ಜಮಖಂಡಿ ತಾಲೂಕಿನ ಮೈಗೂರ ಗ್ರಾಮದ ಅಂಬಿಗರ ಚೌಡಯ್ಯನವರ ದೇವಸ್ಥಾನದ ಜಾತ್ರಾ ಮಹೋತ್ಸವ ಹಾಗೂ ವಿಶೇಷ ಕಾರ್ಯಕ್ರಮದಲ್ಲಿ ಘೊಡಗೇರಿ ಮೈಗೂರ ಶಿವಾನಂದ ಮಠದ ಮಲ್ಲಯ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಹುಲ್ಯಾಳದ ಶರಣ ಮಲ್ಲೇಶ ಶರಣರು ಇದ್ದರು. 
ರಾಜ್ಯ

ಮಾನವ ಜನ್ಮ ಸಾರ್ಥಕತೆಗೆ ಆತ್ಮಜ್ಞಾನ ಅಗತ್ಯ

ಪ್ರಮುಖ ಮುಖ್ಯಾಂಶಗಳು

  • ಮಲ್ಲಯ್ಯ ಸ್ವಾಮೀಜಿ ಅಭಿಮತ
  • ಅಂಬಿಗರ ಚೌಡಯ್ಯನವರ ದೇವಸ್ಥಾನದ ಜಾತ್ರಾ ಮಹೋತ್ಸವ
ಜಮಖಂಡಿ: ಮಾನವ ಜನ್ಮ ಅತ್ಯಂತ ಅಮೂಲ್ಯವಾದದ್ದು. ದೊರೆತಿರುವ ಬದುಕನ್ನು ವ್ಯರ್ಥವಾಗಿ ಕಳೆಯದೆ ಆತ್ಮಜ್ಞಾನ, ಸದ್ಗುರುವಿನ ಉಪದೇಶ ಹಾಗೂ ನಾಮಸ್ಮರಣೆಯ ಮೂಲಕ ಸಾರ್ಥಕಪಡಿಸಿಕೊಳ್ಳಬೇಕು ಎಂದು ಮೈಗೂರ ಶಿವಾನಂದ ಮಠದ ಮಲ್ಲಯ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಮೈಗೂರ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಂಬಿಗರ ಚೌಡಯ್ಯನವರ ದೇವಸ್ಥಾನದ ಶ್ರಾವಣ ಮಾಸದ ಪ್ರವಚನದ ವಿಶೇಷ ಕಾರ್ಯಕ್ರಮ ಹಾಗೂ ಜಾತ್ರಾ ಮಹೋತ್ಸವದಲ್ಲಿ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಭಾರತವೇ ಒಂದು ದೇವಮಂದಿರ. ಅದ್ಭುತವಾದ ಭಾರತ ದೇಶದಲ್ಲಿ ಹುಟ್ಟಿರುವ ನಾವೆಲ್ಲರೂ ಪುಣ್ಯಾತ್ಮರು. ದೇವಸ್ಥಾನದ ವಾತಾವರಣಕ್ಕೆ ಕಾಲಿಟ್ಟಾಗ ಅಲ್ಲಿನ ಪವಿತ್ರತೆ, ಪೂಜೆ ಹಾಗೂ ಪ್ರಸಾದದ ಮೂಲಕ ನಮ್ಮಲ್ಲಿ ದೈವಿಕ ಭಾವನೆ ಮೂಡುತ್ತದೆ. ಪ್ರತಿನಿತ್ಯ ಸೂರ್ಯೋಪಾಸನೆ ಹಾಗೂ ಬೆಳಕಿನ ಆರಾಧನೆ ಮಾಡುವ ಪರಂಪರೆ ಭಾರತದಲ್ಲಿದೆ. ಇಂತಹ ಪುಣ್ಯಮಯ ಭಾರತವೇ ಒಂದು ದೇವಮಂದಿರವಾಗಿದ್ದು, ಇಲ್ಲಿ ಜನಿಸಿದ ಪ್ರತಿಯೊಬ್ಬರೂ ದೇವಸ್ವರೂಪರು ಎಂದರು.
