Selling lake soil to industry? 
ರಾಜ್ಯ

ಕೈಗಾರಿಕೆಗೆ ಕೆರೆಯ ಮಣ್ಣು ಮಾರಾಟ?

ಕುಣಿಗಲ್: ಕೆರೆಯ ಮಣ್ಣನ್ನು ಶಾಸಕರ ಆಪ್ತರು ಕೈಗಾರಿಕೆಗಳಿಗೆ ಮಾರಾಟ ಮಾಡುವ ಮೂಲಕ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕಿತ್ನಮಂಗಲ ಗ್ರಾಮದ ಕೆರೆಯ ಅಂಗಳದಲ್ಲಿ ಶುಕ್ರವಾರ ರೈತರು ಪ್ರತಿಭಟನೆ ನಡೆಸಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಮಹಾರಾಷ್ಟ್ರ ಶಿವಣ್ಣ ಮಾತನಾಡಿ, ರೈತರ ಕಣ್ಣು ತಪ್ಪಿಸಿ ಕದ್ದು ಮುಚ್ಚಿ ಜೆಸಿಬಿ ಮೂಲಕ ಕೆರೆಯಲ್ಲಿನ ಮಣ್ಣು ಲೂಟಿ ಹೊಡೆಯುತ್ತಿದ್ದಾರೆ. ಇದರಿಂದ 40 ಗ್ರಾಮದ ಸಾವಿರಾರು ರೈತಾಪಿ ಜನರ ತೋಟಗಳಿಗೆ ಮಣ್ಣು ಹಾಕಿಸಿಕೊಳ್ಳಲು ಅವಕಾಶವಿದ್ದರೂ ಅದು ಕೈತಪ್ಪುತಿದೆ. ಕಿತ್ನಮಂಗಲದ ಕೆರೆಗೆ ಹೇಮಾವತಿ ನೀರು ಹರಿಸುವ ಬದಲು ಶಾಸಕರು ಮಣ್ಣು ಸಾಗಣೆಗೆ ಅವಕಾಶ ನೀಡಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಈ ಬಗ್ಗೆ ಶಾಸಕರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಕೆರೆಗೆ ನೀರು ತುಂಬಿಸುವ ಚಿಂತನೆಯನ್ನು ಮಾಡಬೇಕೆ ಹೊರತು ಮಣ್ಣು ದಂಧೆಕೋರರಿಗೆ ಸಹಾಯ ಹಸ್ತ ನೀಡುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದರು.
ಮುಖಂಡರಾದ ಗುಜ್ಜೆನಹಳ್ಳಿ ಕುಮಾರ್, ಪ್ರಕಾಶ್, ಲೋಕೇಶ್, ಚನ್ನಾಪುರ ಪರಶುರಾಮ, ಗಂಗಯ್ಯ, ನಂಜೇಗೌಡ, ದೇವರಾಜ ಕುಮಾರ, ದೊಡ್ಡ ಪಾಪ, ಜೈಲಕ್ಷ್ಮಮ್ಮ, ಕೆಂಪಮ್ಮ, ಕರಿಯಮ್ಮ ಇದ್ದರು.