ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ 
ರಾಜ್ಯ

ಸ್ವಯಂ ಗಣತಿಗೂ ಅವಕಾಶ, ಮೊದಲ ಬಾರಿಗೆ ಡಿಜಿಟಲ್​ ಬಳಕೆ

ಜಯತೀರ್ಥ ಪಾಟೀಲ

ಪ್ರಮುಖ ಮುಖ್ಯಾಂಶಗಳು

  • ಏಪ್ರಿಲ್​ 15ರಿಂದ ಮೇ15ರವರೆಗೆ ಜನಗಣತಿ
ಕಲಬುರಗಿ: ಭಾರತ ಜನಗಣತಿ&2027ರ ಸಿದ್ಧತೆ ಭಾಗವಾಗಿ ರಾಜ್ಯದಲ್ಲಿ ಜನಗಣತಿ ಕಾರ್ಯಕ್ಕೆ ಪೂರ್ವಸಿದ್ದತೆ ಹಂತ, ಹಂತವಾಗಿ ಕೈಗೊಳ್ಳಲಾಗುತ್ತಿದ್ದು, ಮೊದಲ ಹಂತವಾಗಿ ಮನೆಪಟ್ಟಿ ಮತ್ತು ಗೃಹ ಗಣತಿ ಕಾರ್ಯ ಏಪ್ರಿಲ್​ 16 ರಿಂದ ಮೇ 15ರವರೆಗೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್​ ತಿಳಿಸಿದ್ದಾರೆ.
ಮನೆ ಮನೆ ಗಣತಿ ಕಾರ್ಯಕ್ಕೂ ಮುನ್ನ ಏಪ್ರಿಲ್​ 1 ರಿಂದ 15ರವರೆಗೆ ಜಿಲ್ಲೆಯ ನಾಗರಿಕರಿಗೆ ಸ್ವಯಂ&ಗಣತಿ ಮಾಡಲು ಅವಕಾಶ ನೀಡಲಾಗಿದೆ. ಎರಡನೇ ಹಂತವಾಗಿ ಜನಸಂಖ್ಯೆ ಗಣತಿ ಕಾರ್ಯ 2027 ಫೆಬ್ರವರಿಯಲ್ಲಿ ನಡೆಯಲಿದೆ ಎಂದು ಹೇಳಿದ್ದಾರೆ.
ಜನಗಣತಿ ಎಂದರೆ ದೇಶದಲ್ಲಿರುವ ಪ್ರತಿಯೊಂದು ಮನೆ ಮತ್ತು ಪ್ರತಿಯೊಬ್ಬ ವ್ಯಕ್ತಿಯ ಕುರಿತು ಜನಸಂಖ್ಯೆ, ಸಾಮಾಜಿಕ ಮತ್ತು ಆರ್ಥಿಕ ಮಾಹಿತಿ ಸಂಗ್ರಹಿಸುವ ಅಧಿಕೃತ ಪ್ರಕ್ರಿಯೆ. ಈ ಜನಗಣತಿಯಲ್ಲಿ ಮೊದಲ ಬಾರಿಗೆ ಡಿಜಿಟಲ್​ ತಂತ್ರಾನ ವ್ಯಾಪಕವಾಗಿ ಬಳಸಲಾಗುತ್ತದೆ. ಗಣತಿಗಾರರು ಮೊಬೈಲ್​ ಆ್ಯಪ್​ ಮೂಲಕ ಮಾಹಿತಿ ಸಂಗ್ರಹಿಸಲಿದ್ದಾರೆ. ನಾಗರಿಕರು ವೆಬ್​ ಪೋರ್ಟಲ್​ ಮೂಲಕ ಸ್ವಯಂ ಮಾಹಿತಿ ಸಲ್ಲಿಸುವ ವ್ಯವಸ್ಥೆಯೂ ಇರಲಿದೆ. ಗಣತಿಯಲ್ಲಿ ಸಂಗ್ರಹವಾಗುವ ಮಾಹಿತಿಗೆ ಭದ್ರತೆ ನೀಡಲು ಬಹು ಹಂತದ ಸುರತಾ ವ್ಯವಸ್ಥೆ ಕಲ್ಪಿಸಲಾಗಿದೆ.
ಜನಗಣತಿ ಕಾರ್ಯವು ದೇಶದ ಅಭಿವೃದ್ಧಿ ಯೋಜನೆ, ನೀತಿ&ನಿರೂಪಣೆ, ಕಲ್ಯಾಣ ಕಾರ್ಯಕ್ರಮ ಮತ್ತು ಆಡಳಿತಾತ್ಮಕ ಯೋಜನೆಗಳ ರೂಪುರೇಷೆ ತಯಾರಿಸಲು ಅತ್ಯಂತ ಮಹತ್ವದ್ದಾಗೊದೆ. ಸಾರ್ವಜನಿಕರು ಗಣತಿಗಾರರಿಗೆ ಸಹಕರಿಸುವ ಮೂಲಕ ಜನಗಣತಿ&2027 ಕಾರ್ಯ ಯಶಸ್ವಿಗೊಳಿಸಬೇಕು ಎಂದು ತರನ್ನುಮ್​ ಜನತೆಯಲ್ಲಿ ಮನವಿ ಮಾಡಿದ್ದಾರೆ