ರಾಜ್ಯ

ಮಕ್ಕಳು, ಮೊಮ್ಮಕ್ಕಳು... ದೈವ ಕಾರ್ಯಕ್ಕೆ 1,01,001 ರೂ. ದೇಣಿಗೆ ಕೊಟ್ಟ 90ರ ವಯಸ್ಸಿನ ಸಹೋದರಿಯರು

ಚಂದಾ ಸಂಗ್ರಹಣೆಗೆ ಗ್ರಾಮಕ್ಕೆ ಬಂದು ಸೇವಾ ಸಮಿತಿ ಸದಸ್ಯರು ಮತ್ತು ಶ್ರೀ ಕ್ಷೇತ್ರ ಹನುಮಗಿರಿ ಸೇವಾ ಟ್ರಸ್ಟ್ನ ಸದಸ್ಯರೊಂದಿಗೆ ಡಾ. ಶ್ರೀ ರಾಮಚಂದ್ರ ಗುರೂಜಿ ಅವರು ಮನೆ ಮನೆಗೆ ಭೇಟಿ ನೀಡಿದ ವೇಳೆ ಅಕ್ಕ-ತಂಗಿಯರಾದ ದೊಡ್ಡಕ್ಕಮ್ಮ ಮತ್ತು ಚಿಕ್ಕಕ್ಕಮ್ಮ ಅವರು ಲಕ್ಷ ರೂ.ಗಳನ್ನು ದೇಣಿಗೆ ನೀಡಿದ್ದಾರೆ.

ಕದರೀಪುರ: ‘ಉಳ್ಳವರು ಶಿವಾಲಯ ಮಾಡುವರಯ್ಯ ನಾನೇನು ಮಾಡಲಿ ಬಡವನಯ್ಯ’ಎಂಬ ಬಸವಣ್ಣನವರ ವಚನದಂತೆ ಸುಮಾರು 90ರ ವಯೋಮಾನದ ಅಕ್ಕ-ತಂಗಿಯರಿಬ್ಬರು ಬಿಡಿಗಾಸನ್ನು ಕೂಡಿಟ್ಟು ದೇವರ ಕಾರ್ಯಕ್ಕೆ 1,01,001 ರೂ. ದೇಣಿಗೆ ನೀಡಿ ಭಕ್ತಿ ಮೆರೆದಿದ್ದಾರೆ.

ಕೋಲಾರ ತಾಲೂಕು ವೇಮಗಲ್ ಹೋಬಳಿಯ ಮದ್ದೇರಿ ತುಪ್ಪದ ಆಂಜನೇಯಸ್ವಾಮಿ ಬೆಟ್ಟಕ್ಕೆ ಮೆಟ್ಟಿಲುಗಳನ್ನು ನಿರ್ವಿುಸಲು ಮನೆಗೊಂದು ಮೆಟ್ಟಿಲು ದೈವ ಕಾರ್ಯಕ್ಕೆ ಧನಸಹಾಯ ಎಂಬ ಅಭಿಯಾನದ ಮೂಲಕ ದೇಣಿಗೆ ಸಂಗ್ರಹ ಕಾರ್ಯ ಆರಂಭಿಸಲಾಗಿತ್ತು. ಚಂದಾ ಸಂಗ್ರಹಣೆಗೆ ಗ್ರಾಮಕ್ಕೆ ಬಂದು ಸೇವಾ ಸಮಿತಿ ಸದಸ್ಯರು ಮತ್ತು ಶ್ರೀ ಕ್ಷೇತ್ರ ಹನುಮಗಿರಿ ಸೇವಾ ಟ್ರಸ್ಟ್ನ ಸದಸ್ಯರೊಂದಿಗೆ ಡಾ. ಶ್ರೀ ರಾಮಚಂದ್ರ ಗುರೂಜಿ ಅವರು ಮನೆ ಮನೆಗೆ ಭೇಟಿ ನೀಡಿದ ವೇಳೆ ಅಕ್ಕ-ತಂಗಿಯರಾದ ದೊಡ್ಡಕ್ಕಮ್ಮ ಮತ್ತು ಚಿಕ್ಕಕ್ಕಮ್ಮ ಅವರು ಲಕ್ಷ ರೂ.ಗಳನ್ನು ದೇಣಿಗೆ ನೀಡಿದ್ದಾರೆ.

‘ಮಕ್ಕಳು, ಮೊಮ್ಮಕ್ಕಳು ಬಂದಾಗ ನೀಡುತ್ತಿದ್ದ ಹಣವನ್ನು ಖರ್ಚು ಮಾಡದೇ ಈ ದೈವ ಕಾರ್ಯಕ್ಕೆಂದೇ ಕೂಡಿಟ್ಟಿದ್ದೆವು. ಈಗ ಈ ಹಣ ನಾವು ಅಂದುಕೊಂಡಿದ್ದ ಸೇವಾ ಕಾರ್ಯಕ್ಕೆ ತಲುಪಿದೆ. ಮದ್ದೇರಿ ಬೆಟ್ಟದ ತುಪ್ಪದ ಆಂಜನೇಯಸ್ವಾಮಿ ದೇಗುಲ ನಿರ್ಮಾಣ ಮಾಡುವ ಸಂಕಲ್ಪದ ವಿಚಾರ ಖುಷಿ ತಂದುಕೊಟ್ಟಿತು’ ಎಂದು ಸಹೋದರಿಯರು ಧನ್ಯತಾ ಭಾವ ವ್ಯಕ್ತಪಡಿಸಿದರು.

ಸಾರ್ಥಕ ಕೆಲಸ

ದೇಣಿಗೆ ಸ್ವೀಕರಿಸಿದ ಡಾ.ರಾಮಚಂದ್ರ ಗುರೂಜಿ ಅವರು, ಪುರಾತನ ದೇವಾಲಯವಿರುವ ಬೆಟ್ಟಕ್ಕೆ ಮೆಟ್ಟಿಲು ನಿರ್ಮಾಣ ಮತ್ತು 10 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಹನುಮ ಮಂದಿರ ನಿರ್ಮಾಣ ಮಾಡುತ್ತಿರುವುದು ತುಂಬಾ ಸಂತಸದ ವಿಷಯ. ಮೆಟ್ಟಿಲು ಮತ್ತು ರಸ್ತೆ ನಿರ್ವಣದಿಂದ ವಯೋವೃದ್ಧರು ದೇವರ ದರ್ಶನ ಪಡೆಯುವಂತಾಗಲಿದೆ. ಇದು ಸಾರ್ಥಕ ಕೆಲಸ. 90 ವರ್ಷಗಳ ಹಿರಿಯ ಜೀವಿಗಳ ಸೇವಾ ಕಾರ್ಯ ಸಮಾಜಕ್ಕೆ ಮಾದರಿ ಹಾಗೂ ಇತರರಿಗೆ ಪ್ರೇರಣೆಯಾಗಿದೆ ಎಂದರು. ಈ ವೇಳೆ ಗ್ರಾಮದ ಮುಖಂಡರಾದ ಎಂ.ಆರ್.ಶ್ರೀನಿವಾಸ್ಗೌಡ, ಐ. ಮಂಜುನಾಥ್, ಕೋಟೆ ಮುರಳಿಗೌಡ, ಸೊಣ್ಣೇಗೌಡ, ಎಂ.ಆರ್.ಶ್ರೀಧರ್​ಗೌಡ, ಎನ್.ನಾಗರಾಜ, ವಿ.ನಾಗೇಶ, ತ್ರಿಮೂರ್ತಿ ಇದ್ದರು.