದರು.
ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ ವಿದ್ಯಾಸಂಸ್ಥೆಗಳಲ್ಲಿರುವ ಇಂಟರ್ನ್‌ಶಿಪ್ ಸಂಯೋಜಕರಿಗೆ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಈ ಹಿಂದೆ ತರುತ್ತಿದ್ದ ನಕಲಿ ಪ್ರಮಾಣ ಪತ್ರಗಳನ್ನು ನಿಯಂತ್ರಿಸುವ ಉದ್ದೇಶದಿಂದ ಸಮಗ್ರ ಇಂಟರ್ನ್‌ಶಿಪ್ ಪೋರ್ಟಲ್ ಅನ್ನು ಜಾರಿಗೆ ತಂದಿದ್ದೇವೆ. ಎಲ್ಲ ವಿದ್ಯಾರ್ಥಿಗಳು ಇದರ ಮೂಲಕವೇ ನೋಂದಾಯಿಸಿಕೊಳ್ಳಬೇಕು ಎಂಬ ನಿಯಮ ಜಾರಿಗೆ ತಂದ ಮೇಲೆ ಈವರೆಗೆ 81 ಸಾವಿರ ವಿದ್ಯಾರ್ಥಿಗಳು ನೋಂದಾಯಿಸಿದ್ದು, ಇವರಿಗೆ ಫೆಬ್ರವರಿ ಮೊದಲ ವಾರದಿಂದಲೇ ಇಂಟರ್ನ್‌ಶಿಪ್ ಆರಂಭವಾಗಲಿದೆ ಎಂದರು.
ಕೆಲವು ಕಂಪನಿಗಳು ಉಚಿತವಾಗಿ ಇಂಟರ್ನ್‌ಶಿಪ್ ನೀಡುತ್ತೇವೆಂದು ಹೇಳಿ, ಆನಂತರ ವಿದ್ಯಾರ್ಥಿಗಳಿಂದ ದುಡ್ಡು ಕೇಳಿರುವ ಬಗ್ಗೆಯೂ ನಮಗೆ ದೂರು ಬಂದಿದೆ. ಇಂತಹ ಕಂಪನಿಗಳ ವಿರುದ್ಧ ನಾವು ಶಿಸ್ತು ಕ್ರಮ ಜರುಗಿಸುತ್ತೇವೆ. ಇದಕ್ಕಾಗಿಯೇ ನಾವು ವಿಚಕ್ಷಣಾ ದಳ(ಸ್ಕ್ವಾಡ್‌ಗಳ) ನೇಮಕ ಮಾಡುತ್ತಿದ್ದೇವೆ. ಈ ದಳದವರು ಎಲ್ಲ ಕಂಪನಿಗಳಿಗೂ ಭೇಟಿ ನೀಡಿ ಮೂಲ ಸೌಕರ್ಯವನ್ನು ಪರಿಶೀಲನೆ ಮಾಡಲಿದೆ. ವಿದ್ಯಾರ್ಥಿಗಳು ಸಹ ಪ್ರತಿನಿತ್ಯ ತಾವು ಕಲಿತ ವಿಷಯವನ್ನು ದಿನಚರಿಯಲ್ಲಿ ರೆಕಾರ್ಡ್ ಮಾಡಬೇಕು. ಇದರಿಂದ ವಿದ್ಯಾರ್ಥಿಗಳ ಕಳ್ಳಾಟಕ್ಕೆ ಬ್ರೇಕ್ ಬೀಳಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಟಿಯು ಮಾಜಿ ಕಾರ್ಯಕಾರಿ ಸಮಿತಿ ಸದಸ್ಯ ಜಿ. ರಾಕೇಶ್, ವಿಟಿಯು ಬೆಂಗಳೂರು ಪ್ರಾದೇಶಿಕ ಕಚೇರಿಯ ನಿರ್ದೇಶಕ ಡಾ. ಎಚ್.ಆರ್. ಸುದರ್ಶನ ರೆಡ್ಡಿ, ವಿಟಿಯು ಇಂಟರ್ನ್‌ಶಿಪ್ ಸಂಯೋಜಕಿ ಡಾ. ಸಿ.ಎಂ. ರಕ್ಷಿತಾ, ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನ ಪ್ರ ಡಾ. ಭೀಮೇಶ ಆರ್ಯ ಉಪಸ್ಥಿತರಿದ್ದರು.