ಮಾನವ ಶರೀರವನ್ನು ಶರಣರು ಪ್ರಸಾದಕಾಯ ಎಂದು ಕರೆದಿದ್ದಾರೆ. ಈ ಶರೀರ ಕೇವಲ ಐಹಿಕ ಸುಖ, ಸಂಪತ್ತು ಹಾಗೂ ಸಂಸಾರಕ್ಕಾಗಿ ದೊರೆತದ್ದಲ್ಲ. ನಾನು ಯಾರು? ಎಂಬ ಆತ್ಮವಿಚಾರ ಮಾಡುತ್ತಾ ನಿತ್ಯ, ಅನಿತ್ಯದ ವಿವೇಕ ಬೆಳೆಸಿಕೊಂಡು ಜ್ಞಾನ ಸಂಪಾದಿಸಬೇಕು. ಸದ್ಗುರುವಿನ ಮಾರ್ಗದರ್ಶನದಲ್ಲಿ ನಡೆದಾಗ ಮಾತ್ರ ಬದುಕಿನ ನಿಜವಾದ ಉದ್ದೇಶ ಅರಿವಾಗುತ್ತದೆ ಎಂದು ಹೇಳಿದರು.
ಹುಟ್ಟು ಮತ್ತು ಸಾವಿನ ನಡುವೆ ದೊರೆತಿರುವ ಬದುಕು ಶಾಶ್ವತವಲ್ಲ. ಹಣ, ಅಧಿಕಾರ, ಸ್ಥಾನಮಾನ ಯಾವುದೂ ನಮ್ಮೊಂದಿಗೆ ಬರುವುದಿಲ್ಲ. ಆದರೆ ಜ್ಞಾನ, ಸತ್ಕಾರ್ಯ ಹಾಗೂ ಸಮಾಜಕ್ಕೆ ನೀಡಿದ ಕೊಡುಗೆ ಶಾಶ್ವತವಾಗಿ ಉಳಿಯುತ್ತದೆ. ಬಸವಣ್ಣ, ಅಂಬಿಗರ ಚೌಡಯ್ಯ, ಅಕ್ಕಮಹಾದೇವಿ ಸೇರಿ ಶರಣರು ತಮ್ಮ ಬದುಕಿನ ಮೂಲಕ ಸಮಾಜಕ್ಕೆ ಬೆಳಕಾಗಿದ್ದು, ಅವರ ವಚನಗಳು ಇಂದಿಗೂ ಜನರಿಗೆ ದಾರಿದೀಪವಾಗಿವೆ ಎಂದು ತಿಳಿಸಿದರು.
ಶ್ರಾವಣ ಮಾಸದಲ್ಲಿ ಕೇಳಿದ ಜ್ಞಾನವನ್ನು ಕೇವಲ ಕೇಳುವುದಕ್ಕೆ ಸೀಮಿತಗೊಳಿಸದೆ, ಮನನ ಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹೊರಗಿನ ದೀಪ ಹಚ್ಚುವುದಕ್ಕಿಂತ ಮನಸ್ಸು, ಬುದ್ಧಿ ಮತ್ತು ಹೃದಯದಲ್ಲಿ ಜ್ಞಾನದ ದೀಪ ಬೆಳಗಿಸಿಕೊಳ್ಳುವುದು ಮುಖ್ಯ ಎಂದು ತಿಳಿಸಿದರು.
ಹುಲ್ಯಾಳದ ಶರಣ ಮಲ್ಲೇಶ ಶರಣರು ಪ್ರವಚನ ನೀಡಿದರು. ಪುಟ್ಟ ಬಾಲಕಿ ಆತ್ಮಾ ತೇಲಸಂಗ ಪ್ರಾರ್ಥಿಸಿದರು. ಶಿಕ್ಷಕ ಎಂ.ಡಿ. ತೇಲಸಂಗ ಸ್ವಾಗತಿಸಿದರು. ಶಿಕ್ಷಕ ಅಪ್ಪು ಅಂಬಿ ನಿರೂಪಿಸಿದರು.