ಸವದತ್ತಿಯಲ್ಲಿ ಜರುಗಿದ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಉಮೇಶ ಬಾಳಿ, ಡಾ.ಎನ್.ಆರ್.ಸವತಿಕರ, ಡಾ.ಶರಣಮ್ಮ ಗೊರೆಬಾಳ ಇತರರಿದ್ದರು.
ವಿಜಯವಾಣಿ ಸುದ್ದಿಜಾಲ ಸವದತ್ತಿ
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವಜನತೆ ಆತ್ಮವಿಶ್ವಾಸ, ಶಿಸ್ತು ಹಾಗೂ ನಿರಂತರ ಪರಿಶ್ರಮದೊಂದಿಗೆ ಮುನ್ನಡೆಯಬೇಕು ಎಂದು ಕೆಎಲ್‌ಇ ಸಂಸ್ಥೆ ಸ್ಥಳೀಯ ಆಡಳಿತ ಮಂಡಳಿ ಸದಸ್ಯ ಉಮೇಶ ಬಾಳಿ ಹೇಳಿದರು.
ನಗರದ ಕೆಎಲ್‌ಇ ಸಂಸ್ಥೆಯ ಎಸ್.ವಿ.ಎಸ್.ಬೆಳ್ಳುಬ್ಬಿ ಕಾಲೇಜಿನಲ್ಲಿ ಮಂಗಳವಾರ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಯುವಜನರು ಕೇವಲ ಪಠ್ಯಕ್ಕೆ ಸೀಮಿತರಾಗದೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಹಾಗೂ ವ್ಯಕ್ತಿತ್ವ ವಿಕಸನಕ್ಕೂ ಆದ್ಯತೆ ನೀಡಬೇಕು. ಕಾಲೇಜು ಜೀವನದಲ್ಲಿ ಬೆಳೆಸಿಕೊಳ್ಳುವ ಸಂಸ್ಕಾರ, ಜ್ಞಾನ ಮತ್ತು ಶಿಸ್ತು ಭವಿಷ್ಯದ ಬದುಕಿಗೆ ಭದ್ರ ಅಡಿಪಾಯವಾಗುತ್ತದೆ ಎಂದರು.
ಧಾರವಾಡದ ವಿದ್ಯಾರಣ್ಯ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯೆ ಡಾ.ಶರಣಮ್ಮ ಗೊರೆಬಾಳ ಮಾತನಾಡಿ, ವಿದ್ಯಾರ್ಥಿಗಳ ಸಾಧನೆಗೆ ಬಡತನ, ಭಾಷೆ ಅಥವಾ ಪರಿಸ್ಥಿತಿ ಅಡ್ಡಿಯಾಗುವುದಿಲ್ಲ. ಸತತ ಪ್ರಯತ್ನವೇ ಸಾಧನೆಯ ಮಾರ್ಗವಾಗಿದೆ ಎಂದರು.
ಶೈಕ್ಷಣಿಕ, ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ಹಾಗೂ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರವಿ ಹೊಳೆಯಣ್ಣವರ, ಮಧು ಶಿರಕೋಳ, ಸಹನಾ ಬಾರ್ಕಿ ಹಾಗೂ ಜಾವೇದ್ ನದಾಫ್ ಅತ್ಯುತ್ತಮ ವಿದ್ಯಾರ್ಥಿ ಪುರಸ್ಕಾರ ಪಡೆದರು.
ಯೂನಿವರ್ಸಿಟಿ ಬ್ಲೂ ಆಯ್ಕೆಯಾದ ಜಾವೇದ್ ನದಾಫ್, ಸರಸ್ವತಿ ಮಾದರ, ವಿಜಯ ಗಳಗಿನ, ನಾಗರಾಜ ಗುಡಗಾರ, ಲಕ್ಷ್ಮೀ ದೇಸಾಯಿ, ಪುಷ್ಪಾ ವಟ್ನಾಳ ಹಾಗೂ ಪ್ರಿಯಾಂಕಾ ಭೋವಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿದ್ದ ಚೈತ್ರಾ ಶೆಟ್ಟೆಪ್ಪನವರ ಹಾಗೂ ಜ್ಯೋತಿ ಬಾನಿ ಅವರನ್ನು ಸತ್ಕರಿಸಲಾಯಿತು.
ಡಾ.ಎನ್.ಆರ್.ಸವತಿಕರ, ಡಾ.ಎ.ಎ.ಬದಾಮಿ, ಪ್ರೊ.ಶಿವಾನಂದ ಹೊಳಿ, ಕಿರಣ ಲಮಾಣಿ, ಪ್ರೊ.ವಿ.ಎಸ್.ಮೀಸಿ, ಡಾ.ಎನ್.ಎ.ಕೌಜಗೇರಿ, ಜೆ.ಎ.ಹಳ್ಳೂರ, ಪ್ರೊ.ಕೆ.ರಾಮರಡ್ಡಿ, ಪಿ.ಎ್.ಹಾದಿಮನಿ, ಸ್ನೇಹಾ ಗಂಗಲ, ಭಾಗ್ಯಶ್ರೀ ಪೋಲೇಶಿ, ಐಶ್ವರ್ಯಾ ಗುಡೆನ್ನವರ ಇತರರಿದ್ದರು.