ಕೃಷಿ ಮೇಳದಲ್ಲಿ ಬೀಜ ಘಟಕದ ಅಧಿಕಾರಿ ಡಾ.ಅರಣ್‌ಕುಮಾರ್ ಹೊಸಮನಿ, ರೈತರಿಗೆ ಬೀಜ ಉತ್ಪಾದನೆ ಬಗ್ಗೆ ಮಾಹಿತಿ ನೀಡಿದರು.
- ದ್ವಿದಳ, ಎಣ್ಣೆಕಾಳುಗಳ ಬಗ್ಗೆ ಜಾಗೃತಿ
- ಒಂದು ಲಕ್ಷ ರೈತರಿಗೆ ಸಮಗ್ರ ಮಾಹಿತಿ
ರಾಯಚೂರು: ರಾಯಚೂರು ಜಿಲ್ಲಾ ಉತ್ಸವ ನಿಮಿತ್ತ ಕೃಷಿ ವಿಜ್ಞಾನಗಳ ವಿವಿ ಆವರಣದಲ್ಲಿ ಆಯೋಜಿಸಿದ್ದ ಬೀಜ ಘಟಕ ಸ್ಟಾಲ್ ರೈತರ ಗಮನ ಸೆಳೆಯಿತು. ಬಿತ್ತನೆ ಬೀಜ, ಎಣ್ಣೆಕಾಳು ಸೇರಿ ವಿವಿಧ ಬೀಜಗಳ ಬಗ್ಗೆ ರೈತರಿಗೆ ಮಾಹಿತಿ ನೀಡಲಾಯಿತು.
ರಾಯಚೂರು ಕೃಷಿ ವಿವಿ ಬೀಜ ಘಟಕದ ವಿಶೇಷಾಧಿಕಾರಿ ಡಾ.ಅರುಣ್‌ಕುಮಾರ ಹೊಸಮನಿ, ರೈತರಿಗೆ ಬಿತ್ತನೆ ಬೀಜಗಳ ಬಗ್ಗೆ ವೈಜ್ಞಾನಿಕ ಮಾಹಿತಿ ನೀಡಿದರು. ಏಕದಳ, ದ್ವಿದಳ, ಎಣ್ಣೆಕಾಳುಗಳು, ಮೇವಿನ ಬೀಜಗಳು ಪ್ರತಿ ಜಮೀನಿಗೆ ಅಗತ್ಯವಾಗಿದೆ. ರೈತರು ಏಕಮುಖ ಬೆಳೆಗಳಿಗೆ ಮಾರುಹೋಗದೆ, ಬಹುಮುಖ, ಬಿತ್ತನೆ ಬೀಜಗಳನ್ನು ಬೆಳೆಯಬೇಕು. ಮೂರು ದಿನಗಳ ಕೃಷಿ ಮೇಳದ ಮಳಿಗೆಗೆ ನಿತ್ಯ 30 ಸಾವಿರದಂತೆ ಸುಮಾರು ಒಂದು ಲಕ್ಷ ಜನರು ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.
ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಬೀಜ ಘಟಕ ಸ್ಥಾಪನೆ ಮಾಡಿ ಬೀಜ ಉತ್ಪಾದನೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ದ್ವಿದಳ ಧಾನ್ಯಗಳು, ಎಣ್ಣೆಕಾಳುಗಳಿಗೆ ಭಾರಿ ಬೇಡಿಕೆಯಿದೆ. ಹೀಗಾಗಿ ರೈತರು ಬಿತ್ತನೆ ಬೀಜ ಖರೀದಿ ಮಾಡದೇ ತಮ್ಮ ಜಮೀನನಲ್ಲಿ ಬೆಳೆಯಬೇಕು. ಆ ಮೂಲಕ ಸ್ವಾವಲಂಬನೆ ಬೀಜ ಉತ್ಪಾದನೆ ಜತೆಗೆ ಬೇರೆ ರೈತರಿಗೆ ಮಾರಾಟ ಮಾಡಿ ಆದಾಯ ಪಡೆಯಬಹುದು ಎಂದರು.
