ಕಲಬುರಗಿ ಡಿಸಿ ಕಚೇರಿಯಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಮಾತನಾಡಿದರು. ಜಿಪಂ ಸಿಇಒ ರಾಹುಲ್ ಸಂಕನೂರ್, ಮುನಾವರ್ ದೌಲಾ, ಇಂಧನ ಕಂಪನಿಗಳು, ವಿತರಕರು ಪಾಲ್ಗೊಂಡಿದ್ದರು.
- ಕಠಿಣ ಕ್ರಮಕ್ಕೆ ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಸೂಚನೆ
- ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿ ಸಭೆ
ಕಲಬುರಗಿ: ಮದ್ಯ ಪ್ರಾಚ್ಯ ದೇಶದಲ್ಲಿನ ಬಿಕ್ಕಟ್ಟಿನ ನಡುವೆ ಜಿಲ್ಲೆಯಲ್ಲಿ ಕಾಳ ಸಂತೆಯಲ್ಲಿ ಸಿಲಿಂಡರ್ ಮಾರಾಟವಾದರೆ ಗ್ಯಾಸ್ ಏಜೆನ್ಸಿ (ಡಿಸ್ಟ್ರಿಬೂಟರ್) ವಿರುದ್ಧ ನಿರ್ದಾಣ್ಯ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಎಚ್ಚರಿಕೆ ನೀಡಿದ್ದಾರೆ.
ಕಲಬುರಗಿ ಡಿಸಿ ಕಚೇರಿಯಲ್ಲಿ ವಾಣಿಜ್ಯ/ಗೃಹ ಬಳಕೆ ಎಲ್ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ನಿಯಂತ್ರಣ ಮತ್ತು ಮೇಲ್ವಿಚಾರಣೆಗಾಗಿ ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗೃಹ ಬಳಕೆದಾರರಿಗೆ ಫಿಪೋ ಆಧಾರದ ಮೇಲೆ (ಮೊದಲು ನೋಂದಾಯಿಸಿದವರಿಗೆ ಮೊದಲು ವಿತರಣೆ) ಸಿಲಿಂಡರ್ ಪೂರೈಸಬೇಕು ಎಂದರು.
ಅನಧಿಕೃತ ದಾಸ್ತಾನು, ರಿಫಿಲ್ಲಿಂಗ್ ಮಾಡುವುದು ಕಂಡಬಂದಲ್ಲಿ ಅಂತಹವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆಯಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಗೃಹ ಬಳಕೆ ಸಿಲಿಂಡರ್ಗಳು ಯಾವುದೇ ಕಾರಣಕ್ಕೂ ವಾಣಿಜ್ಯ ಉದ್ದೇಶಕ್ಕೆ ಹೋಟೆಲ್ಗಳು ಬಳಸುವಂತಿಲ್ಲ. ಅಹಾರ ಇಲಾಖೆ ಅಧಿಕಾರಿಗಳು ಇದನ್ನು ತಪಾಸಣೆ ಮಾಡಬೇಕು ಎಂದರು.
25ನೇ ದಿನಕ್ಕೆ ಸಿಲಿಂಡರ್ ಕೊಡಿ
ಸಿಲಿಂಡರ್ ಬುಕ್ಕಿಂಗ್ ಮಾಡಲು ನಗರ ಪ್ರದೇಶದ ಗ್ರಾಹಕರು 25 ದಿನ ಮತ್ತು ಗ್ರಾಮೀಣ ಭಾಗದ ಗ್ರಾಹಕರು 45 ದಿನಗಳ ಅಂತವಿರಬೇಕು. ಆದರೆ ಹೆಚ್ಪಿಸಿಎಲ್ ಕಂಪನಿಯವರು ನಗರದ ಗ್ರಾಹಕರಿಗೆ 45 ದಿನಗಳ ಕಾಲಮಿತಿ ಹೇರಿರುವುದರಿಂದ ಗ್ರಾಹಕರಿಗೆ ತೊಂದರೆಯಾಗುತ್ತಿದೆ ಎಂದು ಅಹಾರ ಇಲಾಖೆ ಪ್ರಭಾರಿ ಉಪನಿರ್ದೇಶಕ ಮುನಾವರ ದೌಲಾ ಡಿಸಿ ಗಮನಕ್ಕೆ ತಂದರು. ಡಿ.ಸಿ. ಇಕ್ರಮ್ ಶರೀಫ್ ಮಾತನಾಡಿ, ಐಓಸಿಎಲ್, ಬಿಪಿಸಿಎಲ್ನವರು 25ನೇ ದಿನಕ್ಕೆ ಸಿಲಿಂಡರ್ ನೀಡುವಾಗ ನಿಮಗೇನು ತೊಂದರೆ ಎಂದು ಅಸಮಾಧಾನ ವ್ಯಕ್ತಪಡಿಸಿ. ನಿಮ್ಮ ಹಂತದಲ್ಲಿ ಈ ರೀತಿಯಾಗಿ ನಿರ್ಧಾರ ತೆಗೆದುಕೊಳ್ಳುವಂತಿಲ್ಲ. 25ನೇ ದಿನಕ್ಕೆ ಇಳಿಸುವಂತೆ ಕಂಪನಿ ಪ್ರತಿನಿಧಿ ಪೃಥ್ವಿ ಅವರಿಗೆ ಖಡಕ್ ಸೂಚನೆ ನೀಡಿದರು.
