ಚಿಕ್ಕುಂಬಿ ಗ್ರಾಮದ ಅಜಾತ ನಾಗಲಿಂಗ ಸ್ವಾಮೀಜಿ ಮಠದಲ್ಲಿ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಡಾ.ಪುರುಷೋತ್ತಮಾನಂದ ಪುರಿ ಸ್ವಾಮೀಜಿ, ಅಭಿನವ ನಾಗಲಿಂಗ ಸ್ವಾಮೀಜಿ, ಚಿದ್ರೂಪಾನಂದ ಸ್ವಾಮೀಜಿ, ರಾಹುಲ ಸಂಗ್ರೇಶಿ, ಡಾ.ಬಸವರಾಜ ಧಾರವಾಡ, ಕಲ್ಲಪ್ಪ ಹುದ್ದಾರ ಇತರರಿದ್ದರು. 
ರಾಜ್ಯ

ನಿಸ್ವಾರ್ಥ ಸೇವೆಯಿಂದ ಬದುಕು ಸುಂದರ

ಎಂ.ಎಸ್​.ಹಿರೇಮಠ ಬೆಳಗಾವಿ
ವಿಜಯವಾಣಿ ಸುದ್ದಿಜಾಲ ಸವದತ್ತಿ
ಮಹಾಪುರುಷರು ಹಾಕಿಕೊಟ್ಟ ಧರ್ಮ ಮಾರ್ಗದಲ್ಲಿ ಸಾಗಿ ನಿಸ್ವಾರ್ಥ ಸೇವೆ ಮತ್ತು ಸದಾಚಾರ ರೂಢಿಸಿಕೊಂಡಾಗ ಮಾತ್ರ ಬದುಕು ಸುಂದರಗೊಳ್ಳುತ್ತದೆ ಎಂದು ಭಗೀರಥ ಪೀಠದ ಜಗದ್ಗುರು ಡಾ.ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಹೇಳಿದರು.
ತಾಲೂಕಿನ ಚಿಕ್ಕುಂಬಿ ಗ್ರಾಮದ ಅಜಾತ ನಾಗಲಿಂಗ ಸ್ವಾಮೀಜಿ ಮಠದಲ್ಲಿ ಜಗದ್ಗುರು ಅಜಾತ ನಾಗಲಿಂಗ ಸ್ವಾಮೀಜಿ 145ನೇ ಪುಣ್ಯಾರಾಧನೆ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಮಾತನಾಡಿದರು.
ಮಾನವ ಸೇವೆಯೇ ನಿಜ ಶಿವಸೇವೆಯಾಗಿದ್ದು, ಪ್ರತಿಯೊಬ್ಬರೂ ಧರ್ಮ, ಸಂಸತಿ ಮತ್ತು ಮಾನವೀಯ ಮೌಲ್ಯ ಉಳಿಸಿ ಬೆಳೆಸುವ ಸಂಕಲ್ಪ ಮಾಡಬೇಕು. ಸಮಾಜದ ಉನ್ನತಿಗೆ ಧರ್ಮ ಮತ್ತು ಸೇವೆ ಅಗತ್ಯವಾಗಿವೆ ಎಂದರು.
ವಕೀಲ ರಾಹುಲ ಸಂಗ್ರೇಶಿ ಮಾತನಾಡಿ, ತಪಸ್ಸು, ಜ್ಞಾನ, ವೈರಾಗ್ಯ ಹಾಗೂ ಸಮಾಜಮುಖಿ ಕಾರ್ಯಗಳ ಮೂಲಕ ಅಜಾತ ನಾಗಲಿಂಗ ಸ್ವಾಮೀಜಿ ಎಲ್ಲರಿಗೂ ಆದರ್ಶವಾಗಿದ್ದಾರೆ. ಅವರ ಬದುಕು ಕೇವಲ ಒಂದು ಮಠಕ್ಕೆ ಸೀಮಿತವಾಗದೆ ಇಡೀ ಸಮಾಜಕ್ಕೆ ದಾರಿದೀಪವಾಗಿದೆ. ಪ್ರತಿಯೊಬ್ಬರೂ ಮಹಾತ್ಮರ ಸಂದೇಶ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸ್ಥಳಿಯ ಅಭಿನವ ನಾಗಲಿಂಗ ಸ್ವಾಮೀಜಿ ಮಾತನಾಡಿ, ಮಾನವೀಯ ಮೌಲ್ಯ ಕುಗ್ಗುತ್ತಿರುವ ಇಂದಿನ ಸಮಾಜದಲ್ಲಿ ಸುಸಂಸತ ಸಮಾಜ ನಿರ್ಮಾಣ ಮಾಡುವಲ್ಲಿ ಮಠ&ಮಾನ್ಯಗಳ ಪಾತ್ರ ಪ್ರಮುಖವಾಗಿದೆ. ಯುವಕರು ಗುಣಮಟ್ಟದ ಶಿಕ್ಷಣ ಜತೆಗೆ ಆದರ್ಶ ಮೌಲ್ಯ ಮೈಗೂಡಿಸಿಕೊಳ್ಳಬೇಕು ಎಂದರು.
ನಿವೃತ್ತ ಪ್ರಾಚಾರ್ಯ ಡಾ.ಬಸವರಾಜ ಧಾರವಾಡ ಮಾತನಾಡಿದರು. ಕರ್ತೃಗದ್ದುಗೆಗೆ ಜಕನಾಯಕನಕೊಪ್ಪ ಚನ್ನವೃಷಬೇಂದ್ರ ಲೀಲಾಮಠದ ಶಿವಯೋಗಿನಿ ತಾಯಿ ಅಭಿಷೇಕ ಮಾಡಿದರು. ಬಳಿಕ ಚಿದ್ರೂಪಾನಂದ ಸ್ವಾಮೀಜಿ ಗೋಪೂಜೆ, ಪ್ರಣವ ಧ್ವಜಾರೋಹಣ ನೆರವೇರಿಸಿದರು.
ನಿವೃತ್ತ ಉಪನ್ಯಾಸಕ ಕಲ್ಲಪ್ಪ ಹುದ್ದಾರ, ವಕೀಲೆ ರುಕ್ಮಿಣಿ ಗಾಜಿ, ಬಸವರಾಜ ನಾಯ್ಕರ, ಗಂಗಾಧರ ಕುರಿ, ಬಸವರಾಜ ಜಗಲಿ, ಸಿದ್ದಪ್ಪ ಮಾಸನವರ, ಲಚ್ಚಪ್ಪ ಮಲ್ಲಾಡ, ರಂಗನಾಥ ಕುಲಕರ್ಣಿ, ರುದ್ರಪ್ಪ ಕುರಿ, ಎಂ.ಎಸ್​.ದೊಡಮನಿ ಇತರರಿದ್ದರು.