ದ್ವಿದಳ ಧಾನ್ಯಗಳಲ್ಲಿ ಕಡಲೆ, ಹೆಸರು, ಉದ್ದು, ತೊಗರಿ ಸೇರಿ ವಿವಿಧ ತಳಿ ಒಳಗೊಂಡಿವೆ. ಕೃಷಿ ಸಂಶೋಧನಾ ಕೇಂದ್ರದ ಬೀಜ ಘಟಕದಿಂದ ಈ ವರ್ಷ ಮೂರು ಹೊಸತಳಿ ಪರಿಚಯಿಸಿದೆ. ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಪಡೆಯಬಹುದು. ಏಕದಳ, ಸಿರಿಧಾನ್ಯ ಬೆಳೆ ಬಗ್ಗೆಯೂ ಮಾಹಿತಿ ನೀಡಲಾಯಿತು.
ಎಣ್ಣೆಕಾಳು ಬೀಜಗಳಾದ ಕುಸುಬೆ, ಎಳ್ಳು, ಸೂರ್ಯಕಾಂತಿ ಸೇರಿ ಹೊಸತಳಿಯ ಬಿತ್ತನೆ ಬೀಜಗಳ ಬಗ್ಗೆ ಸಮಗ್ರ ಮಾಹಿತಿ ಒದಗಿಸಲಾಯಿತು. ರೈತರು ಬೆಳೆಗಳ ಜತೆ ಬದುಗಳಲ್ಲಿ ಮೇವಿನಬೀಜ ಹಾಕಬೇಕು ಎಂದು ಜಾಗೃತಿ ಮೂಡಿಸಲಾಯಿತು.
ಎರಡು ಯೋಜನೆ: ರೈತರು ಬೀಜ ಉತ್ಪಾದನೆ ಮಾಡಲು ಬೀಜಘಟಕ ಸಹಾಯಧನ ನೀಡಲಿದೆ. ಬೀಜಗ್ರಾಮ ಯೋಜನೆ, ಬೀಜದಿನೋತ್ಸವ ಕಾರ್ಯಕ್ರಮ ವರ್ಷದಲ್ಲಿ ಎರಡು ಬಾರಿ ಹಾಕಿಕೊಳ್ಳಲಾಗುತ್ತಿದೆ. ರೈತರು ಅರ್ಜಿ ಸಲ್ಲಿಸಿದರೆ ಶೇ.60 ಬೆಲೆ ನೀಡಿದರೆ ಶೇ.40 ಇಲಾಖೆಯಿಂದ ರಿಯಾಯಿತಿ ದೊರೆಯಲಿದೆ.
ಮೇ 25ರಂದು ಮುಂಗಾರು, ಸೆ.25ರಂದು ಹಿಂಗಾರು ಬೀಜೋತ್ಸವ ಕಾರ್ಯಕ್ರಮ ಮಾಡಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಸಬ್ಸಿಡಿ ದೊರೆಯಲಿದೆ. ಕಡಲೆ, ಹೆಸರು, ಉದ್ದು, ಎಳ್ಳು, ಶೇಂಗಾ, ಕುಸುಬೆ, ಜೋಳ, ಹೆಸರು, ತೊಗರಿ, ಸೋಯಾಬಿನ್, ಸೂರ್ಯಕಾಂತಿ, ಸಜ್ಜೆ ಸೇರಿ 21ವಿವಿಧ ಬೀಜಗಳ ಬಗ್ಗೆ ಮಾಹಿತಿ ನೀಡಲಾಯಿತು.
ಮೂರು ದಿನಗಳ ಉತ್ಸವದಲ್ಲಿ ಸುಮಾರು ಒಂದು ಲಕ್ಷ ಜನರಿಗೆ ಬಿತ್ತನೆ ಬೀಜ ಉತ್ಪಾದನೆ ಬಗ್ಗೆ ಮಾಹಿತಿ ನೀಡಲಾಗಿದೆ. ರೈತರಿಂದ ಉತ್ತಮ ಸ್ಪಂದನೆ ದೊರೆತ್ತಿದ್ದು ಬೀಜೋತ್ಪಾದನೆ ಮಾಡಲು ಮುಂದೆ ಬಂದಿದ್ದಾರೆ. ರೈತರು ಬೀಜದಲ್ಲಿ ಬೇರೊಬ್ಬರನ್ನು ಅವಲಂಬಿಸದೆ ತಾವೇ ಬೆಳೆದು ಸ್ವಾವಲಂಬಿಯಾಗಬೇಕು ಎನ್ನುವುದು ಬೀಜ ಘಟಕದ ಉದ್ದೇಶ.