ಜಿಲ್ಲಾಡಳಿತದ ನಿರ್ದೇಶನ ಪಾಲಿಸಿ
ಜಿಲ್ಲೆಯ ಯಾವುದೇ ಆರೋಗ್ಯ ಸಂಸ್ಥೆಗಳಿಗೆ, ಶಾಲೆ, ವಸತಿ ನಿಲಯ, ಕ್ಯಾಂಟೀನ್ಗಳಿಗೆ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಎಚ್ಚರಿಕೆ ವಹಿಸಬೇಕು. ಅಗತ್ಯ ಪ್ರಮಾಣದಲ್ಲಿ ದಾಸ್ತಾನಿದ್ದರೂ ಜನ ಆತಂಕಗೊಂಡಿದ್ದು, ಇಂತಹ ಒಂದು ಬಿಕ್ಕಟ್ಟು ಪರಿಸ್ಥಿತಿಯಲ್ಲಿ ಗ್ಯಾಸ್ ಎಜೆನ್ಸಿಗಳು ಜಿಲ್ಲಾಡಳಿತ ನೀಡುವ ನಿರ್ದೇಶನ ಪಾಲಿಸುವ ಮೂಲಕ ಅಗತ್ಯ ಸಹಕಾರ ನೀಡಬೇಕು. ಏಜೆನ್ಸಿಗಳು ಸಾರ್ವಜನಿಕರಿಗೆ ಸಿಲಿಂಡರ್ ಸಮಸ್ಯೆ ಇಲ್ಲ ಎಂಬುದನ್ನು ಖಾತ್ರಿಪಡಿಸಬೇಕ. ಕೂಡಲೆ ಸಹಾಯವಾಣಿ ಸಕ್ರಿಯಗೊಳಿಸಿ ಗ್ರಾಹಕರ ಸಮಸ್ಯೆಗಳಿಗೆ ಕಿವಿಯಾಗಬೇಕು ಎಂದು ಆಹಾರ ಇಲಾಖೆಗೆ ಡಿಸಿ ಸೂಚಿಸಿದರು.
ಆಹಾರ ಇಲಾಖೆಯ ಪ್ರಭಾರಿ ಉಪನಿರ್ದೇಶಕ ಮುನಾವರ್ ದೌಲಾ ಮಾತನಾಡಿ, ಪ್ರಸ್ತುತ ಜಿಲ್ಲೆಯಲ್ಲಿ 47 ಗ್ಯಾಸ್ ಡೀಲರ್ಗಳಿದ್ದು, ಇದರಲ್ಲಿ 3,29,674 ಸಿಂಗಲ್ ಸಿಲಿಂಡರ್ ಮತ್ತು 2,32,294 ಡಬಲ್ ಸಿಲಿಂಡರ್ ಗ್ರಾಹಕರಿದ್ದಾರೆ. ಇದಲ್ಲದೆ 10,372 ವಾಣಿಜ್ಯ ಸಿಲಿಂಡರ್ ಗ್ರಾಹಕರಿದ್ದು, 2,68,399 ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿದ್ದಾರೆ. ಪಿ.ಎಂ.ಉಜ್ವಲ್ ಯೋಜನೆಯ ಗ್ರಾಹಕರಿಗೆ 45 ದಿನಕ್ಕೆ ಮತ್ತು ನಗರ ಗ್ರಾಹಕರಿಗೆ ಸಿಲಿಂಡರ್ ಬುಕ್ ಮಾಡಲು ಹಿಂದಿನ ಡೆಲವರಿಗೆ ಕನಿಷ್ಠ 25 ದಿನ ಅಂತರವಿರಬೇಕು ಎಂದು ಸಭೆಗೆ ಮಾಹಿತಿ ನೀಡಿ, ಗುರುವಾರಕ್ಕೆ 19,158 ಗೃಹ ಬಳಕೆ ಸಿಲಿಂಡರ್ ಮತ್ತು 1,761 ವಾಣಿಜ್ಯ ಸಿಲಿಂಡರ್ ಜಿಲ್ಲೆಯಲ್ಲಿ ದಾಸ್ತಾನು ಇದ್ದು, ಸಿಲಿಂಡರ್ ಸಮಸ್ಯೆ ಇಲ್ಲ ಎಂದು ವಿವರಿಸಿದರು.
