Seek the help of Ayurvedic treatment.
ಮುಳಬಾಗಿಲು: ಮಕ್ಕಳ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿಗೆ ಶಿಕ್ಷಕರು, ಪಾಲಕರು ಮತ್ತು ಸಮಾಜದ ಸಹಭಾಗಿತ್ವ ಅಗತ್ಯ ಎಂದು ಅಂಬ್ಲಿಕಲ್ ಆಯುಷ್ ಇಲಾಖೆಯ ವೈದ್ಯಾಧಿಕಾರಿ ಡಾ.ವಿನುತಾ ತಿಳಿಸಿದರು.
ಡಿವಿಜಿ ಶಾಲೆಯಲ್ಲಿ ಜಿಲ್ಲಾಡಳಿತ, ಜಿಪಂ, ಆಯುಷ್ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶಾಲಾ ಆರೋಗ್ಯ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಸ್ತುತ ಶಾಲಾ ಮಕ್ಕಳಲ್ಲಿ ಜ್ಞಾಪಕಶಕ್ತಿ ಕುಂಠಿತವಾಗುವುದು, ಆಯಾಸ, ಶೀತ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಸಮತೋಲನ ಆಹಾರ, ಉತ್ತಮ ಜೀವನಶೈಲಿ ಜತೆಗೆ ಅಗತ್ಯವಿದ್ದಾಗ ಆಯುರ್ವೇದ ಚಿಕಿತ್ಸೆಯ ನೆರವು ಪಡೆಯುವುದರಿಂದ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದರು.
ಮುಖ್ಯಶಿಕ್ಷಕ ಸಿ.ಸೊಣ್ಣಪ್ಪ ಮಾತನಾಡಿ, ಒತ್ತಡವಿಲ್ಲದೆ ಸುಖನಿದ್ರೆ ಮಾಡುವ ಜತೆಗೆ ದೇಹದ ದೈನಂದಿನ ಕ್ರಿಯೆಗಳು ಸುಗಮವಾಗಿ ನಡೆಯುವ ವ್ಯಕ್ತಿಯೇ ನಿಜವಾದ ಆರೋಗ್ಯವಂತ ಎಂದರು.
ಪ್ರತಿವಿದ್ಯಾರ್ಥಿಯೂ ಶಾಲಾ ಹಂತದಲ್ಲಿಯೇ ಔಷಧೀಯ ಸಸ್ಯಗಳ ಮಹತ್ವ ಅರಿತು ಬೆಳೆಸುವ ಅಭ್ಯಾಸ ರೂಢಿಸಿಕೊಳ್ಳಬೇಕು. ಕನಿಷ್ಠ ತಮ್ಮ ಮನೆಯ ಮುಂದೆ ತುಳಸಿ ಸೇರಿ ಔಷಧೀಯ ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆಯ ಮನೋಭಾವ ಬೆಳೆಸಿಕೊಳ್ಳಬೇಕು. ಇಂತಹ ಅಭ್ಯಾಸ ಮಕ್ಕಳಲ್ಲಿ ಪರಿಸರದ ಕಾಳಜಿ ಮೂಡಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಔಷಧೀಯ ಸಸ್ಯಗಳು, ಗಿಡಮೂಲಿಕೆ, ಆಯುರ್ವೇದ ಔಷಧ ತಯಾರಿಕೆ ಮತ್ತು ಬಳಕೆಯ ಮಾಹಿತಿ ನೀಡಲಾಯಿತು. ಈ ವೇಳೆ ಶಾಲಾ ಆವರಣದಲ್ಲಿ ವಿವಿಧ ಔಷಧೀಯ ಸಸಿಗಳನ್ನು ನೆಡಲಾಯಿತು.
ಮುಖ್ಯಶಿಕ್ಷಕ ಸಿ.ಸೊಣ್ಣಪ್ಪ, ಯುನಾನಿ ಮುಖ್ಯ ವೈದ್ಯಾಧಿಕಾರಿ ರಹಮತುಲ್ಲಾ, ಹಿರಿಯ ಶಿಕ್ಷಕಿ ಎಸ್.ಕೆ.ಪದ್ಮಾವತಿ, ಶಿಕ್ಷಕಿಯರಾದ ಪಾರ್ವತಮ್ಮ, ಶಾರದಾ, ಕವಿತಾ, ಭಾಗ್ಯಮ್ಮ, ಪದ್ಮಾವತಿ, ಸಲ್ಮಾ, ರಾಧಮ್ಮ ಇದ್ದರು.