ಜಿಲ್ಲೆಯಲ್ಲಿ ಯಾವುದೇ ರೀತಿಯಲ್ಲಿ ಸಿಲಿಂಡರ್ ಕೊರತೆ ಇಲ್ಲ. ನಿತ್ಯ ಬೇಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಕಂಪನಿಗಳು ಸಿಲಿಂಡರ್ ಪೂರೈಸುತ್ತಿವೆ. ಸಾರ್ವಜನಿಕರು ಆತಂಕಗೊಳ್ಳಬಾರದು. ನಗರದ ನಿವಾಸಿಗಳು 25 ದಿನ ಮತ್ತು ಗ್ರಾಮೀಣ ಭಾಗದ ಜನರು 45 ದಿನ ಅವಧಿ ಮೀರಿದ ನಂತರವೇ ಸಿಲಿಂಡರ್ ಬುಕ್ ಮಾಡಬೇಕೆಂದು ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಜಿಲ್ಲೆಯ ಜನತೆಯಲ್ಲಿ ಮನವಿ ಮಾಡಿದರು.
ಸಾರಿಗೆ ವೆಚ್ಚ ಹೆಚ್ಚಳಕ್ಕೆ ಮನವಿ
ಎಲ್.ಪಿ.ಜಿ. ವಿತರಕರು ಮಾತನಾಡಿ, 2002&03ನೇ ಸಾಲಿನಿಂದ ಅಕ್ಷರ ದಾಸೋಹ ಯೋಜನೆಯಡಿ ಶಾಲೆಗಳಿಗೆ ಸಿಲಿಂಡರ್ ಪೂರೈಕೆ ಮಾಡುತ್ತಿದ್ದು, ಜಿಲ್ಲೆಯಲ್ಲಿ ಪ್ರತಿ ಕಿಮೀಗೆ ಕೇವಲ 1.60 ರೂ. ಸಾರಿಗೆ ವೆಚ್ಚ ನೀಡಲಾಗುತ್ತಿದ್ದು, ಇದು ಇಂದಿನ ದುಬಾರಿ ದಿನದಲ್ಲಿ ನಮಗೆ ಅರ್ಥಿಕ ಹೊರೆಯಾಗಿ ಪರಿಣಮಿಸಿದೆ. ಡೀಸೆಲ್ ಅಂದು 30 ರೂ. ಲೀಟರ್ ಇತ್ತು, ಇಂದು 90 ರೂ.ಗೆ ಏರಿಕೆಯಾಗಿದೆ. ಹೀಗಾಗಿ ಸಾರಿಗೆ ವೆಚ್ಚ ಪ್ರತಿ ಕಿ.ಮೀ 3 ರೂ.ಗಳಿಗೆ ಹೆಚ್ಚಿಸಬೇಕೆಂದು ಡಿಸಿಗೆ ಮನವಿ ಮಾಡಿದರು. ಈ ಕುರಿತು ಜಿಲ್ಲಾ ಪಂಚಾಯಿತಿ ಸಿಇಒ, ತಾಲೂಕಾ ಪಂಚಾಯಿತಿ ಇ.ಓ ಅವರೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಕಲ್ಪಿಸಲಾಗುವುದು ಎಂದು ಡಿಸಿ ಭರವಸೆ ನೀಡಿದರು.
ಕಾನೂನು ಮಾಪನಶಾಸ ಇಲಾಖೆಯ ಸಹಾಯಕ ನಿಯಂತ್ರಕ ರಫೀಕ್ ಲಾಡಜಿ, ಆಹಾರ ಇಲಾಖೆಯ ಸಹಾಯಕ ನಿರ್ದೇಶಕ ಅಲ್ಲಭಕ್ಷ, ಪೆಟ್ರೋಲ್ ಪಂಪ್ ಸ್ಟೇಷನ್ ಸಂದ ಉಪಾಧ್ಯಕ್ಷ ರಾಮಚಂದ್ರ ಕೋಸಗಿ ಇತರರಿದ್ದರು.
ಜಿಲ್ಲೆಯಲ್ಲಿ ಪೆಟ್ರೋಲ್ ಪಂಪ್ಗಳು ಸರ್ಕಾರದ ನಿರ್ದೇಶನದಂತೆ ವಾಹನದ ಟ್ಯಾಂಕರ್ಗಳಿಗೆ ನಿಗದಿತ ಪ್ರಮಾಣದಲ್ಲಿ ಪೆಟ್ರೋಲ್-ಡೀಸೆಲ್ ಪೂರೈಸಬೇಕು. ಬಲ್ಕ್ ಬಳಕೆದಾರರು ನೇರವಾಗಿ ಡಿಪೋನಿಂದಲೆ ಪಡೆಯಬೇಕು.
— ಇಕ್ರಮ್ ಶರೀಫ್, ಜಿಲ್ಲಾಧಿಕಾರಿ, ಕಲಬುರಗಿ.